ಮಾಲೆ/ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಲಕ್ಷದ್ವೀಪ ಭೇಟಿ ಹಾಗೂ ಭಾರತದ ಬಗ್ಗೆ ಕೀಳು ಅಭಿರುಚಿಯ ಅಭಿಪ್ರಾಯ ಹಂಚಿಕೊಂಡ ಮಾಲ್ಡೀವ್ಸ್ ವಿರುದ್ಧ ನಡೆಯಿುತ್ತಿರುವ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಬಾಲಿವುಡ್ ನಟರು, ಕ್ರಿಕೆಟಿಗರು ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಕಂಗನಾ ರಣಾವತ್ ಬಳಿಕ ಇದೀಗ ಸುರೇಶ್ ರೈನಾ ಸಹ ಪ್ರಧಾನಿ ಮೋದಿ ಪರವಾಗಿ ನಿಂತಿದ್ದಾರೆ.
‘‘ನಮ್ಮ ದೇಶದ ದ್ವೀಪ ಪ್ರದೇಶದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಇಂಥ ದ್ವೇಷದ ಮಾತನಾಡುವ ಜನರಿರುವ ಊರಿಗೆ ಹೋಗುವುದೇ ಬೇಡ. ನಮ್ಮ ಬೀಚ್‌ಗಳನ್ನೇ ಪ್ರವಾಸೋದ್ಯಮವಾಗಿ ಬೆಳಸೋಣ. ಲಕ್ಷದ್ವೀಪ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳೋಣ,’’ ಎಂದು ನಟ, ನಟಿಯರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆತ್ಮಗೌರವ ಬಿಟ್ಟುಕೊಡಲು ಸಾಧ್ಯವಿಲ್ಲ
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, ``ಮಾಲ್ಡೀವ್ಸ್‌ನ ಪ್ರಮುಖ ಸಚಿವರು ಭಾರತೀಯರ ಮೇಲೆ ದ್ವೇಷಪೂರಿತ ಮತ್ತು ಜನಾಂಗೀಯ ಟೀಕೆಗಳನ್ನು ರವಾನಿಸಿದ್ದಾರೆ. ತಮ್ಮ ದೇಶಕ್ಕೆ ಗರಿಷ್ಠ ಸಂಖ್ಯೆಯ ಪ್ರವಾಸಿಗರನ್ನು ಕಳುಹಿಸುವ ದೇಶಕ್ಕೆ ಅವರು ಈ ರೀತಿ ಬಗೆಯುತ್ತಿರುವುದನ್ನು ನೋಡಿ ಅಚ್ಚರಿಯಾಯಿತು. ''
``ನಾವು ನಮ್ಮ ನೆರೆಹೊರೆಯವರೊಂದಿಗೆ ಸ್ನೇಹವನ್ನು ಬಯಸುವವರು. ಆದರೆ ಇಂತಹ ಅಪ್ರಚೋದಿತ ದ್ವೇಷವನ್ನು ನಾವು ಯಾಕಾದರೂ ಸಹಿಸಿಕೊಳ್ಳಬೇಕು? ನಾನು ಮಾಲ್ಡೀವ್ಸ್‌ಗೆ ಹಲವು ಬಾರಿ ಭೇಟಿ ನೀಡಿದ್ದು ಪ್ರತಿ ಬಾರಿಯೂ ಪ್ರಶಂಸಿದ್ದೇನೆ. ಆದರೆ ಆತ್ಮಗೌರವವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ನಾವು ಭಾರತೀಯ ದ್ವೀಪಗಳನ್ನು ಆಯ್ಕೆ ಮಾಡಿಕೊಳ್ಳೋಣ ಮತ್ತು ನಮ್ಮದೇ ಪ್ರವಾಸೋದ್ಯಮವನ್ನು ಬೆಂಬಲಿಸೋಣ.'' ಎಂದಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ತಮ್ಮ 50ನೇ ಹುಟ್ಟುಹಬ್ಬವನ್ನು ಮಹಾರಾಷ್ಟ್ರದ ಸಿಂಧುದುರ್ಗದ ಬೀಚ್‌ಗಳಲ್ಲಿಆಚರಿಸಿಕೊಂಡಿದ್ದನ್ನು ಸ್ಮರಿಸುವ ಮೂಲಕ ಆ ಕಡಲ ತೀರದ ಫೋಟೊ ಹಾಗೂ ವಿಡಿಯೊಗಳನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಮಾಲ್ಡೀವ್ಸ್ ಸಚಿವರ ಟೀಕೆಗೆ ತಿರುಗೇಟು ನೀಡಿದ್ದಾರೆ.
ಭಾರತದ ಪ್ರವಾಸೋದ್ಯಮ ಬೆಂಬಲಿಸೋಣ
ಇನ್ನು ಈ ಬಗ್ಗೆ ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ. ``ಮಾಲ್ಡೀವ್ಸ್‌ನ ಗಣ್ಯರು ಭಾರತೀಯರ ವಿರುದ್ಧ ದ್ವೇಷಪೂರಿತ ಮತ್ತು ಜನಾಂಗೀಯ ಕಾಮೆಂಟ್‌ಗಳನ್ನು ವ್ಯಕ್ತಪಡಿಸುವುದನ್ನು ನಾನು ನೋಡಿದೆ. ಇಂತಹ ನಕಾರಾತ್ಮಕ ಹೇಳಿಕೆಗಳು ಬಂದಿರುವುದು ಬೇಸರದ ಸಂಗತಿ. ಆ ದೇಶದ ಆರ್ಥಿಕತೆ, ಬಿಕ್ಕಟ್ಟು ನಿರ್ವಹಣೆ ಮತ್ತು ಇತರ ಹಲವು ಅಂಶಗಳ ನಿರ್ವಹಣೆಯಲ್ಲಿ ಭಾತರದ ಕೊಡುಗೆ ಮತ್ತು ಸಹಕಾರ ಬಹಳಷ್ಟಿದೆ.''
