ಕಿಚ್ಚ ಸುದೀಪ್ ಗೆ ಅವಮಾನ ಮಾಡಿದ ಕಾಂಗ್ರೆಸ್, ಜೆಡಿಎಸ್ ಗೆ ಜನರಿಂದ ತಕ್ಕ ಉತ್ತರ- ಗೌರವ್ ಭಾಟಿಯಾ

 ಕನ್ನಡಿಗರ ನೆಚ್ಚಿನ ನಟ ಕಿಚ್ಚ ಸುದೀಪ್ ಅವರ ನಿಲುವನ್ನು ಪ್ರಶ್ನಿಸುವ ಮತ್ತು ಅವರನ್ನು ಅವಮಾನಿಸಿರುವ  ಕಾಂಗ್ರೆಸ್- ಜೆಡಿಎಸ್ ಪಕ್ಷಕ್ಕೆ ಪ್ರಜ್ಞಾವಂತ ಜನತೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.

                                                     ಸುದೀಪ್, ಗೌರವ್ ಭಾಟಿಯಾ

By : Rekha.M
Online Desk

ಬೆಂಗಳೂರು: ಕನ್ನಡಿಗರ ನೆಚ್ಚಿನ ನಟ ಕಿಚ್ಚ ಸುದೀಪ್ ಅವರ ನಿಲುವನ್ನು ಪ್ರಶ್ನಿಸುವ ಮತ್ತು ಅವರನ್ನು ಅವಮಾನಿಸಿರುವ ಕಾಂಗ್ರೆಸ್- ಜೆಡಿಎಸ್ ಪಕ್ಷಕ್ಕೆ ಪ್ರಜ್ಞಾವಂತ ಜನತೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮಗೆ ಬೇಕಾದಂತೆ ವಿಶ್ಲೇಷಿಸಿ ಬಳಸುತ್ತಾರೆ. ಸುದೀಪ್ ಪ್ರಜಾಸತ್ತೆಯ ಸ್ವಾತಂತ್ರ್ಯದ ಆಧಾರದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಬೆಂಬಲಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಆದರೆ, ಅವರ ವಿರುದ್ಧ ಇವೆರಡು ಪಕ್ಷಗಳು ವಿರುದ್ಧ ಟೀಕೆ ಮಾಡುತ್ತಿವೆ. ವಿವಿಧ ಏಜೆನ್ಸಿಗಳಿಂದ ತನಿಖೆ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾಗಿ ಟೀಕಿಸುತ್ತಿವೆ ಎಂದು ಆಕ್ಷೇಪಿಸಿದರು.

ಭಾರತ್ ಜೋಡೋ ಹೆಸರಿನ ಭಾರತ್ ತೋಡೋ ಯಾತ್ರೆ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜೊತೆ ದೇಶದ್ರೋಹಿಗಳು, ತುಕ್ಡೇ ತುಕ್ಡೇ ಗ್ಯಾಂಗಿನವರು ಹೆಜ್ಜೆ ಹಾಕಿದ್ದರು. ರಾಹುಲ್ ಗಾಂಧಿಯವರಿಗೆ ಜನಪ್ರಿಯತೆ ಇಲ್ಲದ ಕಾರಣ ಸ್ವರಾ ಭಾಸ್ಕರ್ ಅವರಂಥವರು ಬೇಕಾಯಿತೇ ಎಂದು ಪ್ರಶ್ನಿಸಿದರು. ದೇಶದ ವಿರುದ್ಧ ಘೋಷಣೆ ಕೂಗುವವರು ಅವರಿಗೆ ಬೇಕಾಯಿತು ಎಂದು ಆರೋಪಿಸಿದರು.

ಕಾಂಗ್ರೆಸ್- ಜೆಡಿಎಸ್‍ನದು ಅನಾರೋಗ್ಯದ ಮನಸ್ಥಿತಿ, ಬೂಟಾಟಿಕೆ ಎಂದು ಟೀಕಿಸಿದ ಅವರು,  ಸುದೀಪ್  ಪರಿಶ್ರಮದಿಂದ ಸ್ವತಃ ಜನರ ನಡುವೆ ಬೆಳೆದು ಅಪಾರ ಜನಪ್ರಿಯತೆ ಗಳಿಸಿದವರು. ರಾಹುಲ್ ಗಾಂಧಿಯಂತೆ ಕುಟುಂಬದ ಆಧಾರದಲ್ಲಿ ಬಂದವರಲ್ಲ. ಈ ಮೂಲಕ ಬುಡಕಟ್ಟು ಸಮಾಜದವರನ್ನು ಟೀಕಿಸುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನವಲ್ಲವೇ? ಸುದೀಪ್ ಅವರಂಥ ಸಿನಿತಾರೆ ತಮ್ಮ ಬೆಂಬಲವನ್ನು ಯಾರಿಗೆ ಕೊಡಬೇಕೆಂದು ಆಯ್ಕೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲವೇ? ಎಂದು ಕೇಳಿದರು. ಬಿಜೆಪಿ ರಾಷ್ಟ್ರಪತಿ ಸ್ಥಾನವನ್ನು ಬುಡುಕಟ್ಟು ಸಮುದಾಯಕ್ಕೆ ಕೊಟ್ಟಿದೆ ಎಂದು ನೆನಪಿಸಿದರು.

ಕರ್ನಾಟಕದ ಜನತೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕಡೆ ಆದ್ಯತೆ ಕೊಟ್ಟು ಬಿಜೆಪಿಯ ಕಡೆ ಒಲವು ತೋರುತ್ತಿದ್ದಾರೆ. ದುರ್ಬಲ ಸಮುದಾಯಕ್ಕೆ ಒಳ ಮೀಸಲಾತಿ ಕೊಟ್ಟ ಸರಕಾರ ನಮ್ಮ ಬಿಜೆಪಿಯದು. ಸುದೀಪ್ ಬೆಂಬಲದಿಂದ ಕಾಂಗ್ರೆಸ್ -ಜೆಡಿಎಸ್ ಇನ್ನಷ್ಟು ದುರ್ಬಲವಾಗುವ ಆತಂಕ ಅವೆರಡು ಪಕ್ಷದವರಲ್ಲಿದೆ. ಅವರ ವಿರುದ್ಧ ಮಾಡಿದ ಟೀಕೆ ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ. ಈ ಚುನಾವಣಾ ಸಮರ ರಾಷ್ಟ್ರಹಿತ ವಿಚಾರಧಾರೆಯ ಆಧಾರದಲ್ಲಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು. ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 




Post a Comment

أحدث أقدم