ಜುಲೈ 14ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

 ಪ್ರತಿ ಮನೆಯ ಯಜಮಾನಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಪಕ್ರಿಯೆಯನ್ನು ಜುಲೈ 14ರಿಂದ ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭಾನುವಾರ ಹೇಳಿದರು.

                                                             ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Posted By :Rekha.M
Online Desk

ಬೆಳಗಾವಿ: ಪ್ರತಿ ಮನೆಯ ಯಜಮಾನಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಪಕ್ರಿಯೆಯನ್ನು ಜುಲೈ 14ರಿಂದ ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭಾನುವಾರ ಹೇಳಿದರು.

ಜಿಲ್ಲೆಯಲ್ಲಿ ಮಾತನಾಡಿದ ಅವರು, ಜುಲೈ 3 ಅಥವಾ 4ರಂದು ಈ ಬಗ್ಗೆ ನಾವು ಘೋಷಣೆ ಮಾಡುತ್ತೇವೆ. ಆಗಸ್ಟ್‌ ತಿಂಗಳಿಂದ ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಹಾಕುತ್ತೇವೆ. ರಾಜ್ಯದ ಜನರ ನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ವೈಎಸ್‌ಟಿ (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್) ಸಂಗ್ರಹ ಮಾಡಲಾಗುತ್ತಿದೆ ಎಂಬ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿದ, ಅವರು ಕೂಡ ಸರ್ಕಾರ ನಡೆಸಿದಂತ ಅನುಭವ ಇದ್ದವರು. ಕುಮಾರಸ್ವಾಮಿ ಅಣ್ಣ ಹಿರಿಯರು, ರಾಜಕೀಯ ಮುತ್ಸದ್ಧಿಗಳು. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ ಎಂದು ತಿಳಿಸಿದರು.

ಅಲ್ಲದೆ, ಸರ್ಕಾರ ರಚನೆ ಆಗಿ ಈಗ ಒಂದು ತಿಂಗಳು, ಐದು ದಿನ ಆಗಿದೆ. ಸರ್ಕಾರಕ್ಕೆ ಕೆಲಸ ಮಾಡಲು ಬಿಡಿ. ಜನರು ಬಹಳಷ್ಟು ಆಶಾಭಾವನೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಈಗಲೇ ನೀವು ಈ ರೀತಿ ಮಾತನಾಡಲು ಶುರು ಮಾಡಿದರೆ ಅದು ತಪ್ಪಾಗುತ್ತದೆ. ಸ್ವಲ್ಪ ಅಮಯ ಕೊಡಿ, ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಅವರನ್ನೇ ಕೇಳಿ ಎಂದರು.

ಪ್ರತಿಪಕ್ಷದವರು ಹತಾಶರಾಗಿದ್ದಾರೆಂದು ಹೇಳಲು ಬಯಸುವುದಿಲ್ಲ. ಬಹಳ ನಿರೀಕ್ಷೆ ಇಟ್ಟುಕೊಂಡು ರಾಜ್ಯದ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಕೆಲಸ ಮಾಡಲು ನಮಗೆ ಸಮಯಾವಕಾಶ ನೀಡಿ ಎಂದು ಕೇಳುತ್ತಿದ್ದೇನೆ. ನಮಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಆದರೂ ನಾವು ದುಡ್ಡು ಕೊಟ್ಟು ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದೇವೆ ಎಂದರು.

ಈ ತಿಂಗಳಿಂದ ಗೃಹಜ್ಯೋತಿ, ಅನ್ನಭಾಗ್ಯ ಲಾಭ ಎಲ್ಲರಿಗೂ ಸಿಗುತ್ತದೆ. ಮುಂದಿನ ಆಗಸ್ಟ್‌ನಿಂದ ಗೃಹಲಕ್ಷ್ಮೀ ಯೋಜನೆ ಮನೆಯ ಯಜಮಾನಿಗೆ ಸಿಗುತ್ತದೆ. ಕೊಟ್ಟಂತ ಮಾತು ಉಳಿಸಿಕೊಳ್ಳುತ್ತಿದ್ದೇವೆ. ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರ ನಿರೀಕ್ಷೆ ತಕ್ಕ ಹಾಗೇ ಕೆಲಸ ಮಾಡುತ್ತೇವೆ ಎಂದು ಹೇಳಿದರು,


Post a Comment

أحدث أقدم