ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳಾದ ಗೃಹಜ್ಯೋತಿ ಮತ್ತು ಅನ್ನಭಾಗ್ಯಕ್ಕೆ ಶನಿವಾರ ಅಧಿಕೃತ ಚಾಲನೆ ದೊರೆಯಲಿದೆ.
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳಾದ ಗೃಹಜ್ಯೋತಿ ಮತ್ತು ಅನ್ನಭಾಗ್ಯಕ್ಕೆ ಶನಿವಾರ ಅಧಿಕೃತ ಚಾಲನೆ ದೊರೆಯಲಿದೆ.
ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ ‘ಅನ್ನಭಾಗ್ಯ’ ಯೋಜನೆ ಅಡಿ ತಲಾ 10 ಕೆ.ಜಿ. ಅಕ್ಕಿ ವಿತರಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಯೋಜನೆಗೆ ಅಕ್ಕಿ ಹೊಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಬಿಪಿಎಲ್ ಕುಟುಂಬದ ಒಬ್ಬೊಬ್ಬರಿಗೂ ತಲಾ 5 ಕೆ.ಜಿ ಅಕ್ಕಿ ಹಾಗೂ ಬಾಕಿ 5 ಕೆ.ಜಿ ಅಕ್ಕಿ ಬದಲು ರೂ.170 ಅನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲು ಸರ್ಕಾರ ತೀರ್ಮಾನಿಸಿದೆ.
ಒಂದು ಕುಟುಂಬದಲ್ಲಿ ಐವರು ಸದಸ್ಯರು ಇದ್ದರೆ ಒಟ್ಟು 25 ಕೆ.ಜಿ ಅಕ್ಕಿಗೆ ತಗಲುವ ವೆಚ್ಚ ರೂ.850 ಅನ್ನು ಕುಟುಂಬದ ಮುಖ್ಯಸ್ಥನ ಖಾತೆಗೆ ಜಮೆ ಮಾಡಲಾಗುತ್ತದೆ. 85 ಲಕ್ಷ ಬಿಪಿಎಲ್ ಕುಟುಂಬಗಳ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.
ಜೊತೆಗೆ, ಗೃಹಬಳಕೆಯ ವಿದ್ಯುತ್‌ಗೆ ಗರಿಷ್ಠ 200 ಯೂನಿಟ್‌ವರೆಗೆ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆ ಸಹ ಶನಿವಾರದಿಂದ ಆರಂಭವಾಗಲಿದೆ.
ಈ ಯೋಜನೆಗೆ ಜೂನ್ 18ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ರಾಜ್ಯದ ಆರು ವಿದ್ಯುತ್ ಕಂಪನಿಗಳ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ 7ರವರೆಗೆ 86.24 ಲಕ್ಷಕ್ಕೂ ಅಧಿಕ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿಗೆ ಗಡುವು ವಿಧಿಸಿಲ್ಲ.
ರಾಜ್ಯದಲ್ಲಿನ 2.14 ಕೋಟಿ ಕುಟುಂಬಗಳು ಈ ಯೋಜನೆ ವ್ಯಾಪ್ತಿಗೆ ಒಳಪಡಲಿವೆ. ಜುಲೈ ತಿಂಗಳಲ್ಲಿ ಬಳಸಿದ ವಿದ್ಯುತ್ ಆಗಸ್ಟ್1ರಿಂದ ನೀಡುವ ಬಿಲ್‌ಗೆ ಸೇರ್ಪಡೆಯಾಗುವ ರೀತಿಯಲ್ಲಿ ಯೋಜನೆ ಜಾರಿಯಾಗಲಿದೆ.
إرسال تعليق