``ಮಾಲ್ಡೀವ್ಸ್‌ಗೆ ಹಲವಾರು ಬಾರಿ ಭೇಟಿ ನೀಡಿದ್ದೇನೆ ಮತ್ತು ಯಾವಾಗಲೂ ಈ ಸ್ಥಳದ ಸೌಂದರ್ಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದೇನೆ, ನಮ್ಮ ಆತ್ಮಗೌರವಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ ಎಂದು ನಂಬುವವ ನಾನು. ಈ ಹಿನ್ನೆಲೆಯಲ್ಲಿ ನಾವು ಒಂದಾಗೋಣ ಮತ್ತು ನಮ್ಮದೇ ಆದ ರೋಮಾಂಚಕ ಪ್ರವಾಸೋದ್ಯಮವನ್ನು ಬೆಂಬಲಿಸುವ ಮೂಲಕ ಭಾರತದ ದ್ವೀಪಗಳನ್ನು ಅನ್ನು ಆಯ್ಕೆ ಮಾಡೋಣ. ನಮ್ಮ ದೇಶದ ಸಿರಿವಂತಿಕೆಯ ಅನುಭವಗಳನ್ನು ಆಚರಿಸಲು ಮತ್ತು ಪ್ರಶಂಸಿಸಲು ಇದು ಸರಿಯಾದ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಸಲ್ಮಾನ್ ಖಾನ್ ಟ್ವೀಟ್ ಮಾಡಿ, ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರಭಾಯಿ ಮೋದಿಯವರನ್ನು ಲಕ್ಷದ್ವೀಪದ ಸುಂದರವಾದ ಸ್ವಚ್ಛ ಮತ್ತು ಬೆರಗುಗೊಳಿಸುವ ಕಡಲತೀರಗಳಲ್ಲಿ ನೋಡಲು ತುಂಬಾ ಹಿತವೆನ್ನಿಸುತ್ತದೆ. ಇಂತಹ ಸುಂದರ ತಾಣ ನಮ್ಮ ಇಂಡಿಯಾದಲ್ಲಿದೆ ಎಂಬುದೇ ಖುಷಿಯ ವಿಚಾರ. '' ಎಂದಿದ್ದಾರೆ.
ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ ವಿಚಾರ ಕೆಣಕಿ ಮಾಲ್ಡೀವ್ಸ್ ನ ಸಚಿವೆ ಮರಿಯನ್ ಶಿಯುನಾ ಅವರು , ‘‘ಇಸ್ರೇಲ್‌ನ ಕೈಗೊಂಬೆಯಾಗಿರುವ ಪ್ರಧಾನಿ ಮೋದಿ ಅವರು ಲೈಫ್ ಜಾಕೆಟ್ ಧರಿಸಿ ಸಾಗರಕ್ಕೆ ಜಿಗಿಯುತ್ತಾರೆ,’’ ಎಂದು ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಸಚಿವ ಮಾಲ್ಶಾ, ಅಬ್ದುಲ್ಲಾ ಮಜಿದ್ ಅವರು, ‘‘ಭಾರತದಂತಹ ದೇಶ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು ಸುಲಭವಲ್ಲ. ಕೊಳಕು ತುಂಬಿದ ಸ್ಥಳಗಳನ್ನು ಸ್ವಚ್ಛಗೊಳಿಸುವುದು ದೊಡ್ಡ ಸವಾಲು. ಹೀಗಿರುವಾಗ ಲಕ್ಷದ್ವೀಪಕ್ಕೆ ಬನ್ನಿ ಎಂದು ಕರೆ ನೀಡುವ ಮೂಲಕ ಮಾಲ್ಡೀವ್ಸ್ ಪ್ರವಾಸೋದ್ಯವನ್ನು ಮೋದಿ ಟಾರ್ಗೆಟ್ ಮಾಡುತ್ತಿದ್ದಾರೆ,’’ ಎಂದು ಆರೋಪಿಸಿದ್ದರು. ಇದಕ್ಕೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸಚಿವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದ ಮಾಲ್ಡೀವ್ಸ್ ಸರಕಾರ, ಭಾರತದಲ್ಲಿ ವ್ಯಕ್ತವಾದ ಆಕ್ರೋಶಕ್ಕೆ ಮಣಿದು ಪ್ರಧಾನಿ ಮೋದಿ ಅವರ ಬಗ್ಗೆ ಕೀಳಾಗಿ ಟೀಕೆ ಮಾಡಿದ್ದ ಸಚಿವರಾದ ಮರಿಯಮ್ ಶಿಯುನಾ, ಮಾಲ್ಶಾ ಷರೀಫ್, ಅಬ್ದುಲ್ಲಾಮಹಜೂಮ್ ಮಜಿದ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದೆ.
إرسال تعليق