ವಿಧಾನಸಭಾ ಚುನಾವಣೆ: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಮತದಾರ ಓಲೈಸಲು ರಾಜಕೀಯ ಪಕ್ಷಗಳಿಂದ ಆಹಾರ ವಿತರಕ ಸಂಸ್ಥೆ, ಮಕ್ಕಳ ಬಳಕೆ!

 ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಓಲೈಸಲು ಮದ್ಯ, ನಗದು, ಉಡುಗೊರೆ ಮತ್ತು ಇತರೆ ವಸ್ತುಗಳನ್ನು ನೀಡಲು ರಾಜಕೀಯ ಪಕ್ಷಗಳು ನವೀನ ಮಾರ್ಗಗಳನ್ನು ಕಂಡು ಕೊಂಡಿದ್ದು, ಆಹಾರ ವಿತರಕ ಸಂಸ್ಥೆ, ಮಕ್ಕಳ ಬಳಕೆ ಮಾಡಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ.

                                                                          ಸಂಗ್ರಹ ಚಿತ್ರ

By : Rekha.M 
Online Desk

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಓಲೈಸಲು ಮದ್ಯ, ನಗದು, ಉಡುಗೊರೆ ಮತ್ತು ಇತರೆ ವಸ್ತುಗಳನ್ನು ನೀಡಲು ರಾಜಕೀಯ ಪಕ್ಷಗಳು ನವೀನ ಮಾರ್ಗಗಳನ್ನು ಕಂಡು ಕೊಂಡಿದ್ದು, ಆಹಾರ ವಿತರಕ ಸಂಸ್ಥೆ, ಮಕ್ಕಳ ಬಳಕೆ ಮಾಡಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ.

ಚುನಾವಣೆ ಹಿನ್ನೆಲೆ ಅಕ್ರಮ ಚಟುವಟಿಕೆಗಳ ತಡೆಯಲು ಚುನಾವಣಾ ಆಯೋಗ ಈಗಾಗಲೇ ಎಲ್ಲೆಡೆ ಬಿಗಿ ಭದ್ರತೆಗಳನ್ನು ನಿಯೋಜಿಸಿದ್ದು, ವಾಹನಗಳ ತಪಾಸಣೆಗೆ ಎಲ್ಲೆಡೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿದ್ದಾರೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಶಾಲಾ ಮಕ್ಕಳನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲು, ತಮ್ಮ ಪರವಾಗಿ ಮತ ಚಲಾಯಿಸುವಂತೆ ಮಕ್ಕಳ ಮೂಲಕ ಜನರಿಗೆ ಉಡುಗೊರೆ ಹಾಗೂ ಹಣವನ್ನು ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಮೈಸೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿಯೂ ಇಂತಹ ಬೆಳವಣಿಗೆಗಳು ಕಂಡು ಬಂದಿದ್ದು.

ಈ ಚುನಾವಣೆಯಲ್ಲಿ ಪ್ರತೀ ಕುಟುಂಬಕ್ಕೆ ರೂ.500 ನೀಡುವಂತೆ 10 ವರ್ಷದೊಳಗಿನ ಮಕ್ಕಳಿಗೆ ಸೂಚಿಸಲಾಗಿತ್ತು. ಪೊಲೀಸರುಹಾಗೂ ಅಧಿಕಾರಗಳ ಕೈಗೆ ಮಕ್ಕಳು ಸಿಕ್ಕಿಬೀಳದ ಪರಿಣಾಮ ಈ ಕಾರ್ಯ ಮಾಡಿದ ಮಕ್ಕಳಿದೆ ಕೈತುಂಬ ಹಣವನ್ನು ನೀಡಲಾಗಿತ್ತು. ಇದೇ ಪ್ರಯತ್ನವನ್ನು ರಾಜಕೀಯ ಪಕ್ಷಗಳು ಮತ್ತೊಮ್ಮೆ ಪ್ರಯೋಗಿಸಲು ಮುಂದಾಗಿದ್ದಾರೆಂದು ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ಇದು ಕೇವಲ ಮೈಸೂರು ಜಿಲ್ಲೆಗಷ್ಟೇ ಸೀಮಿತವಾಗಿಲ್ಲ, ಮಂಡ್ಯ, ಚಾಮರಾಜನಗರ ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗದ ರಾಜಕಾರಣಿಗಳು ಶಾಲಾ ಮಕ್ಕಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆಂದು ಹೇಳಿದ್ದಾರೆ.

