ರಸ್ತೆಯಲ್ಲಿ ದೇವಾಲಯ, ಮಸೀದಿ, ಚರ್ಚ್‌ ನಿರ್ಮಿಸಿದರೆ ಜನರು ಏನು ಮಾಡಬೇಕು?: ಬಿಬಿಎಂಪಿಗೆ ಹೈಕೋರ್ಟ್‌ ತರಾಟೆ

 ನಗರದ ಸುಂಕದಕಟ್ಟೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ದೇವಾಲಯ ನಿರ್ಮಿಸಿರುವುದಕ್ಕೆ ಹೈಕೋರ್ಟ್‌ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಾರ್ವಜನಿಕ ರಸ್ತೆಯಲ್ಲಿ ದೇವಾಲಯ, ಮಸೀದಿ, ಚರ್ಚ್‌ ನಿರ್ಮಿಸಿದರೆ ಜನರು ಏನು ಮಾಡಬೇಕು? ಎಂದು ಬಿಬಿಎಂಪಿಗೆ ಪ್ರಶ್ನಿಸಿದೆ.

                                                                   ಸಂಗ್ರಹ ಚಿತ್ರ

Posted By : Rekha.M
Source : Online Desk

ಬೆಂಗಳೂರು: ನಗರದ ಸುಂಕದಕಟ್ಟೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ದೇವಾಲಯ ನಿರ್ಮಿಸಿರುವುದಕ್ಕೆ ಹೈಕೋರ್ಟ್‌ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಾರ್ವಜನಿಕ ರಸ್ತೆಯಲ್ಲಿ ದೇವಾಲಯ, ಮಸೀದಿ, ಚರ್ಚ್‌ ನಿರ್ಮಿಸಿದರೆ ಜನರು ಏನು ಮಾಡಬೇಕು? ಎಂದು ಬಿಬಿಎಂಪಿಗೆ ಪ್ರಶ್ನಿಸಿದೆ.

ಸುಂಕದಕಟ್ಟೆಯ ಸಿ ಹೊನ್ನಯ್ಯ ಮತ್ತಿತರರು ರಸ್ತೆ ಒತ್ತುವರಿ ಮಾಡಿ ಸಲ್ಲಾಪುರದಮ್ಮ ದೇವಾಲಯ ಟ್ರಸ್ಟ್‌ ಸದಸ್ಯರು ದೇವಸ್ಥಾನ ನಿರ್ಮಿಸುತ್ತಿರುವುದಕ್ಕೆ ಆಕ್ಷೇಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು “ಸರ್ಕಾರಿ ರಸ್ತೆ ಒತ್ತುವರಿ ಮಾಡಿ ದೇವಸ್ಥಾನ ನಿರ್ಮಿಸುತ್ತಿರುವುದಲ್ಲದೇ ಓಡಾಟಕ್ಕೆ ರಸ್ತೆ ನಿರ್ಬಂಧಿಸಿದ್ದಾರೆ” ಎಂದು ಪೀಠದ ಗಮನಸೆಳೆದರು.

ಆಗ ನ್ಯಾಯಮೂರ್ತಿ ದೀಕ್ಷಿತ್‌ ಅವರು “ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ, ದೇವಾಲಯ ನಿರ್ಮಿಸಲಾಗಿದೆಯೇ? ನಿಮ್ಮ (ಬಿಬಿಎಂಪಿ) ವರದಿ ಏನಿದೆ? ಸಾರ್ವಜನಿಕ ರಸ್ತೆಯನ್ನು ದೇವಸ್ಥಾನ ಅಥವಾ ಬೇರೆ ಪೂಜಾ ಸ್ಥಳ ನಿರ್ಮಿಸಲು ಬಳಸಬಹುದು ಎಂಬುದಕ್ಕೆ ದಾಖಲೆ (ಮೆಟೀರಿಯಲ್‌) ಎಲ್ಲಿದೆ? ನಿಮ್ಮ (ಬಿಬಿಎಂಪಿ) ಕತೆ ನಮಗೆ ಬೇಕಿಲ್ಲ. ಸಾರ್ವಜನಿಕ ರಸ್ತೆಯಲ್ಲಿ ದೇವಸ್ಥಾನ ನಿರ್ಮಿಸಲಾಗಿದೆಯೇ? ಇಲ್ಲವೇ ಎಂಬುದಷ್ಟೇ ನಮಗೆ ಬೇಕು. ನಾವು ಸಾರ್ವಜನಿಕ ಆಸ್ತಿಯ ರಕ್ಷಕರು. ಇದು ಖಾಸಗಿ ಆಸ್ತಿಯಲ್ಲ. ಸಾರ್ವಜನಿಕ ರಸ್ತೆಯಲ್ಲಿ ದೇವಾಲಯ, ಮಸೀದಿ, ಚರ್ಚ್‌ ನಿರ್ಮಿಸಿದರೇ ಜನರು ಏನು ಮಾಡಬೇಕು? ನಿಮ್ಮ (ಬಿಬಿಎಂಪಿ) ಅಫಿಡವಿಟ್‌ನಲ್ಲಿ ಒತ್ತುವರಿಯಾಗಿದೆ ಎಂದು ಎಲ್ಲಿ ಉಲ್ಲೇಖಿಸಿದ್ದೀರಿ? ಸಾರ್ವಜನಿಕ ಸ್ಥಳದಲ್ಲಿ ದೇವಾಲಯ ನಿರ್ಮಿಸಿದ್ದರೆ ನಾವು ಅದನ್ನು ಸಹಿಸುವುದಿಲ್ಲ. (ಬಿಬಿಎಂಪಿ) ವರದಿಯ ಆಧಾರದಲ್ಲಿ ನಮಗೆ ಆ ಭಾವನೆ ಇದೆ” ಎಂದು ಹೇಳಿದರು.

