ಹಿಂದಿನ ಅರಹತೊಳಲು ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ವೆಂಕಟೇಶ ಮೂರ್ತಿ ಬಿನ್ ಚನ್ನಕೇಶ್ವಯ್ಯ ಮತ್ತು ಆಗಿನ ಅಧ್ಯಕ್ಷೆ ಲಕ್ಷ್ಮೀಬಾಯಿ ಅವರ ವಿರುದ್ಧ ಸರ್ಕಾರ ಬಿಡುಗಡೆ ಮಾಡಿದ ಹಣದ ದುರುಪಯೋಗ ಆರೋಪದ ಅಡಿ ಎಫ್ಐಆರ್ ದಾಖಲಾಗಿದೆ.
ಅಧ್ಯಕ್ಷರು ಮತ್ತು ಪಿಡಿಒ ಅರಹತೊಳಲು ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡಲಾದ ಅನುದಾನದ ಒಟ್ಟು ಮೊತ್ತ ರೂ 25.72 ಲಕ್ಷಗಳನ್ನು ನಿರ್ದಿಷ್ಟ ಉದ್ದೇಶಗಳಿಗೆ ಬಳಸದೇ ಸರ್ಕಾರದ ಅನುದಾನವನ್ನು ಸ್ಥಾನ ಪಲ್ಲಟ ಮಾಡಿ ಹಣ ದುರ್ಬಳಕೆ ಮಾಡಿರುವ ಬಗ್ಗೆ ನಡೆಸಿದ ಪರಿಶೀಲನೆಯಲ್ಲಿ ವ್ಯತ್ಯಾಸಗಳು ಕಂಡು ಬಂದಿದೆ.
1) 2022-23 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಮೃತ ಸರೋವರ ಅಭಿವೃದ್ಧಿ ಕಾಮಗಾರಿ ಅನುದಾನ ಮೊತ್ತ ರೂ 10.00 ಲಕ್ಷಗಳು ಗ್ರಾಮ ಪಂಚಾಯಿತಿ ವರ್ಗ-01 ರ ಉಳಿತಾಯ ಖಾತೆಗೆ ಜಮೆಯಾದ ಅನುದಾನವನ್ನು ಗ್ರಾಮ ಪಂಚಾಯಿತಿಯ ದಿನನಿತ್ಯದ ನಿರ್ವಹಣಾ ವೆಚ್ಚಗಳಿಗೆ ಬಳಕೆ ಮಾಡಲಾಗಿದೆ.
2) 2022-23 ನೇ ಸಾಲಿನ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯ್ದೆ 2013 ರ ಅಡಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಅನುದಾನ 11.00 ಲಕ್ಷಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅನುದಾನದ ಉಳಿತಾಯ ಖಾಯೆಗೆ ಜಮೆಯಾದ ಅನುದಾನವನ್ನು ಅಮೃತ ಸರೋವರ ಕಾಮಗಾರಿಗೆ ಬಳಕೆ ಮಾಡಲಾಗಿದೆ.
3) 2022-23 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶೌಚಾಲಯ ನಿರ್ಮಾಣ ಕಾಮಗಾರಿ ಅನುದಾನ ರೂ 4.28 ಲಕ್ಷಗಳು ಗ್ರಾಮ ಪಂಚಾಯಿತಿ ವರ್ಗ-1 ರ ಉಳಿತಾಯ ಖಾತೆಗೆ ಜಮೆಯಾದ ಅನುದಾನವನ್ನು ಅಭಿವೃದ್ಧಿ ಅನುದಾನದ ಉಳಿತಾಯ ಖಾತೆಗೆ ವರ್ಗಾವಣೆ ಮಾಡಲಾಗಿರುತ್ತದೆ.
4) 2022-23 ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮದಡಿ ಅಂಗನವಾಡಿ ಕಟ್ಟಡಗಳ ನಿರ್ವಹಣೆ ಅನುದಾನ ರೂ 0.48 ಲಕ್ಷಗಳು ಗ್ರಾಮ ಪಂಚಾಯಿತಿ ವರ್ಗ-1 ರ ಉಳಿತಾಯ ಖಾತೆಗೆ ಜಮೆಯಾದ ಅನುದಾನವನ್ನು ಅಭಿವೃದ್ಧಿ ಅನುದಾನದ ಉಳಿತಾಯ ಖಾತೆಗೆ ವರ್ಗಾವಣೆ ಮಾಡಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಭಾಗಿಯಾಗಿರುವ ಮೇಲ್ಕಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ವೆಂಕಟೇಶ ಮೂರ್ತಿ ಮತ್ತು ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀಬಾಯಿ ಕೋಂ ಮಂಜ್ಯಾನಾಯ್ಕ ವಡ್ಡರಹಟ್ಟಿ ಗ್ರಾಮ ಅರಹತೊಳಲು ಅಂಚೆ ಭದ್ರಾವತಿ ತಾಲ್ಲೂಕ್ ಇವರುಗಳ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮವಹಿಸುವಂತೆ ಭದ್ರಾವತಿ ತಾಲೂಕು ಪಂಚಾಯಿತಿ ಇಒ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
إرسال تعليق