ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌: ಬೆಂಗಳೂರಿನ 3 ಕಡೆ ಸೇರಿ ರಾಜ್ಯದ 63 ಕಡೆ ದಾಳಿ, ದಾಖಲೆಗಳ ಪರಿಶೀಲನೆ

 ಮಂಗಳವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬೆಂಗಳೂರಿನ ಮೂರು ಕಡೆ ಸೇರಿ ರಾಜ್ಯದ 63ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ಲೋಕಾಯುಕತ್‌ ದಾಳಿ ಮಾಡಿ ಶೋಧ ಕಾರ್ಯಾಚರಣೆ ಕೈಗೊಂಡಿದೆ.

                                                                ಸಂಗ್ರಹ ಚಿತ್ರ

Posted By : Rekha.M
Source : Online Desk

ಬೆಂಗಳೂರು: ಮಂಗಳವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬೆಂಗಳೂರಿನ ಮೂರು ಕಡೆ ಸೇರಿ ರಾಜ್ಯದ 63ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ಲೋಕಾಯುಕತ್‌ ದಾಳಿ ಮಾಡಿ ಶೋಧ ಕಾರ್ಯಾಚರಣೆ ಕೈಗೊಂಡಿದೆ.

ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಬೆಸ್ಕಾಂ ಜಾಗೃತ ದಳ ಅಧಿಕಾರಿ ಟಿ.ಎನ್‌.ಸುಧಾಕರ್ ರೆಡ್ಡಿ ಮನೆ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್​​​.ಎಸ್​​.ಕೃಷ್ಣಮೂರ್ತಿ ಮನೆ ಹಾಗೂ ಕುಂಬಳಗೂಡು-ಕಣಿಮಿಣಿಕೆ ಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧಿಕಾರಿ ಮನೆ ಮೇಲೂ ದಾಳಿ ಮಾಡಿದ್ದು, ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಮೈಸೂರಿನಲ್ಲೂ ಲೋಕಾಯುಕ್ತ ಕಾರ್ಯಾಚರಣೆ ನಡೆಸಿದ್ದು, ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಮೇಲೆ ದಾಳಿ ಮಾಡಿದ್ದಾರೆ.

ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ಪರಿಶೀಲನೆ ನಡೆಸಿದ್ದಾರೆ. ಕುಟುಂಬದ ಹೆಸರಿನಲ್ಲಿ ಎಂ.ಎಸ್ ಗ್ರೂಪ್ ಕಂಪನಿ, ಆದಾಯಕ್ಕೂ ಮೀರಿ ಅಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಹಾಗೂ ಐ ಜಿ ಪಿ, ಸುಬ್ರಮಣ್ಣೀಶ್ವರ ರಾವ್ ಎಸ್. ಪಿ ಸುರೇಶ್ ಬಾಬು ಮಾರ್ಗದರ್ಶ‌ನದಲ್ಲಿ ಡಿಎಸ್‌ಪಿ, ಕೃಷ್ಣಯ್ಯ ನೇತೃತ್ವದಲ್ಲಿ 12 ತಂಡಗಳಿಂದ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆದಿದೆ.

ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಏಕಕಾಲಕ್ಕೆ ಲೋಕಯುಕ್ತ ದಾಳಿಯಾಗಿದೆ. ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಚಂದ್ರಶೇಖರ, ಅರಣ್ಯ ಇಲಾಖೆಯ ಡಿಆರ್‌ಎಫ್‌ಓ ಮಾರುತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚಂದ್ರಶೇಖರ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದರೂ ಮನೆ ಹೊಸಪೇಟೆಯಲ್ಲಿದೆ. ಅರಣ್ಯ ಇಲಾಖೆಯ ಡಿಆರ್‌ಎಫ್‌ಓ ಮಾರುತಿ ಮನೆ ಕಂಪ್ಲಿಯಲ್ಲಿದೆ. ಹೀಗಾಗಿ ಚಂದ್ರಶೇಖರ ಅವರ ಹೊಸಪೇಟೆ ಮನೆ ಮತ್ತು ಮಾರುತಿ ಅವರ ಕಂಪ್ಲಿ ಮತ್ತು ಗಂಗಾವತಿ ನಿವಾಸದ ಮೇಲೆ ದಾಳಿ ಮಾಡಿದ್ದು, ದಾಖಲೆ ಪರಿಶೀಲಿಸುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.




Post a Comment

أحدث أقدم