ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎರಡು ದಿನಗಳ ಮಟ್ಟಿಗೆ ಹಿಂದೂಡಿದ್ದು, ಏಪ್ರಿಲ್ 18 ಮತ್ತು 19ರಂದು ಪರೀಕ್ಷೆಗಳು ನಡೆಯಲಿವೆ.
ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎರಡು ದಿನಗಳ ಮಟ್ಟಿಗೆ ಹಿಂದೂಡಿದ್ದು, ಏಪ್ರಿಲ್ 18 ಮತ್ತು 19ರಂದು ಪರೀಕ್ಷೆಗಳು ನಡೆಯಲಿವೆ. ಈ ಮೊದಲು ಏಪ್ರಿಲ್ 20 ಮತ್ತು 21ರಂದು ಪರೀಕ್ಷೆ ನಿಗದಿಯಾಗಿತ್ತು.
‘ಏಪ್ರಿಲ್ 21ರಂದು ಎನ್‌ಡಿಎ ಪರೀಕ್ಷೆ ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕನ್ನಡ ಪರೀಕ್ಷೆ ಏಪ್ರಿಲ್ 20ರಂದು ನಡೆಯಲಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ವೃತ್ತಿಪರ ಕೋರ್ಸುಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಬುಧವಾರದಿಂದ (ಜ.10) ಫೆ. 10ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳೂ ಈಗಲೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
ನೀಟ್ ಫಲಿತಾಂಶ ಪ್ರಕಟವಾದ ನಂತರ ಕೆಇಎಯಲ್ಲಿ ನೋಂದಾಯಿಸಿರುವ ಅಭ್ಯರ್ಥಿಗಳಿಗೆ ನೀಟ್ ಅಂಕ ಮತ್ತು ರೋಲ್ ನಂಬರ್ ದಾಖಲಿಸಲು ಇಂಟರ್‌ಫೇಸ್ ನೀಡಲಾಗುವುದು. ಸಿಇಟಿ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಭಾಗವಾಗಿ ಈ ಬಾರಿ ಅರ್ಜಿಯನ್ನು ‘ಅರ್ಜಿ ಹಾಗೂ ಪರಿಶೀಲನೆ’ ನಮೂನೆಯಲ್ಲಿ ಹೊರತರಲಾಗಿದೆ. ಇದರಿಂದಾಗಿ, ಅಭ್ಯರ್ಥಿಗಳ ದಾಖಲಾತಿಗಳನ್ನು ಭೌತಿಕವಾಗಿ ಪರಿಶೀಲಿಸುವ ಸಮಯ ಉಳಿತಾಯವಾಗಲಿದೆ.
ಹೊಸ ಮಾದರಿಯಲ್ಲಿ ಅಭ್ಯರ್ಥಿಗಳ ವಿವರಗಳನ್ನು, ಅಂದರೆ ಶಾಲೆಗಳ ವ್ಯಾಸಂಗ, ಕನ್ನಡ ಮಾಧ್ಯಮ, ಜಾತಿ, ಆದಾಯ ಮತ್ತಿತರ ವಿವರಗಳನ್ನು ಎಸ್‌ಎಟಿಎಸ್ ಹಾಗೂ ಕಂದಾಯ ಇಲಾಖೆಯ ವೆಬ್ ಸೇವೆಯ ಮುಖಾಂತರ ಆನ್‌ಲೈನ್ ಮೂಲಕವೇ ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ಪ್ರತ್ಯೇಕವಾಗಿ ದಾಖಲೆಗಳ ಪರಿಶೀಲನೆಗೆ ಭೌತಿಕವಾಗಿ ಹಾಜರಾಗುವ ಅವಶ್ಯಕತೆ ಇಲ್ಲ.
ಪ್ರತಿ ವರ್ಷವೂ ಸುಮಾರು ಒಂದೂವರೆ ತಿಂಗಳು ನಡೆಯುತ್ತಿದ್ದ ಪರಿಶೀಲನೆ ಕಾರ್ಯ ಈಗ ಅರ್ಜಿ ಸಲ್ಲಿಸುವ ಸಮಯದಲ್ಲಿಯೇ ನಡೆಯಲಿವೆ. ಹೀಗಾಗಿ, ಅಭ್ಯರ್ಥಿಗಳು ಎಲ್ಲ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಲು ಮತ್ತು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು ಎಂದೂ ಸೂಚಿಸಲಾಗಿದೆ.
إرسال تعليق