ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶಂಕುಸ್ಥಾಪನೆ ವಿಚಾರವಾಗಿ ರಾಜಕೀಯ ಪಕ್ಷಗಳ ನಡುವೆ ಮಾತಿನ ಸಮರ ನಡೆಯುತ್ತಿದ್ದು, ಈ ನಡುವಲ್ಲೇ ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಿಸಲು ಮುಂದಾಗಿರುವ ರಾಜ್ಯ ಸರ್ಕಾರ, 5 ಎಕರೆ ಭೂಮಿ ಪಡೆಯಲು ಉತ್ತರ ಪ್ರದೇಶ ಸರ್ಕಾರದ ಅನುಮತಿಗಾಗಿ ಕಾದು ಕುಳಿತಿದೆ.
ಸಂಗ್ರಹ ಚಿತ್ರ
ಬೆಂಗಳೂರು: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶಂಕುಸ್ಥಾಪನೆ ವಿಚಾರವಾಗಿ ರಾಜಕೀಯ ಪಕ್ಷಗಳ ನಡುವೆ ಮಾತಿನ ಸಮರ ನಡೆಯುತ್ತಿದ್ದು, ಈ ನಡುವಲ್ಲೇ ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಿಸಲು ಮುಂದಾಗಿರುವ ರಾಜ್ಯ ಸರ್ಕಾರ, 5 ಎಕರೆ ಭೂಮಿ ಪಡೆಯಲು ಉತ್ತರ ಪ್ರದೇಶ ಸರ್ಕಾರದ ಅನುಮತಿಗಾಗಿ ಕಾದು ಕುಳಿತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ಈ ಪ್ರಸ್ತಾಪ ಹೊಸದಲ್ಲ. ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗಲೂ ಇದೇ ರೀತಿ ಮನವಿ ಮಾಡಿದ್ದರು. ಯಾತ್ರಿ ನಿವಾಸ ನಿರ್ಮಿಸಲು ಜಾಗ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಇದೂವರೆಗೆ ಉತ್ತರಪ್ರದೇಶ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.
2020ರಲ್ಲಿ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಕೂಡ 2 ಎಕರೆ ಜಮೀನು ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ತಿಳಿಸಿದ್ದಾರೆ.
ದತ್ತಿ ಇಲಾಖೆಯ ಆಯುಕ್ತ ಬಸವರಾಜೇಂದ್ರ ಎಚ್ ಅವರು ಮಾತನಾಡಿ, ತಿರುಪತಿಯಲ್ಲಿ 210 ಕೋಟಿ ರೂ ಮತ್ತು ಶ್ರೀಶೈಲದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಸರ್ಕಾರವು ಅತಿಥಿ ಗೃಹಗಳನ್ನು ನಿರ್ಮಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಅಯೋಧ್ಯೆಯಲ್ಲಿಯೂ ಅಂತಹುದೇ ಯಾತ್ರಿ ನಿವಾಸ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಉತ್ತರ ಪ್ರದೇಶದಲ್ಲಿರುವ ಅಧಿಕಾರಿಗಳು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಾರಂಭ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ. ಹೀಗಗಿ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರೊಬ್ಬರು ಮಾತನಾಡಿ, ಅಯೋಧ್ಯೆಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗಾಗಿ ಬೃಹತ್ ಕಟ್ಟಡವನ್ನು ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈಗಾಗಲೇ ಭೂಮಿಗಾಗಿ ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದೀಗ ರಾಜ್ಯದ ಪ್ರತಿನಿಧಿಯೊಬ್ಬರನ್ನು ಆ ರಾಜ್ಯಕ್ಕೆ ಕಳುಹಿಸಬೇಕಿದೆ ಎಂದು ಹೇಳಿದ್ದಾರೆ.
ಎರಡೂ ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರ ನಡೆಸುತ್ತಿದಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವುದರಿಂದ ಯುಪಿ ಸರ್ಕಾರವು ಅನುಮತಿ ನೀಡಲು ವಿಳಂಬ ಮಾಡಬಹುದು, ಆದರೆ, ನಿರಾಕರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯಕ್ಕೆ ಆಗಮಿಸಿದ್ದ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಈ ವೇಳೆ ಅಯೋಧ್ಯೆಯಲ್ಲಿ ಅತಿಥಿ ಗೃಹಕ್ಕೆ ಭೂಮಿ ಮಂಜೂರು ಮಾಡುವ ಭರವಸೆ ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
إرسال تعليق