ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.
ಬಸ್'ಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಸಂಗೊಳ್ಳಿಯ ನಿಂಗವ್ವ ಸಿಂಗಾಡಿ ಅವರಿಗೆ ಸಿಎಂ
ಸಿದ್ದರಾಮಯ್ಯ ಶುಕ್ರವಾರ ಸನ್ಮಾನಿಸಿದರು.
ಬೆಂಗಳೂರು: ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.
ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಜಾರಿಯಾದ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ನೂತನ ಮೈಲಿಗಲ್ಲು ಸ್ಥಾಪಿಸಿದ್ದು, 2,397.80 ಕೋಟಿ ರೂ ಟಿಕೆಟ್ ಮೌಲ್ಯದ 100 ಕೋಟಿ ಉಚಿತ ಬಸ್ ಪ್ರಯಾಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.
“ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಿಲ್ಲ ಜಾರಿಯಾದರೂ ಅದು ರಾಜ್ಯದ ಆರ್ಥಿಕ ದಿವಾಳಿತನಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದರು. ಆದರೆ, ಶಕ್ತಿ ಯೋಜನೆಯಡಿ 100 ಕೋಟಿಗೂ ಹೆಚ್ಚು ಮಹಿಳೆಯರು ಲಾಭ ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಆರ್ಥಿಕತೆಯನ್ನು ಹೆಚ್ಚಾಗುವಂತೆ ಮಾಡಿದೆ ಎಂದು ಹೇಳಿದರು.
ಬಡವರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದು ರಾಜ್ಯದ ಜಿಡಿಪಿಯನ್ನು ಹೆಚ್ಚಿಸುತ್ತದೆ. ಶಕ್ತಿ ಯೋಜನೆ ಜಾರಿಯಾದ ನಂತರ ರಸ್ತೆ ಸಾರಿಗೆ ಬಸ್ ನಿಗಮಗಳ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಕರ್ನಾಟಕದ ಧಾರ್ಮಿಕ ಸ್ಥಳಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ದೇವಸ್ಥಾನದ ಹುಂಡಿಗಳಲ್ಲಿ ಹಣ ಸಂಗ್ರಹ ಹೆಚ್ಚಾಗಿದೆ. ಈ ಸ್ಥಳಗಳ ಸುತ್ತಲಿನ ಆರ್ಥಿಕ ಚಟುವಟಿಕೆಗಳು ಚುರುಕುಗೊಂಡಿವೆ. ನಾವು ಜನರಿಗೆ ನೀಡುವ ಹಣವು ಸರ್ಕಾರಕ್ಕೇ ಹಿಂತಿರುಗುತ್ತಿದೆ ಎಂದು ತಿಳಿಸಿದರು.
100 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರ ಪ್ರಯಾಣದಿಂದ ಆರ್ಥಿಕ ಚಟುವಟಿಕೆಗಳು ಹೇಗೆ ಉತ್ತೇಜಿತವಾಗಿವೆ ಎಂದು ಅವರು ಪ್ರತಿಪಕ್ಷಗಳನ್ನು ಪ್ರಶ್ನಿಸಿದರು. ದೇಶದ ಯಾವುದೇ ರಾಜ್ಯ ಸರ್ಕಾರಗಳು ಇಂತಹ ಸಾಧನೆ ಮಾಡಿಲ್ಲ ಎಂದ ಅವರು, ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ತಮ್ಮ ಸರ್ಕಾರ ಈ ಸಾಧನೆ ಮಾಡಿದೆ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ದಿನದ ವೇಳೆ ಬಸ್ ಹತ್ತುವುದಕ್ಕೂ ಮುನ್ನ ಬಾಗಿಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಸಂಗೊಳ್ಳಿಯ ನಿಂಗವ್ವ ಸಿಂಗಾಡಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದರು.
ನಿಂಗವ್ವ ಅವರು ಬಸ್'ಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕಾರ್ಯಕ್ರಮದಲ್ಲಿ ಕಳೆದ 15 ವರ್ಷಗಳ ಸೇವೆಯಲ್ಲಿ ಯಾವುದೇ ಅಪಘಾತಗಳಿಲ್ಲದೆ ಬಸ್‌ಗಳನ್ನು ಸುಗಮ ರೀತಿಯಲ್ಲಿ ಓಡಿಸಿದ 83 ಬಸ್ ಚಾಲಕರಿಗೆ ಮುಖ್ಯಮಂತ್ರಿಗಳು ಚಿನ್ನದ ಪದಕಗಳನ್ನು ವಿತರಿಸಿದರು.
إرسال تعليق