2024ರ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಸಿದ್ಧತೆ ಆರಂಭಿಸಿದೆ: ನಳಿನ್ ಕುಮಾರ್ ಕಟೀಲ್

 ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಗರಿಷ್ಠ ಸ್ಥಾನ ಗಳಿಸಲು ಬಿಜೆಪಿಯ ರಾಜ್ಯ ಘಟಕ ಸಿದ್ಧತೆ ಆರಂಭಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ ಕಟೀಲ್ ಅವರು ಶುಕ್ರವಾರ ಹೇಳಿದರು.

                                                         ನಳಿನ್ ಕುಮಾರ್ ಕಟೀಲ್.

Posted By : Rekha.M
Online Desk

ಕಲಬುರಗಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಗರಿಷ್ಠ ಸ್ಥಾನ ಗಳಿಸಲು ಬಿಜೆಪಿಯ ರಾಜ್ಯ ಘಟಕ ಸಿದ್ಧತೆ ಆರಂಭಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ ಕಟೀಲ್ ಅವರು ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವು ರಾಜ್ಯದಲ್ಲಿ ಸೋಲು ಕಂಡಿರುವುದು ಅನಿರೀಕ್ಷಿತ. ಆದರೆ, ಇದೇ ಫಲಿತಾಂಶ ಲೋಕಸಭಾ ಚುನಾವಣೆಯಲ್ಲಿ ಪುನರಾವರ್ತನೆಯಾಗುವುದಿಲ್ಲ. ರಾಜ್ಯದ ಜನರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ನಂಬಿಕೆ ಇದೆ. ಮೋದಿಯವರ ಆಡಳಿತವು ದೇಶದ ಎಲ್ಲಾ ವರ್ಗದ ಜನರಿಗೆ ಸಹಾಯ ಮಾಡಿದೆ. ಸಾಕಷ್ಟು ಜನರು ಒಂದಲ್ಲ ಒಂದು ಯೋಜನೆಯ ಫಲಾನುಭವಿಗಳಾಗಿದ್ದಾರೆ. ವಿಶ್ವದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಬಲ ರಾಷ್ಟ್ರಗಳು ಮತ್ತು ಅನೇಕ ದೇಶಗಳ ನಾಯಕರು ಪ್ರಧಾನಿ ಮೋದಿಯನ್ನು ಹೊಗಳುತ್ತಾರೆ. ಬಿಜೆಪಿ ಕಾರ್ಯಕರ್ತರು ರಾಜ್ಯದ ಎಲ್ಲ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದರು.

‘ಜೂನ್ ತಿಂಗಳಲ್ಲಿ ಪಕ್ಷವು ಜನಸಂಪರ್ಕ ಅಭಿಯಾನವನ್ನು ನಡೆಸುತ್ತಿದ್ದು, ಅದರ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸಲಾಗುತ್ತದೆ. ಇದಕ್ಕಾಗಿ ಏಳು ತಂಡಗಳನ್ನು ರಚಿಸಲಾಗಿದೆ. ಸಂಸದ ಡಿ.ವಿ. ಸದಾನಂದಗೌಡ ಅವರು ಮೈಸೂರು, ಚಾಮರಾಜನಗರ, ಆರ್. ಅಶೋಕ ಅವರು ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ, ಈಶ್ವರಪ್ಪ ಅವರು ಹುಬ್ಬಳ್ಳಿ ಭಾಗದಲ್ಲಿ ಸಭೆಗಳನ್ನು ನಡೆಸಲಿದ್ದಾರೆ. ಇದಕ್ಕಾಗಿ ಏಳು ತಂಡಗಳನ್ನು ರಚಿಸಲಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಶಾಸಕ ಬಸವರಾಜ ಬೊಮ್ಮಾಯಿ ಅವರೂ ಸಭೆಗಳಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಕಾರ್ಯಕರ್ತರ ಸಭೆಯ ಜೊತೆಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಾದ ಜನರನ್ನೂ ಭೇಟಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಚುನಾವಣಾ ಪ್ರಚಾರದ ವೇಳೆ ನೀಡಿದ ಭರವಸೆಗಳನ್ನು ಜಾರಿಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ, ಆದರೆ, ಈ ವಿಫಲತೆ ಕುರಿತು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.


Post a Comment

أحدث أقدم