ಶಿಕ್ಷಣ ಇಲಾಖೆಯಲ್ಲಿನ ಮಹಿಳೆಯರು, ಸಿಬ್ಬಂದಿಗಳು, ಶಿಕ್ಷಕಿಯರ ಮೇಲಿನ ಲೈಂಗಿಕ ಕಿರುಕುಳ ಮತ್ತು ಅಸಭ್ಯ ವರ್ತನೆಯ ದೂರುಗಳ ಪರಿಶೀಲಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮತಿ ರಚಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ.
ಸಂಗ್ರಹ ಚಿತ್ರ
ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿನ ಮಹಿಳೆಯರು, ಸಿಬ್ಬಂದಿಗಳು, ಶಿಕ್ಷಕಿಯರ ಮೇಲಿನ ಲೈಂಗಿಕ ಕಿರುಕುಳ ಮತ್ತು ಅಸಭ್ಯ ವರ್ತನೆಯ ದೂರುಗಳ ಪರಿಶೀಲಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮತಿ ರಚಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ.
ರಾಜ್ಯ ಮಹಿಳಾ ಆಯೋಗದ ಆಗ್ರಹದ ಮೇರೆಗೆ ಈ ನಿರ್ದೇಶನ ನೀಡಲಾಗಿದೆ ಎಂದು ತಿಳಿದುಬಂದಿದೆ.
ಆದೇಶ ಹಿನ್ನೆಲೆಯಲ್ಲಿ ಲೈಂಗಿಕ ಕಿರುಕುಳ ದೂರುಗಳನ್ನು ಪರಿಶೀಲಿಸಲು ಇಲಾಖೆಯ ಜಂಟಿ ನಿರ್ದೇಶಕಿ ಡಾ.ಎಸ್.ರೂಪಶ್ರೀ ಅಧ್ಯಕ್ಷತೆಯಲ್ಲಿ ‘ಆಂತರಿಕ ದೂರು ಸಮಿತಿ’ಯನ್ನು ರಚಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ (ಆಡಳಿತ) ಮತ್ತು ಸಮಿತಿಯ ಮುಖ್ಯಸ್ಥೆ ಡಾ.ರೂಪಶ್ರೀ ಎಸ್ ಅವರು, ಸಮಿತಿ ಅಸ್ತಿತ್ವದಲ್ಲಿದ್ದರೂ ಹಲವು ಹುದ್ದೆಗಳು ಖಾಲಿ ಇದ್ದವು. ಪ್ರತಿ ಇಲಾಖೆಯಲ್ಲಿ ಈ ರೀತಿಯ ಸಮಿತಿಗಳಿರುವುದು ಕಡ್ಡಾಯವಾಗಿದೆ. ಶಿಕ್ಷಣ ಇಲಾಖೆಯಲ್ಲಿಯೂ ಸಮಿತಿಯನ್ನು ರಚಿಸಲಾಗಿತ್ತು. ಆದರೆ, ಸಮಿತಿ ರಚನೆಗೊಂಡ ಕೆಲವೇ ದಿನಗಳಲ್ಲಿ ಹಲವು ಸದಸ್ಯರು ನಿವೃತ್ತಿ ಅಥವಾ ನೌಕರಿ ತೊರೆದಿದ್ದರು. ಇದೀಗ ಮಹಿಳಾ ಆಯೋಗದ ಸೂಚನೆಯನ್ವಯ ಸಮಿತಿಯನ್ನು ಪುನರ್ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಮಿತಿಯು ತನ್ನ ಬಳಿ ನೇರವಾಗಿ ದಾಖಲಾಗುವ ದೂರುಗಳನ್ನು ಮಾತ್ರ ಪರಿಶೀಲನೆ ನಡೆಸಲಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳು ಇತರೆ ದೂರುಗಳನ್ನು ನೋಡಿಕೊಳ್ಳಲಿದೆ. ಉನ್ನತ ಮಟ್ಟದ ದೂರುಗಳನ್ನು ಆಂತರಿಕ ದೂರುಗಳ ಸಮಿತಿಗೆ ರವಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಹೋದ್ಯೋಗಿಗಳಿಂದ ಕಿರುಕುಳ, ಅಸಭ್ಯ ವರ್ತನೆಯ, ಮಾನಸಿಕ ಹಿಂಸೆ, ಕೆಲಸಕ್ಕೆ ಅಡ್ಡಿಪಡಿಸುವುದು ಮತ್ತು ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಸಮಿತಿ ನೋಡಿಕೊಳ್ಳಲಿದೆ. ನಿಯಮಾನುಸಾರ ಸಕಾಲದಲ್ಲಿ ದೂರುಗಳನ್ನು ಇತ್ಯರ್ಥಪಡಿಸುವಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
إرسال تعليق