‘ರಾಜಕಾರಣಿಗಳ ಏಜೆಂಟ್'ಗಳು ಹಳ್ಳಿಗಳಲ್ಲಿ ಮತದಾರರಿಗೆ ಮದ್ಯ, ಹಣ ಪೂರೈಕೆ ಮಾಡಲು ಮಕ್ಕಳಿಗೆ 100 ರೂಪಾಯಿ ನೀಡುತ್ತಿದ್ದಾರೆಂದು ಗುಂಡ್ಲುಪೇಟೆ ನಿವಾಸಿ ಚಿಕ್ಕಣ್ಣ ಅವರು ಹೇಳಿದ್ದಾರೆ.

ಇದಷ್ಟೇ ಅಲ್ಲದೆ, ಚುನಾವಣಾ ಅಧಿಕಾರಿಗಳು ಸಾಮಾನ್ಯವಾಗಿ ಆಹಾರ ವಿತರಣಾ ಕಾರ್ಯನಿರ್ವಾಹಕರ ಮೇಲೆ ನಿಗಾ ಇಡದ ಕಾರಣ ಮತದಾರರಿಗೆ ಉಡುಗೊರೆಗಳು ಮತ್ತು ಹಣವನ್ನು ತಲುಪಿಸಲು ಫುಡ್ ಡೆಲಿವರಿ ಸಂಸ್ಥೆಗಳು, ಡೆಲಿವರಿ ಅಪ್ಲಿಕೇಶನ್‌ಗಳು, ಪಿಕ್-ಅಪ್ ಮತ್ತು ಡ್ರಾಪ್ ಸೇವಾ ಪೂರೈಕೆದಾರರನ್ನೂ ಬಳಸಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.

“ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಂತಹ ಪ್ರಯೋಗವನ್ನು ನಡೆಸಲಾಗಿತ್ತು, ಅಲ್ಲಿ ನಮ್ಮ ಡೆಲಿವರಿ ಸಹೋದ್ಯೋಗಿಯೊಬ್ಬರ ಮೂಲಕ ಆಹಾರದ ಜೊತೆಗೆ ಮದ್ಯವನ್ನೂ ರವಾನಿಸಲಾಗಿತ್ತು. ಇದಕ್ಕಾಗಿ ಫುಟ್ ಡೆಲಿವರಿ ಏಜೆಂಟ್'ಗೆ ಹೆಚ್ಚುವರಿ ಶುಲ್ಕವನ್ನು ನೀಡಲಾಗಿತ್ತು. ಮುಂದಿನ ಚುನಾವಣೆಯಲ್ಲೂ ಇವರ ಬಳಕೆ ಮಾಡಿಕೊಳ್ಳಲು ದೂರವಾಣಿ ಸಂಖ್ಯೆಗಳನ್ನು ತೆಗೆದುಕೊಂಡಿದ್ದರು. ಇಂತಹ ಚಟುವಟಿಕೆಗಳ ಮೇಲೂ ನಿಗಾ ಇಡುವ ಅಗತ್ಯವಿದೆ ಎಂದು ಆಹಾರ ವಿತರಣಾ ಕಾರ್ಯನಿರ್ವಾಹಕರೊಬ್ಬರು ಹೇಳಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ರಾಜೇಂದ್ರ ಅವರು ಪ್ರತಿಕ್ರಿಯೆ ನೀಡಿ, ಚುನಾವಣಾ ಪ್ರಚಾರ ಕಾರ್ಯಗಳಿಗೆ ಮಕ್ಕಳ ಬಳಕೆ ಮಾಡದಂತೆ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಅಂತಹ ಉಲ್ಲಂಘನೆಗಳನ್ನು ಅಥವಾ ಅಂತಹ ಚಟುವಟಿಕೆಗಳಿಗೆ ಮಕ್ಕಳ ದುರುಪಯೋಗವನ್ನು ಪರಿಶೀಲಿಸಲು ಬೂತ್ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಹಾರ ವಿತರಣಾ ಕಾರ್ಯನಿರ್ವಾಹಕರ ಬಳಕೆಯ ಬಗ್ಗೆ ಮಾತನಾಡಿ, ವಿಜಿಲೆನ್ಸ್ ತಂಡವು ಅಂತಹ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾವಹಿಸಿದೆ. ಅಂತಹ ಚಟುವಟಿಕೆಗಳು ವರದಿಯಾದಾಗ, ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿದ ಆರು ಮದ್ಯದಂಗಡಿಗಳ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.




Post a Comment

أحدث أقدم