ಲೈಂಗಿಕ ಕಿರುಕುಳ ನೀಡುತ್ತಿದ್ದ ರ‍್ಯಾಪಿಡೊ ಚಾಲಕನಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಚಲಿಸುತ್ತಿದ್ದ ಬೈಕ್‌ನಿಂದಲೇ ಜಿಗಿದಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಬೆಂಗಳೂರು: ಲೈಂಗಿಕ ಕಿರುಕುಳ ನೀಡುತ್ತಿದ್ದ ರ‍್ಯಾಪಿಡೊ ಚಾಲಕನಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಚಲಿಸುತ್ತಿದ್ದ ಬೈಕ್‌ನಿಂದಲೇ ಜಿಗಿದಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಬೆಂಗಳೂರಿನ ಇಂದಿರಾನಗರದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಆರ್ಕಿಟೆಕ್ಚರ್ ಆಗಿರುವ 30 ವರ್ಷದ ಯುವತಿಯೊಬ್ಬಳು ಕಳೆದ ಏ. 21ರಂದು ರಾತ್ರಿ 11.30ರ ಸುಮಾರಿನಲ್ಲಿ ಆನ್‌ಲೈನ್ ಆ್ಯಪ್ ಮೂಲಕ ರ‍್ಯಾಪಿಡೊ ಬೈಕ್ ಅನ್ನು ಬುಕ್ ಮಾಡಿದ್ದಳು. ನಿಗದಿತ ಸ್ಥಳಕ್ಕೆ ಬಂದ ರ‍್ಯಾಪಿಡೊ ಬೈಕ್ ಚಾಲಕ ಯುವತಿಯನ್ನು ಹತ್ತಿಸಿಕೊಂಡಿದ್ದು, ಅಲ್ಲಿಂದ ಇಂದಿರಾನಗರಕ್ಕೆ ಬೈಕ್ ತೆರಳಬೇಕಿತ್ತು. ಆದರೆ, ಆತ ಅಲ್ಲಿಗೆ ಕರೆದೊಯ್ಯದೆ ಒಟಿಪಿ ಪರಿಶೀಲಿಸುವ ನೆಪದಲ್ಲಿ ಆಕೆಯ ಫೋನ್ ತೆಗೆದುಕೊಂಡು ದೊಡ್ಡಬಳ್ಳಾಪುರಕ್ಕೆ ಹೋಗಲು ಯತ್ನಿಸಿದ್ದಾನೆ.
ಬೈಕ್ ನಿಗದಿತ ಸ್ಥಳಕ್ಕೆ ಹೋಗದೆ ಇರುವುದನ್ನು ಗಮನಿಸಿದ ಯುವತಿ ಕೂಡಲೇ ಚಾಲಕನನ್ನು ಪ್ರಶ್ನಿಸಿದ್ದಾಳೆ. ಆದರೆ ಇದ್ಯಾವುದಕ್ಕೂ ಉತ್ತರಿಸದ ಆತ ಬೈಕ್ ವೇಗವನ್ನು ಹೆಚ್ಚಿಸಲು ಮುಂದಾಗಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಕೂಡಲೇ ಆತನ ಬಳಿಯಿದ್ದ ತನ್ನ ಫೋನ್‌ನನ್ನು ಕಸಿದುಕೊಂಡು, ಗಾಡಿ ನಿಲ್ಲಿಸುವಂತೆ ಹೇಳಿದ್ದಾಳೆ. ಪಾನಮತ್ತನಾಗಿದ್ದ ಆ ಚಾಲಕ ಗಾಡಿ ನಿಲ್ಲಿಸದೇ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಆತನಿಂದ ರಕ್ಷಿಸಿಕೊಳ್ಳಲು ಬಿಎಂಎಸ್ ಕಾಲೇಜು ಸಮೀಪ ಚಲಿಸುತ್ತಿದ್ದಾಗಲೇ ರಾಪಿಡೊ ಬೈಕಿನಿಂದ ಜಿಗಿದಿದ್ದಾಳೆ.
ತನಗಾದ ಕರಾಳ ಅನುಭವವನ್ನು ಯುವತಿ ಪೊಲೀಸ್ ದೂರಿನಲ್ಲಿ ಹಂಚಿಕೊಂಡಿದ್ದು, ಈ ಸಂಬಂಧ ರ‍್ಯಾಪಿಡೋ ಸಂಸ್ಥೆಗೂ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದು, ಯುವತಿಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಲೈಂಗಿಕ ಕಿರುಕುಳ, ಅಪಹರಣ, ಹಲ್ಲೆ ಅಥವಾ ಕ್ರಿಮಿನಲ್ ಕೇಸ್ ದಾಖಲು ಮಾಡಿ ತನಿಖೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
إرسال تعليق