ವರದಕ್ಷಿಣೆ ಪ್ರಕರಣದಲ್ಲಿ ಹೇಳಿಕೆ ನೀಡುವ ಸಲುವಾಗಿ ಠಾಣೆಗೆ ಬಂದ ಮಹಿಳೆಯ ಮೈ ಕೈ ಮುಟ್ಟಿ ಅನುಚಿತ ವರ್ತನೆ ತೋರಿದ್ದಾರೆಂದು ಸುದ್ದಗುಂಟೆಪಾಳ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು: ವರದಕ್ಷಿಣೆ ಪ್ರಕರಣದಲ್ಲಿ ಹೇಳಿಕೆ ನೀಡುವ ಸಲುವಾಗಿ ಠಾಣೆಗೆ ಬಂದ ಮಹಿಳೆಯ ಮೈ ಕೈ ಮುಟ್ಟಿ ಅನುಚಿತ ವರ್ತನೆ ತೋರಿದ್ದಾರೆಂದು ಸುದ್ದಗುಂಟೆಪಾಳ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಸಬ್ ಇನ್ಸ್‌ಪೆಕ್ಟರ್ ಮಂಜುನಾಥ ಸ್ವಾಮಿ ವಿರುದ್ಧ ಇಂತಹದೊಂದು ಗಂಭೀರ ಆರೋಪ ಕೇಳಿ ಬಂದಿದ್ದು, ಶೀತಲ್ ಸುಸಾನ ಅಬ್ರಹಾಂ ಎನ್ನುವ ಮಹಿಳೆ ಕಮಿಷನರ್‍ಗೆ ಟ್ಯಾಗ್ ಮಾಡಿ ಸರಣಿ ಟ್ವೀಟ್ ಮಾಡಿದ್ದಾರೆ.
ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ ಸ್ವಾಮಿ ಅವರು ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದು, ಅಲ್ಲದೇ ವಾಟ್ಸಾಪ್ ಮೆಸೇಜ್ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಸರಣಿ ಟ್ವೀಟ್ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ ಅಳಲುತೋಡಿಕೊಂಡಿದ್ದಾರೆ.
ಏಪ್ರಿಲ್ 8ರಂದು ನನ್ನ ಸಹೋದರ ಸ್ನೇಹಿತನ ವರದಕ್ಷಿಣೆ ಪ್ರಕರಣದಲ್ಲಿ ಸಾಕ್ಷಿ ಹೇಳಿಕೆ ನೀಡಲು ಸ್ಟೇಷನ್ಗೆ ಹೋಗಿದ್ದ ವೇಳೆ ಸಬ್ ಇನ್ಸ್ ಪೆಕ್ಟರ್ ಮಂಜುನಾಥ ಸ್ವಾಮಿ ಅವರು ನನ್ನ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೇ ಮನೆಗೆ ಹೋಗಿ ಕರೆ ಮಾಡಿ ಹಾಗೂ ನಿಮ್ಮ ಪೋಟೊಗಳನ್ನ ಕಳುಹಿಸಿ ಎಂದಿದ್ದಾರೆ ಎಂದು ಶೀತಲ್ ಸುಸಾನ ಅಬ್ರಹಾಂ ಎನ್ನುವ ಮಹಿಳೆ ಟ್ವಿಟ್ಟರ್ನಲ್ಲಿ ಆರೋಪಿಸಿದ್ದಾರೆ. ಅಲ್ಲದೇ ವಾಟ್ಸಾಪ್ ಮೆಸೇಜ್ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದು, ಇನ್ನು ಮಹಿಳೆಯ ಟ್ವೀಟ್ಗೆ ಬೆಂಗಳೂರು ನಗರ ಪೊಲೀಸ್, ಪ್ರತಿಕ್ರಿಯಿಸಿ ಈ ಬಗ್ಗೆ ಸಂಪೂರ್ಣ ಮಾಹಿತಿ ಕೇಳಿದ್ದಾರೆ.
