ಗೋ ಮಾತೆಯ ಹೆಸರು ಹೇಳುತ್ತಿರುವ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಅಧಿಕಾರದಲ್ಲಿದ್ದ ಕಾಲದಲ್ಲಿ ಎಷ್ಟು ಗೋ ಶಾಲೆಗಳನ್ನು ತೆರೆದಿದ್ದಾರೆ ಎಂದು ಪ್ರಕಟಿಸಲಿ ಎಂದು ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ಸವಾಲು ಹಾಕಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಾಮರಾಜಪೇಟೆಯಲ್ಲಿ ನಡೆದ ಘಟನೆ ಖಂಡನೀಯವಾಗಿದೆ. ಗೋ ಮಾತೆಯ ಕೆಚ್ಚಲು ಕತ್ತರಿಸಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನಾವು ಕೂಡ ಒತ್ತಾಯಿಸುತ್ತೇವೆ. ನಾವೆಲ್ಲರೂ ಗೋಮಾತೆಯನ್ನು ಪೂಜಿಸುತ್ತಲೇ ಬಂದವರು. ಆದರೆ, ಶಾಸಕ ಚನ್ನಬಸಪ್ಪ ಅವರು ಇದೇ ವಿಷಯವನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚನ್ನಬಸಪ್ಪ ಅವರಿಗೆ ನಾಲಿಗೆಯಲ್ಲಿ ಹಿಡಿತವಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕೆಟ್ಟ ಶಬ್ಧಗಳನ್ನು ಬಳಸಿದ್ದಾರೆ. ನಾವು ಕೂಡ ಆ ಶಬ್ದವನ್ನು ಬಳಸಬಹುದು. ಆದರೆ, ನಾವು ಬಳಸುವುದಿಲ್ಲ. ಈ ಎಕ್ಸ್.ವೈ.ಝಡ್. ಶಬ್ಧ ಬಳಸಿದ ಮಹಾನುಭಾವರಾದ ಶಾಸಕರು ಅವರ ಕಾಲದಲ್ಲಿ ಗೋ ಉಳಿಸಲು ಏನು ಕ್ರಮ ಕೈಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಲಿ ಎಂದರು.
ಮಹಾನಗರ ಪಾಲಿಕೆಯಲ್ಲಿ ಅವರು ಅಧಿಕಾರದಲ್ಲಿದ್ದಾಗ 50 ಲಕ್ಷ ರೂ.ಗಳನ್ನು ಗೋಶಾಲೆ ತೆರೆಯಲೆಂದೇ ಮೀಸಲಾಗಿಡಲಾಗಿತ್ತು. ಆದರೆ, ಒಂದೂ ಗೋಶಾಲೆಯನ್ನೂ ಅವರು ತೆರೆಯಲಿಲ್ಲ. ವಿರೋಧ ಪಕ್ಷದಲ್ಲಿದ್ದ ನಾವು ಆಗ ಗೋವಿನ ಚಿತ್ರವನ್ನಿಟ್ಟುಕೊಂಡು ನನ್ನ ಹೆಸರಲ್ಲಿಟ್ಟ ಹಣ ಎಲ್ಲಿ ಎಂದು ಗೋವು ಕೇಳಿದಂತೆ ಪ್ರತಿಭಟನೆ ಮಾಡಿದ್ದೆವು. ಆದರೂ ಕೂಡ ಗೋ ಮಾತೆ ಪ್ರಿಯರಾದ ಶಾಸಕರು ಏನನ್ನೂ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.
ಹೊಸನಗರದಲ್ಲಿ ಹರತಾಳು ಹಾಲಪ್ಪನವರು ಗೋಶಾಲೆಯೊಂದನ್ನು ತೆರೆದಿದ್ದರು. ಈಗ ಅದು ಮುಚ್ಚಿ ಹೋಯಿತು. ಗೋವುಗಳೇ ಅಲ್ಲಿಗೆ ಬರಲಿಲ್ಲ. ಮತ್ತೊಂದು ಕಡೆ ಈಶ್ವರಪ್ಪನವರು ಉಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಗೋಶಾಲೆಗಾಗಿ ಏನು ಮಾಡಿದ್ದಾರೆ. ಹಾಗೆ ನೋಡಿದರೆ ಹೆಚ್.ಎಂ. ಚಂದ್ರಶೇಖರಪ್ಪ ಅವರು ಶಾಸಕರಾಗಿದ್ದಾಗ ಶಿವಮೊಗ್ಗದಲ್ಲಿ ಗೋಶಾಲೆ ತೆರೆಯಲಾಗಿತ್ತು. ಮತ್ತು ಕೆ.ಬಿ. ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದಾಗ ಕೂಡ ಗೋಶಾಲೆ ತೆರೆಯಲಾಗಿತ್ತು. ಬಿಜೆಪಿಯವರು ಏನನ್ನೂ ಮಾಡಿಲ್ಲ ಎಂದು ದೂರಿದರು.
