ಮೋದಿ ವಿದೇಶ ಪ್ರವಾಸದ ಎಫೆಕ್ಟ್: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಚೇರಿ!

 ಯುಎಸ್ ವೀಸಾ ಬೇಕೆಂದರೆ ಬೆಂಗಳೂರಿಗರು ಚೆನ್ನೈಗೆ ಹೋಗಬೇಕಿತ್ತು. ಈ ಸಮಸ್ಯೆ ಶೀಘ್ರದಲ್ಲೇ ದೂರಾಗಲಿದೆ. ಬೆಂಗಳೂರನಲ್ಲಿ ರಾಯಭಾರ ಕಚೇರಿ ತೆರೆಯುವುದಾಗಿ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

                                                                   ಸಂಗ್ರಹ ಚಿತ್ರ

Posted By : Rekha.M
Online Desk

ಬೆಂಗಳೂರು: ಯುಎಸ್ ವೀಸಾ ಬೇಕೆಂದರೆ ಬೆಂಗಳೂರಿಗರು ಚೆನ್ನೈಗೆ ಹೋಗಬೇಕಿತ್ತು. ಈ ಸಮಸ್ಯೆ ಶೀಘ್ರದಲ್ಲೇ ದೂರಾಗಲಿದೆ. ಬೆಂಗಳೂರನಲ್ಲಿ ರಾಯಭಾರ ಕಚೇರಿ ತೆರೆಯುವುದಾಗಿ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೆರಿಕಾ ಪ್ರವಾಸದಲ್ಲಿದ್ದು,ರಕ್ಷಣೆ, ಬಾಹ್ಯಾಕಾಶ, ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತಕ್ಕೆ ಅನುಕೂಲವಾಗಬಲ್ಲ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದರೊಂದಿಗೆ ಉಭಯ ರಾಷ್ಚ್ರಗಳ ಬಾಂಧವ್ಯ ಮತ್ತಷ್ಟು ಬಲಗೊಂಡಿದೆ.

ಪ್ರಧಾನಿ ಮೋದಿಯವರು ಅಮೆರಿಕಾ ಪ್ರವಾಸ ಕೈಗೊಂಡ ಬೆನ್ನಲ್ಲೇ ಹೇಳಿಕೆ ನೀಡಿರುವ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು, ಕಳೆದ ವರ್ಷ ಅಮೆರಿಕವು ಭಾರತೀಯ ವಿದ್ಯಾರ್ಥಿಗಳಿಗೆ ದಾಖಲೆಯ 125,000 ವೀಸಾಗಳನ್ನು ನೀಡಿದೆ. ಇದರೊಂದಿಗೆ ವಿದೇಶಿ ವಿದ್ಯಾರ್ಥಿಗಳ ಜನಸಂಖ್ಯೆಯಲ್ಲಿ ಭಾರತೀಯರು 20 ಪ್ರತಿಶತವನ್ನು ಹೊಂದಿದ್ದಾರೆ. ಇದೀಗ ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಹೊಸ ಕಾನ್ಸುಲೇಟ್‌ಗಳನ್ನು ತೆರೆಯಲು ಯುನೈಟೆಡ್ ಸ್ಟೇಟ್ಸ್ ಉದ್ದೇಶಿಸಿದೆ. ಭಾರತವು 2023 ರಲ್ಲಿ ಸಿಯಾಟಲ್‌ನಲ್ಲಿ ತನ್ನ ರಾಯಭಾರಿ ಕಚೇರಿಯನ್ನು ತೆರೆಯುವುದನ್ನು ಸ್ವಾಗತಿಸುತ್ತಿದೆ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹೊಸ ದೂತಾವಾಸವನ್ನು ಘೋಷಿಸಲು ಎದುರು ನೋಡುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಪ್ರಸ್ತುತ ದೇಶದಲ್ಲಿ ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಮಾತ್ರ ಅಮೆರಿಕಾ ರಾಯಭಾರಿ ಕಚೇರಿಗಳಿವೆ. ಅಮೆರಿಕಾಕ್ಕೆ ತೆರಳಲು ಬೆಂಗಳೂರಿಗರು ವೀಸಾ ಪಡೆಯಲು ಸಾಮಾನ್ಯವಾಗಿ ಚೆನ್ನೈ ಕಚೇರಿಗೆ ಭೇಟಿ ನೀಡಬೇಕಿದ್ದು. ಇದೀಗ ಬೆಂಗಳೂರಿನಲ್ಲಿಯೇ ಅಮೆರಿಕ ರಾಯಭಾರಿ ಕಚೇರಿ ಬರುವುದರಿಂದ ಅಮೆರಿಕ ವೀಸಾಕ್ಕಾಗಿ ಕನ್ನಡಿಗರು ಚೆನ್ನೈ ಅಥವಾ ಇತರ ಕಡೆಗಳಿಗೆ ತೆರಳುವುದು ತಪ್ಪಲಿದೆ.

ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರಿ ಕಚೇರಿ ತೆರೆಯುವಂತೆ ಮಾಡಬೇಕೆಂದು 2019ರಿಂದರೂ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಧ್ವನಿ ಎತ್ತುತ್ತಲೇ ಇದ್ದರು. ಇದೀಗ ಕೊನೆಗೂ ಬೆಂಗಳೂರಿನಲ್ಲಿ ರಾಯಭಾರಿ ಕಚೇರಿ ತೆರೆಯುವುದಾಗಿ ಅಮೆರಿಕಾ ಹೇಳಿದ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ತೇಜಸ್ವಿ ಸೂರ್ಯ ಅವರು ಧನ್ಯವಾದಗಳನ್ನು ಹೇಳಿದ್ದಾರೆ.

ಸಾವಿರಾರು ಐಟಿ-ಬಿಟಿ ಕಂಪನಿಗಳನ್ನು ಹೊಂದಿರುವ ಬೆಂಗಳೂರು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಅಮೆರಿಕಾ ರಾಯಭಾರಿ ಕಚೇರಿ ಬಹಳ ಹಿಂದೆಯೇ ಬೆಂಗಳೂರಿನಲ್ಲಿ ಆರಂಭವಾಗಬೇಕಿತ್ತು. ಕೊನೆಗೂ ನಗರಕ್ಕೆ ರಾಯಭಾರಿ ಕಚೇರಿ ಬರುತ್ತಿರುವುದು ಸಂತಸ ತಂದಿದೆ. ಇದು ಲಕ್ಷಾಂತರ ಕನ್ನಡಿಗರು ಹಾಗೂ ನಮ್ಮ ನಗರಕ್ಕೆ ಸಹಾಯ ಮಾಡಲಿದೆ. ಉನ್ನತ ಶಿಕ್ಷಣಕ್ಕಾಗಿ ಯುಎಸ್‌ಗೆ ಪ್ರಯಾಣಿಸುವ ಗುರಿ ಹೊಂದಿರುವ ನಗರದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ ಎಂದು ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರಿ ಕಚೇರಿ ಆರಂಭವಾಗುವುದರಿಂದ ನಗರದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಲ್ಲದೆ, ಭಾರತ ಮತ್ತು ಅಮೆರಿಕಾ ನಡುವಿನ ವಾಣಿಜ್ಯ ಮತ್ತು ಸಹಕಾರ ಹೆಚ್ಚಾಗಲಿದೆ. ಬೆಂಗಳೂರಿನ ಹಿತಾಸಕ್ತಿಗಳಿಗೆ ಉತ್ತೇಜನ ನೀಡಿದ್ದಕ್ಕಾಗಿ ಮತ್ತು ದೀರ್ಘಾವಧಿಯ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆಂದು ತಿಳಿಸಿದ್ದಾರೆ.


Post a Comment

أحدث أقدم