ಇನ್ನು ಈ ಟ್ವೀಟ್ ವೈರಲ್ ಆದ ಬೆನ್ನಲ್ಲೇ ಮಹಿಳೆ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಆಕೆ ಕುಟುಂಬದ ಒತ್ತಡದಿಂದಾಗಿ ನನ್ನ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದೇನೆ ಎಂದು ಹೇಳಿದ್ದಾಳೆ.
ಇಷ್ಟಕ್ಕೂ ಟ್ವೀಟ್ನಲ್ಲಿ ಏನಿದೆ?
ವಿಚ್ಛೇದನ ಪ್ರಕರಣಕ್ಕೆ ಸಾಕ್ಷಿ ಹೇಳಿಕೆ ನೀಡಲು ನಾನು ಪೊಲೀಸ್ ಠಾಣೆಗೆ ಹೋಗಿದ್ದೆ, ಅದು ನನ್ನ ಸ್ನೇಹಿತನ ಸಹೋದರನಿಗಾಗಿ. ಪೊಲೀಸ್ ಠಾಣೆಯಲ್ಲಿ ನಾನು ಹೇಳಿಕೆ ನೀಡಲು ಸಬ್ ಇನ್ಸ್‌ಪೆಕ್ಟರ್ ಜತೆ ಮಾತನಾಡಬೇಕಿತ್ತು. ಆರಂಭದಲ್ಲಿ ಆತ ತುಂಬಾ ಸ್ನೇಹಪರನಾಗಿದ್ದರು. ಆದರೆ, ನಂತರ ಅವರ ನಿಜವಾದ ಬಣ್ಣಗಳು ಹೊರಹೊಮ್ಮಲು ಪ್ರಾರಂಭಿಸಿದವು ಮತ್ತು ಪರಿಸ್ಥಿತಿ ತುಂಬಾ ಅಹಿತಕರವಾಗಲು ಪ್ರಾರಂಭಿಸಿತು. ನನ್ನೊಂದಿಗೆ ಚೆಲ್ಲಾಟವಾಡಲು ಪ್ರಾರಂಭಿಸಿದರು.
ವಿಚಾರಣೆ ಸಮಯದಲ್ಲಿ ನನ್ನ ಕೈಯನ್ನು ಹಿಡಿದು ಮುದ್ದಿಸಲು ಪ್ರಾರಂಭಿಸಿದರು. ನಾನು ಭಯಭೀತಳಾದೆ. ಮೊದಲು ನನ್ನ ಹೇಳಿಕೆಯನ್ನು ಪೂರ್ಣಗೊಳಿಸೋಣ ಎಂದು ಭಯದಿಂದ ಸುಮ್ಮನಾದೆ. ಹೇಳಿಕೆಯನ್ನು ಕೊಟ್ಟ ಬಳಿಕ ಆತ ತನ್ನ ಮೊಬೈಲ್ ನಂಬರ್ ತೆಗೆದಿಟ್ಟು ಕರೆ ಮಾಡಲು ಕೇಳಿದರು. ಅದೃಷ್ಟವಶಾತ್, ನನ್ನ ತಾಯಿ ನನಗೆ ಸರಿಯಾದ ಸಮಯಕ್ಕೆ ಕರೆ ಮಾಡಿದರು ಮತ್ತು ಪೊಲೀಸ್ ಠಾಣೆಯಿಂದ ಹೊರಬರಲು ನಾನು ಅವರ ಕರೆಯನ್ನು ನೆಪವಾಗಿ ಬಳಸಿಕೊಂಡೆ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಈ ಪ್ರಕರಣ ಹಿರಿಯ ಅಧಿಕಾರಿಗಳ ಗಮನಕ್ಕೆ ಬರುತ್ತಲೇ ಅವರು ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. "ನಾವು ಸಂತ್ರಸ್ಥ ಮಹಿಳೆಯೊಂದಿಗೆ ಮಾತನಾಡಿದ್ದೇವೆ. ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಠಾಣೆಯ ಒಳಗೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತೇವೆ ಮತ್ತು ಸಬ್ ಇನ್ಸ್‌ಪೆಕ್ಟರ್ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಘಟನೆಯ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ಹೇಳಿದರು.
إرسال تعليق