ಗೃಹಲಕ್ಷ್ಮಿ ಯೋಜನೆ ಹಣ ಬರದಿದ್ದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರ ಆಕ್ರೋಶ!

ಗೃಹ ಲಕ್ಷ್ಮೀ ಯೋಜನೆ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

                                                                 ಸಂಗ್ರಹ ಚಿತ್ರ

Posted By : Rekha.M
Source : Online Desk

ಬೆಂಗಳೂರು: ಗೃಹ ಲಕ್ಷ್ಮೀ ಯೋಜನೆ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಗೆ ಯಲಹಂಕ ತಾಲೂಕಿನ ಹಲವು ಹಳ್ಳಿಗಳ ಮಹಿಳೆಯರು ಅರ್ಜಿ ‌ಹಾಕಿದ್ದರು. ಆದರೆ ಇವರ ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ ಎಂದು ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ‌ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು. ನಮಗೆ ಯೋಜನೆಯಡಿ ಒಂದು ಬಾರಿಯೂ ಹಣ ಬಂದಿಲ್ಲ. ಇದಕ್ಕಾಗಿ ನಾವು ಅಲೆದಾಡುತ್ತಿದ್ದೇವೆ. ಯಾವಾಗ ಬಂದರೂ ಅದು ಸರಿಯಲ್ಲ ಇದು ಸರಿಯಲ್ಲ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾದರೆ ನಮಗೆ ಗೃಹಲಕ್ಷ್ಮೀ ಯೋಜನೆ ಹಣ ಬರುವುದು ಯಾವಾಗ? ಅಂತ ಮಹಿಳೆಯರ ಅಳಲು ತೋಡಿಕೊಂಡರು.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡುತ್ತಿದೆ. ಆದರೆ ಯೋಜನೆ ಜಾರಿಯಾಗಿ ಮೂರು ತಿಂಗಳು ಕಳೆದರೂ ತಾಂತ್ರಿಕ ದೋಷಗಳು ಇನ್ನು ಬಗೆಹರಿದಿಲ್ಲ. ಕಳೆದ ಮೂರು ತಿಂಗಳಲ್ಲಿ ಸುಮಾರು 1.2 ಕೋಟಿ ಮಹಿಳೆಯರು ಪ್ರಯೋಜನಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ಆದರೆ ಆಗಸ್ಟ್‌ನಿಂದ ಸುಮಾರು 10 ಲಕ್ಷ ಮಹಿಳೆಯರು ಮತ್ತು ಸೆಪ್ಟೆಂಬರ್‌ನಿಂದ 36 ಲಕ್ಷ ಮಹಿಳೆಯರು ಇನ್ನೂ ಯೋಜನೆಯ ಪ್ರಯೋಜನಗಳನ್ನು ಪಡೆದಿರಲಿಲ್ಲ.

ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಫಲಾನುಭವಿಗಳು ಬ್ಯಾಂಕ್​ ಖಾತೆಗಳಿಗೆ ಆಧಾರ್ ಕಾರ್ಡ್‌ಗಳನ್ನು ಲಿಂಕ್​ ಮಾಡದಿರುವುದು, ಪಾಸ್​​ಬುಕ್​ನಲ್ಲಿರುವ ಹೆಸರಿಗೂ​ ಮತ್ತು ಆಧಾರ್​ ಕಾರ್ಡ್​ನಲ್ಲಿರುವ ಹೆಸರಿಗೂ ಹೊಂದಾಣಿಕೆಯಾಗದಿರುವುದು. ಆರು ತಿಂಗಳಿಗಿಂತ ಹೆಚ್ಚು ಕಾಲ ಬ್ಯಾಂಕ್ ವಹಿವಾಟು ನಡೆಯದಿರುವುದು ಅಥವಾ KYC ಮಾಡದಿರುವುದು ಮತ್ತು ವಿವಿಧ ಕಾರಣಗಳಿಂದಾಗಿ ಹಣ ವರ್ಗಾವಣೆ ತಡವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಹಣಕಾಸು ಇಲಾಖೆಗಳ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕಳೆದ 45 ದಿನಗಳಲ್ಲಿ ಸುಮಾರು 10 ಲಕ್ಷ ಅರ್ಜಿಗಳನ್ನು ಸರಿಪಡಿಸಲಾಗಿದೆ. ಲೋಪದೋಷಗಳನ್ನು ತ್ವರಿತವಾಗಿ ಸರಿಪಡಿಸಲು ಮುಂದಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು. 



 

Post a Comment

أحدث أقدم