ಅಂತಿಮವಾಗಿ ಪೀಠವು “ನ್ಯಾಯಾಲಯದ ನಿರ್ದೇಶನದ ಮೇರೆಗೆ ಬಿಬಿಎಂಪಿ ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ ದೇವಸ್ಥಾನ ನಿರ್ಮಿಸಲು ರಸ್ತೆ ಒತ್ತುವರಿ ಮಾಡಲಾಗಿದೆಯೇ ಅಥವಾ ಟ್ರಸ್ಟ್‌ ಸದಸ್ಯರು ಹೇಳುವಂತೆ ಹಲವು ವರ್ಷಗಳಿಂದ ಅಲ್ಲಿ ದೇವಸ್ಥಾನ ಇತ್ತೇ ಎಂಬುದನ್ನು ಉಲ್ಲೇಖಿಸಲು ವಿಫಲವಾಗಿದೆ” ಎಂದು ಆದೇಶದಲ್ಲಿ ದಾಖಲಿಸಿತು.

“ಈ ಹಿನ್ನೆಲೆಯಲ್ಲಿ ಸ್ವತಂತ್ರ ಪ್ರಾಧಿಕಾರರಿಂದ ಸ್ಪಷ್ಟವಾದ ವರದಿ ಪಡೆಯುವುದು ಸೂಕ್ತ ಎಂದೆನಿಸಿದೆ. ಸಂಬಂಧಿತ ಎಲ್ಲರಿಗೂ ನೋಟಿಸ್‌ ಜಾರಿ ಮಾಡಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ನೇಮಿಸಿದ ಭೂ ದಾಖಲೆಗಳ ಉಪ ನಿರ್ದೇಶಕರು (ಡಿಡಿಎಲ್‌ಆರ್‌) ತಾಂತ್ರಿಕ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ವಾಸ್ತವಿಕ ವರದಿಯನ್ನು ಮೂರು ವಾರಗಳಲ್ಲಿ ಸಲ್ಲಿಸಬೇಕು. ನೋಟಿಸ್‌ ಪಡೆದ ಸಂಬಂಧಿತರು ಸೂಕ್ತ ದಾಖಲೆಗಳನ್ನು ಡಿಡಿಎಲ್‌ಆರ್‌ ಅವರಿಗೆ ನೀಡಬೇಕು. ಡಿಡಿಎಲ್‌ಆರ್‌ ಅವರು ಸಂಬಂಧಿತ ಎಲ್ಲಾ ಸಾರ್ವಜನಿಕ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಬಹುದಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.

ಸಲ್ಲಾಪುರದಮ್ಮ ದೇವಾಲಯ ಟ್ರಸ್ಟ್‌ ಸದಸ್ಯರ ಪರವಾಗಿ ವಾದಿಸಿದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು ಅರ್ಜಿಗೆ ಆಕ್ಷೇಪಿಸಿದರು. ಆದರೆ, ಟ್ರಸ್ಟ್‌ ಪರವಾಗಿ ಇದುವರೆಗೆ ಆಕ್ಷೇಪಣೆ ಸಲ್ಲಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಟ್ರಸ್ಟ್‌ಗೆ ಮೂರು ವಾರ ಕಾಲಾವಕಾಶ ನೀಡಲಾಗಿದೆ ಎಂದು ನ್ಯಾಯಾಲಯ ಆದೇಶ ಮಾಡಿತು.


Post a Comment

أحدث أقدم