ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾಲಯದ ವೆಬ್‌ ಸೈಟ್ ಹ್ಯಾಕ್! ಪ್ಯಾಲಿಸ್ತೀನ್ ಪರ ದುಷ್ಕರ್ಮಿಗಳ ಕೃತ್ಯ

 ಮಲೆನಾಡಿನ ಪ್ರತಿಷ್ಠಿತ ಕುವೆಂಪು ವಿಶ್ವ ವಿದ್ಯಾಲಯದ ಅಧಿಕೃತ ವೆಬ್‌ ಸೈಟ್‌ ಅನ್ನು ಮತ್ತೊಮ್ಮೆ ಹ್ಯಾಕ್‌ ಮಾಡಲಾಗಿದೆ. ದುಷ್ಕರ್ಮಿಗಳು ವಿವರಣೆಯಲ್ಲಿ ಸೇವ್‌ ಪ್ಯಾಲಸ್ತೀನ್ ಎಂದು ಬರೆದಿದ್ದು, ಬುಧವಾರ ರಾತ್ರಿ ಹ್ಯಾಕ್‌ ಆಗಿರುವುದಾಗಿ ತಿಳಿದು ಬಂದಿದೆ.


ಕಲಿಮಲಂಗ್‌ ಬ್ಲ್ಯಾಕ್‌ ಹ್ಯಾಟ್‌ ಟೀಮ್‌ ಸದಸ್ಯರು ಕುವೆಂಪು ವಿವಿ ವೆಬ್‌ ಸೈಟ್ ಹ್ಯಾಕ್‌ ಮಾಡಿರುವುದಾಗಿ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಹ್ಯಾಷ್‌ ಟ್ಯಾಗ್‌ ಮಾಡಿ ಸೇವ್‌ ಪ್ಯಾಲಸ್ತೀನ್‌, ಇಸ್ರೇಲ್‌ ಡಾಗ್‌, ಫ್ರಮ್‌ ಲ್ಯಾಮ್ಮರ್‌ ಟೂ ಮಾಷ್‌ಥಾ, ಜಕಾರ್ತಾ ಬ್ಲ್ಯಾಕ್‌ ಹ್ಯಾಟ್‌ ಎಂದು ಪ್ರಕಟಿಸಲಾಗಿದೆ.

ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಹ್ಯಾಕ್‌ ಆಗಿರುವುದು ಇದೇ ಮೊದಲಲ್ಲ. 2018ರ ಮೇ ತಿಂಗಳಲ್ಲಿ ವಿವಿ ವೆಬ್‌ಸೈಟ್‌ ಹ್ಯಾಕ್‌ ಮಾಡಲಾಗಿತ್ತು. ಅಲ್ಲದೆ ವೆಬ್‌ ಸೈಟ್‌ನ ಹೋಮ್‌ ಪೇಜ್‌ನಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆಗಳನ್ನು ಪ್ರಕಟಿಸಲಾಗಿತ್ತು. ಈಗ ಮತ್ತೊಮ್ಮೆ ಹ್ಯಾಕ್‌ ಆಗಿದೆ.

https://www.kuvempu.ac.in ವಿಳಾಸ ಹೊಂದಿರುವ ವೆಬ್‌ ಸೈಟ್ ಹ್ಯಾಕ್ ಮಾಡಲಾಗಿದೆ ಎಂದು ಶಿವಮೊಗ್ಗ ಸಿಇಎನ್ ಠಾಣೆ ಪೊಲಿಸರಿಗೆ ಮೌಖಿಕವಾಗಿ ಮಾಹಿತಿ ನೀಡಿದ ಕುವೆಂಪು ವಿವಿ ಆಡಳಿತಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ತಾಂತ್ರಿಕ ನೆರವನ್ನು ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಕೇಳಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.

