ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ಹಿಜಾಬ್ ಮತ್ತೆ ಜಾರಿಗೆ ಬಂದರೆ ಅದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಶಾಲೆಗೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ಹಿಜಾಬ್ ಮತ್ತೆ ಜಾರಿಗೆ ಬಂದರೆ ಅದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಶಾಲೆಗೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ತಾಕತ್ತಿದ್ದರೆ ಹಿಜಾಬ್ ವಾಪಸ್ ತನ್ನಿ ನೋಡೋಣ ಎಂದು ಹಿಂದೂ ಸಂಘಟನೆಯ ಮುಖಂಡ ಕಲ್ಲಡ್ಕ ಪ್ರಭಾಕರ್ ಸವಾಲು ಹಾಕಿದರೆ, ಹಿಜಾಬ್ ಹಿಂದೆ ತಿರುಗುವ ಸಿದ್ಧರಾಮಯ್ಯ ತಾಕತ್ತಿದ್ದರೆ ಭಾರತ ಹಿಂದೂ ರಾಷ್ಟ್ರ ಆಗುವುದನ್ನು, ನಮ್ಮ ಮಕ್ಕಳು ಕೇಸರಿ ಶಾಲು ಹಾಕುವುದನ್ನು ತಡೆಯಲಿ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ, ಹಿಂದೂ ಸಂಘಟನೆಗಳ ಮುಖಂಡರ ಹೇಳಿಕೆಗೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ.
ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಹಿಜಾಬ್ ವಿಚಾರದಲ್ಲಿ ನಾವು ಆದೇಶವೇ ಮಾಡಿಲ್ಲ. ಒಂದು ವೇಳೆ ಮಾಡಿದ್ದರೂ ಪರಿಶೀಲನೆ ಮಾಡುತ್ತೇವೆ ಎಂಬ ಮಾತನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅದರ ಸಾಧಕ-ಬಾಧಕವನ್ನು ನೋಡಿಕೊಂಡು ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಗೊಂದಲ ಸೃಷ್ಟಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯದವರು ಹಿಜಾಬ್ ಹಾಕಿಕೊಂಡೇ ಬರುತ್ತಾರೆ. ಬಿಜೆಪಿ ಸರ್ಕಾರ ಬಂದ ಬಳಿಕ ಈ ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಈ ಮೊದಲು ನಾವು ಯಾವ ರೀತಿ ಜೀವನ ನಡೆಸಿದೆವೋ ಅದೇ ರೀತಿ ಇದ್ದರೆ ಒಳಿತು. ಧರ್ಮ ಹಾಗೂ ಜನಸಮುದಾಯದ ಹಕ್ಕುಗಳ ವಿಚಾರಗಳಲ್ಲಿ ನಾವು ಸಂವಿಧಾನವನ್ನು ಬಿಟ್ಟು ಯಾವ ಕೆಲಸವನ್ನೂ ಮಾಡುವುದಿಲ್ಲ. ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿದ್ದರೂ ಸಂವಿಧಾನದ ಚೌಕಟ್ಟಿನೊಳಗೇ ತೆಗೆದುಕೊಳ್ಳುತ್ತೇವೆ. ಇದು ಕೆಲವರಿಗೆ ನೋವಾಗಬಹುದು. ಇನ್ನು ಕೆಲವರಿಗೆ ಸಂತೋಷವಾಗಬಹುದು ಎಂದು ತಿಳಿಸಿದರು.