ಚನ್ನಬಸಪ್ಪ ಅವರು ಪಶು ವೈದ್ಯ ಇಲಾಖೆಯಿಂದ ಯಾವ ಕೆಲಸವೂ ಆಗುತ್ತಿಲ್ಲ ಎಂದು ದೂರಿದ್ದಾರೆ. ಆದರೆ, ರಾಜ್ಯ ಸರ್ಕಾರದ ಪಶು ಸಂಗೋಪನಾ ಇಲಾಖೆಯಿಂದ 30 ಅಂಶದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲಿವೆ. ಈಗಿನ ಶಾಸಕರು ಎಂದಾದರೂ ಪಶು ಸಂಗೋಪನಾ ಇಲಾಖೆಗೆ ಹೋಗಿದ್ದಾರಾ? ಅವರಿಗೆ ಏನಾದರೂ ಮಾಹಿತಿ ಗೊತ್ತಿದೆಯೇ? ಯಾರೋ ಒಬ್ಬರು ತಪ್ಪು ಮಾಡಿದ್ದಾರೆ ಎಂದು ರಾಜಕಾರಣಕ್ಕೆ ಅದನ್ನು ಬಳಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಈಗಾಗಲೇ ಕೆಚ್ಚಲು ಕೊಯ್ದ ಆರೋಪಿಯನ್ನು ಬಂಧಿಸಲಾಗಿದೆ. ನಾವು ಕೂಡ ಅವನಿಗೆ ಕಠಿಣ ಶಿಕ್ಷೆ ಕೊಡಿ ಎಂದು ಆಗ್ರಹಿಸುತ್ತೇವೆ ಎಂದರು.
ಮುಖ್ಯವಾಗಿ ಶಾಸಕರು ಮಾತನಾಡುವಾಗ ಎಚ್ಚರಿಕೆ ಇರಬೇಕು. ಸರ್ಕಾರದ ವಿರುದ್ಧ ಕೆಟ್ಟ ಶಬ್ಧ ಬಳಸಬಾರದು. ನಮಗೂ ಗಂಡಸ್ಥನ ಎಂಬ ಪದ ಬಳಸಲು ಬರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ್, ಪ್ರಮುಖರಾದ ಶಿವಕುಮಾರ್, ಕಾಶಿ ವಿಶ್ವನಾಥ್, ಎಸ್.ಪಿ. ಶೇಷಾದ್ರಿ, ಸಿ.ಜಿ. ಮಧುಸೂದನ್, ಕೆ. ಚೇತನ್, ರಂಜಿತ್, ಬಾಲಾಜಿ, ಮುನ್ನ, ನಿರಂಜನ್ ಮುಂತಾದವರಿದ್ದರು.
ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಸಚಿವರ ಬಳಿ ದೂರು
ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದ್ದು, ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಅಧಿಕಾರಿಗಳು ಎಗ್ಗಿಲ್ಲದೇ ಯಾವುದೇ ಕೆಲಸ ಮಾಡಲು ಕೂಡ ಲಂಚ ಕೇಳುತ್ತಿದ್ದಾರೆ. ಸ್ವತಃ ಆಯುಕ್ತರೇ ಲಂಚ ಕೇಳುವಂತೆ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಸಾರ್ವಜನಿಕರ ವಲಯದಿಂದ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆಯ ಸಮಸ್ಯೆಗಳು ಮತ್ತು ಭ್ರಷ್ಟಾಚಾರ, ಅಧಿಕಾರಿಗಳ ವರ್ಗಾವಣೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರ ವಿರುದ್ಧವೇ ಸಚಿವ ಎಂ.ಬಿ. ಪಾಟೀಲ್ ಅವರು ಶಿವಮೊಗ್ಗಕ್ಕೆ ಬಂದಾಗ ದೂರು ನೀಡುತ್ತೇವೆ.
ಹೆಚ್ ಸಿ ಯೋಗೀಶ್
إرسال تعليق