ಕುವೆಂಪು ವಿಶ್ವ ವಿದ್ಯಾಲಯದ ಅಧಿಕೃತ ವೆಬ್‌ ಸೈಟ್‌ ಅನ್ನೇ ಪ್ಯಾಲಸ್ತೀನ್ ಪರ ಗುಂಪು ಹ್ಯಾಕ್ ಮಾಡಿದ್ದ ಕಾರಣ, ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರ ಎದುರಾಗಿತ್ತು. ವೆಬ್‌ಸೈಟ್‌ನಲ್ಲಿ ಇದ್ದ ಎಲ್ಲ ಮಾಹಿತಿಗಳನ್ನೂ ಅಳಿಸಿ ಹಾಕಲಾಗಿತ್ತು. ಹೀಗಾಗಿ, ವಿದ್ಯಾರ್ಥಿಗಳು ಸೂಕ್ತ ಮಾಹಿತಿ ಸಿಗದೆ ಪರದಾಡುವಂತಾಗಿತ್ತು.

ಈ ಕುರಿತಾಗಿ ಕುವೆಂಪು ವಿವಿ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ. ಸತ್ಯ ಪ್ರಕಾಶ್ ರಾಮಯ್ಯ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ತಮ್ಮ ತಾಂತ್ರಿಕ ತಂಡಕ್ಕೆ ವೆಬ್‌ ಸೈಟ್ ಹ್ಯಾಕ್ ಆಗಿರುವ ಬಗ್ಗೆ ಬುಧವಾರ ಮಾಹಿತಿ ಸಿಕ್ಕ ಕೂಡಲೇ ವೆಬ್ ಸೈಟ್‌ನ ಡೆವಲಪರ್‌ನನ್ನು ಸಂಪರ್ಕ ಮಾಡಿದೆವು ಎಂದು ತಿಳಿಸಿದ್ದಾರೆ. ಕೂಡಲೇ ಸರ್ವರ್ ಡೌನ್ ಮಾಡಿಸಲಾಯ್ತು.

ಸರ್ವರ್ ಡೌನ್ ಮಾಡಿದ ಬಳಿಕ ಪ್ಯಾಲಿಸ್ತೀನ್ ಪರ ಬರೆದಿದ್ದ ಬರಹಗಳನ್ನು ಅಳಿಸಲಾಯ್ತು. ಇನ್ನು ವೆಬ್ ಸೈಟ್‌ ಅನ್ನು ಯಥಾಸ್ಥಿತಿಗೆ ತರಲು ಕೆಲವು ಸಮಯ ಬೇಕಾಗುತ್ತದೆ ಎಂದು ವಿವಿ ಆಡಳಿತ ಮಂಡಳಿ ತಿಳಿಸಿದೆ.

ಇನ್ನು ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ ಆಗಿರುವ ಸಂಬಂಧ ವಿಶ್ವ ವಿದ್ಯಾಲಯವು ವಿದ್ಯಾರ್ಥಿಗಳಿಗೆ ಯಾವುದೇ ಮಹತ್ವದ ಘೋಷಣೆ ಹೊರಡಿಸಿಲ್ಲ. ಈ ಕುರಿತಾಗಿ ಶೀಘ್ರದಲ್ಲೇ ಸಮಗ್ರ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.

ದೂರದ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಣ ಸಂಘರ್ಷದ ಬಿಸಿ ಮಲೆನಾಡ ನಗರಿ ಶಿವಮೊಗ್ಗದ ಕುವೆಂಪು ವಿವಿಗೂ ತಟ್ಟಿರೋದು ನಿಜಕ್ಕೂ ಆತಂಕಕಾರಿ ವಿಚಾರವಾಗಿದೆ. ಪ್ಯಾಲಿಸ್ತೀನ್ ಪರ ಬರಹ ಬರೆಯುವ ಮೂಲಕ ಶೈಕ್ಷಣಿಕ ಉದ್ದೇಶದ ವೆಬ್‌ ಸೈಟ್‌ನ ಕಾರ್ಯ ಚಟುವಟಿಕೆಗೆ ದುಷ್ಕರ್ಮಿಗಳು ಧಕ್ಕೆ ತಂದಿದ್ದಾರೆ.

Post a Comment

أحدث أقدم