ನೈತಿಕ ಪೊಲೀಸ್‌ಗಿರಿ ತಡೆಗೆ ಆ್ಯಂಟಿ ಕಮ್ಯುನಲ್ ವಿಂಗ್ ಮಾಡಿದ್ದರೂ ಕಡಿವಾಣ ಬಿದ್ದಂತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಬಹಳಷ್ಟು ಕಡಿಮೆ ಆಗಿದೆ ಎಂಬುದು ನಮಗೆ ಬಂದ ಮಾಹಿತಿ. ನೈತಿಕ ಪೊಲೀಸ್ ಗಿರಿಗಳ ಸಂಖ್ಯೆ ಕಡಿಮೆಯಾಗಿದ್ದಂತೂ ಸತ್ಯ. ಸಮಾಜದಲ್ಲಿ ಸಾಮರಸ್ಯ ಇರಬೇಕು. ಅಹಿತಕರ ಘಟನೆಗಳಿಗೆ ಅವಕಾಶ ಕೊಡಬೇಡಿ. ಪೊಲೀಸ್ ಕಮಿಷನರ್, ಎಸ್ಪಿ, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಹಾಗೆಂದು ಎಲ್ಲರ ಮೇಲೂ ಕೇಸ್ ಹಾಕಬೇಕೆಂದಲ್ಲ. ಯಾರು ನೈತಿಕ ಪೊಲೀಸ್ ಗಿರಿ ಮಾಡುತ್ತಾರೋ ಅಂಥವರ ಮೇಲೆ ಕ್ರಮ ಜರುಗಿಸಬೇಕು. ಯಾರು ನೈತಿಕ ಪೊಲೀಸ್ ಗಿರಿ ಮಾಡಿಲ್ಲವೋ ಅವರು ಯಾವುದೇ ಆತಂಕಿತರಾಗುವ ಅಗತ್ಯವಿಲ್ಲ ಎಂದರು.
ಮತ್ತೊಂದೆಡೆ, ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ರಾಜ್ಯ ಆದಿ ದ್ರಾವಿಡ ಸಮಾವೇಶದಲ್ಲಿ ಮಾತನಾಡಿದ ಅವರು, "ಕೀಳರಿಮೆ ತೆಗೆದುಹಾಕಬೇಕಾದಲ್ಲಿ ನಾವೆಲ್ಲಾ ಒಗ್ಗಟ್ಟಾಗಬೇಕು. ಒಗ್ಗಟ್ಟಾಗದಿದ್ದಲ್ಲಿ ತುಳಿತಕ್ಕೊಳಗಾದ, ಶೋಷಿತ ಸಮಾಜ ಹಾಗೆಯೇ ಮುಂದುವರಿಯುತ್ತೇವೆ. ನಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ. ಶಿಕ್ಷಣದಿಂದ ಮಾತ್ರ ಬಲಯುತರಾಗಲು ಸಾಧ್ಯ. ಆದ್ದರಿಂದ ಆದಿ ದ್ರಾವಿಡ ಸಮಾಜದ ಪ್ರತೀ ಮನೆಯಿಂದ ಓರ್ವನನ್ನಾದರೂ ಪದವೀಧರರನ್ನಾಗಿಸುವ ಸಂಕಲ್ಪವನ್ನು ಸಮುದಾಯದ ಪ್ರತಿಯೊಬ್ಬರೂ ಮಾಡಬೇಕು" ಎಂದು ಕರೆ ನೀಡಿದರು.
"ನಾನು ಆದಿ ದ್ರಾವಿಡ ಸಮುದಾಯದಿಂದ ಬಂದವನು. ಆದರೆ ನಾನು ಹೊರದೇಶಕ್ಕೆ ಹೋಗಿ ಶಿಕ್ಷಣ ಪಡೆಯುವಷ್ಟು ನನ್ನ ತಂದೆ ಶಿಕ್ಷಣದ ಬಗ್ಗೆ ಒಲವು ಇರಿಸಿಕೊಂಡಿದ್ದರು. ಬಳಿಕ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿ 35 ವರ್ಷಗಳ ರಾಜಕೀಯ ಜೀವನ ನಡೆಸಿದ್ದೇನೆ. ಸಚಿವನಾಗಿದ್ದೇನೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿ ಎಂಟು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಈ ರಾಜ್ಯದಲ್ಲಿ ಮೂರು ಬಾರಿ ಗೃಹ ಸಚಿವನಾಗಿ ದಾಖಲೆ ಬರೆದಿದ್ದೇನೆ" ಎಂದು ಹೇಳಿದರು.
إرسال تعليق