ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಸಚಿವರಾಗಿ ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಜಮೀರ್ ಇಂಗ್ಲೀಷ್ ನಲ್ಲಿ ಪ್ರಮಾಣ ವಚನ
ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಸಚಿವರಾಗಿ ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಹೌದು.. ರಾಜ್ಯದ ನೂತನ ಸಚಿವರಾಗಿ ಜಮೀರ್ ಅಹ್ಮದ್ ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿರುವುದು ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅಂತಿಮವಾಗಿ ಪ್ರಮಾಣ ವಚನ ಸ್ವೀಕರಿಸಿದ ಜಮೀರ್ ಅಹ್ಮದ್ ಖಾನ್, ಅಲ್ಲಾಹ್ ಮತ್ತು ತಮ್ಮ ತಾಯಿಯ ಹೆಸರಿನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸಚಿವ ಜಮೀರ್ ನಡೆಗೆ ಸಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಸಚಿವ ಜಮೀರ್ ಅಹ್ಮದ್ ಖಾನ್ ಇನ್ನೂ ಕನ್ನಡ ಕಲಿಯದಿರುವುದು ನಾಚಿಕೆಗೇಡು
ಕನ್ನಡ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ಈ ಕುರಿತು ಟ್ವೀಟ್ ಮಾಡಿದ್ದು, ‘ಕರ್ನಾಟಕ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಜಮೀರ್ ಅಹ್ಮದ್ ಖಾನ್ ಅವರು ಇನ್ನೂ ಕನ್ನಡ ಕಲಿಯದಿರುವುದು ನಾಚಿಕೆಗೇಡು. ಎಲ್ಲ ಸಚಿವರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಜಮೀರ್ ಅಹಮದ್ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಕಾರಣಕ್ಕೆ ಬಂದು ಇಷ್ಟು ವರ್ಷಗಳಾದರೂ ಕನ್ನಡ ಕಲಿಯದಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.
ಅಂತೆಯೇ ಕರ್ನಾಟಕಕ್ಕೆ ಬರುವ ರಾಷ್ಟ್ರೀಯ ನಾಯಕರೇ ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಮಾಡುತ್ತಿರುವಾಗ ಈ ನಾಡಿನಲ್ಲೇ ಹುಟ್ಟಿರೋ ಜಮೀರ್ ಅಹ್ಮದ್ ಅವರೇ, ಇಷ್ಟು ವರ್ಷದಿಂದ ಇಲ್ಲೇ ಇದ್ದು ಕರ್ನಾಟಕದಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದಿಲ್ಲ. ಅಂದರೆ ನಿಮಗೇನು ಹೇಳೋದು. ಮೊದಲು ಕನ್ನಡ ಮಿಕ್ಕಿದ್ದು ಆಮೇಲೆ. ನಿಮ್ಮ ಈ ನಡೆಗೆ ನಮ್ಮ ವಿರೋಧ ಇದೆ’ ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಂತ್ರಿ ಮಂಡಲದಲ್ಲಿ ನಾಲಾಯಕ್ ಮಂತ್ರಿ ನಂಬರ್ 1: ಜಮೀರ್ ಅಹ್ಮದ್ ಖಾನ್. ಸಜ್ಜನರಾದ ಸಲೀಂ ಅಹ್ಮದ್ ಹಾಗೂ ರಿಜ್ವಾನ್ ಅರ್ಷದ್ ಇದ್ದರೂ ವಿಷಯಗಳ ವ್ಯತ್ಯಾಸ ತಿಳಿಯದೇ, ಕನ್ನಡ ಬಾರದ ದಪ್ಪ ನಾಲಿಗೆಯಿಂದ ಎಗ್ಗಿಲ್ಲದೇ ಮಾತನಾಡುವ ಈತನಿಗೆ ಸಂಪುಟ ದರ್ಜೆ ಮಂತ್ರಿ ಪದವಿ ಕೊಟ್ಟಿರುವುದು ಒಂದು ದೊಡ್ಡ ಕಪ್ಪು ಚುಕ್ಕೆ ಎಂದು ಪ್ರಹ್ಲಾದ್ ಹನುಮಂತಯ್ಯ ಎಂಬುವರು ಟೀಕಿಸಿದ್ದಾರೆ.
ಇನ್ನು 2018ರ ಚುನಾವಣೆಯ ಪ್ರಚಾರದ ಅಂತಿಮ ದಿನದಂದು ಮತಯಾಚನೆ ವೇಳೆ ಮಾತನಾಡಿದ್ದ ಜಮೀರ್ ಅಹ್ಮದ್, ನಾನು ಮೊದಲು ಕನ್ನಡಿಗ.. ಆಮೇಲೆ ಮುಸ್ಲಿಂ ಎಂದು ಹೇಳಿದ್ದರು. ಇಂತಹ ಜಮೀರ್ ಅಹ್ಮದ್ ಇಂದು ಕನ್ನಡ ಬಿಟ್ಟು ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಸಹಜವಾಗಿಯೇ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
إرسال تعليق