ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲ: ಎಚ್.ಡಿ ದೇವೇಗೌಡ ಸ್ಪಷ್ಟನೆ

 

ಮಂಡ್ಯದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ನಾನೇ ನಿಲ್ಲಬೇಕು ಅಥವಾ ಕುಮಾರಸ್ವಾಮಿ, ನಿಖಿಲ್ ಇಬ್ಬರ ಪೈಕಿ ಒಬ್ಬರು ಸ್ಪರ್ಧೆ ಮಾಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡವರು ಅಪೇಕ್ಷಿಸಿದರು. ನಾನು ಮತ್ತು ನಿಖಿಲ್ ನಿಲ್ಲುವುದಿಲ್ಲ ಎಂದು ಹೇಳಿದ್ದೇವೆ ಎಂದರು.


ಬೆಂಗಳೂರು:  ಲೋಕಸಭಾ ಚುನಾವಣೆ  ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಕರ್ನಾಟಕದಲ್ಲಿನ 28 ಲೋಕಸಭಾ ಕ್ಷೇತ್ರಗಳಲ್ಲಿ 28 ಕ್ಷೇತ್ರವನ್ನೂ ಗೆದ್ದುಕೊಳ್ಳಲು ಬಿಜೆಪಿ – ಜೆಡಿಎಸ್‌ ಮೈತ್ರಿ ಪಕ್ಷಗಳು ರಣತಂತ್ರ ಹೆಣೆಯುತ್ತಿವೆ.

ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಮಂಗಳವಾರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸಭೆಯ ನಂತರ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲ ಎಂದು  ಸ್ಪಷ್ಟಪಡಿಸಿದ್ದಾರೆ.

ಮಂಡ್ಯದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ನಾನೇ ನಿಲ್ಲಬೇಕು ಅಥವಾ ಕುಮಾರಸ್ವಾಮಿ, ನಿಖಿಲ್ ಇಬ್ಬರ ಪೈಕಿ ಒಬ್ಬರು ಸ್ಪರ್ಧೆ ಮಾಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡವರು ಅಪೇಕ್ಷಿಸಿದರು. ನಾನು ಮತ್ತು ನಿಖಿಲ್ ನಿಲ್ಲುವುದಿಲ್ಲ ಎಂದು ಹೇಳಿದ್ದೇವೆ ಎಂದರು.

ಕುಮಾರಸ್ವಾಮಿ ಶಾಸಕಾಂಗ ಪಕ್ಷದ ನಾಯಕರಾಗಿದ್ದು,  ಸದನದ ಒಳ–ಹೊರಗೆ ಹೋರಾಟ ಮಾಡಬೇಕಾಗಿದೆ. ಹೀಗಾಗಿ, ಲೋಕಸಭೆಗೆ ಹೋಗುವೆ ಎಂದು ಅವರು ಹೇಳಿಲ್ಲ, ಹೇಳುವುದೂ ಇಲ್ಲ. ಅವರ ಸ್ಪರ್ಧೆ ಬಗ್ಗೆ ಊಹಾಪೋಹ ಸೃಷ್ಟಿಸಲಾಗಿದೆ. ಇರುವ ವಾಸ್ತವಾಂಶ ಇದು ಎಂದರು.

ಮಂಡ್ಯ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಿಸುತ್ತೇವೆ. ಅಭ್ಯರ್ಥಿ ಬಗ್ಗೆ ತೀರ್ಮಾನ ತೆಗೆದುಕೊಂಡು ಮೈತ್ರಿಕೂಟದ ನಾಯಕರಿಗೆ ವಿಷಯ ತಿಳಿಸುತ್ತೇವೆ. ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ತೀರ್ಮಾನವನ್ನು ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ ಎಂದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ. ಕುಮಾರ ಸ್ವಾಮಿ ಅವರೇ ಕಣಕ್ಕಿಳಿಸಬೇಕು. ಅಥವಾ ನಾನು ಸ್ಪರ್ಧೆ ಮಾಡುವಂತೆ ಕೋರಿದ್ದಾರೆ. ಇಲ್ಲವೇ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ನಾಯಕರು ಪ್ರೀತಿಯಿಂದ ಹೇಳಿದ್ದಾರೆ. ಆದರೆ, ನಾನು‌ ಸ್ಪರ್ಧೆ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ನಿಖಿಲ್ ಸಹ ನಾನು ಸ್ಪರ್ಧೆ ಮಾಡುವುದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ ಎಂದು ಹೇಳಿದ್ದಾರೆ ಎಂಬುದಾಗಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು.

Post a Comment

أحدث أقدم