ಬಳಕೆಯಾಗದ ಕಾಗದಗಳನ್ನು ಮರುಬಳಕೆ ಮಾಡುವ ಬೆಂಗಳೂರು ಮೂಲದ ವೈದ್ಯ ಮತ್ತು ಅವರ ಪುತ್ರನ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಡಾ.ದೀಪಕ್ ಹಾಗೂ ಪ್ರಧಾನಿ ಮೋದಿ
ಬೆಂಗಳೂರು: ಬಳಕೆಯಾಗದ ಕಾಗದಗಳನ್ನು ಮರುಬಳಕೆ ಮಾಡುವ ಬೆಂಗಳೂರು ಮೂಲದ ವೈದ್ಯ ಮತ್ತು ಅವರ ಪುತ್ರನ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಸಕ್ರ ವರ್ಲ್ಡ್ ಆಸ್ಪತ್ರೆಯಲ್ಲಿ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಆಗಿ ಕೆಲಸ ಮಾಡುವ ಡಾ ದೀಪಕ್ ಕೃಷ್ಣಮೂರ್ತಿ ಅವರನ್ನು ಮೋದಿಯವರು ಶ್ಲಾಘಿಸಿದ್ದಾರೆ.
ವೇಸ್ಟ್ ಈಸ್ ವೆಲ್ತ್ ಥೀಮ್ ಅಡಿ ವಸ್ತುಗಳ ಮರುಬಳಕೆ ಮಾಡಿ ಎನ್ನುವ ಜಾಗೃತಿಯನ್ನು ದೀಪಕ್ ಮೂಡಿಸಿದ್ದರು. ಈ ಪ್ರಯತ್ನಕ್ಕೆ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೀಪಕ್ ಅವರು ಒಂದು ಟ್ವೀಟ್ ಮಾಡಿದ್ದು ಅದು ಸಾಕಷ್ಟು ಜನರ ಗಮನ ಸೆಳೆದಿತ್ತು. ದೀಪಕ್ ಅವರು ನೋಟ್‌ಬುಕ್‌ನಲ್ಲಿ ಉಳಿದ ಖಾಲಿ ಹಾಳೆಗಳನ್ನೇ ಬೈಂಡಿಂಗ್ ಮಾಡಿದ ಒಂದು ಫೋಟೋ ತೆಗೆದು ಶೇರ್ ಮಾಡಿದ್ದರು. ಅದರಲ್ಲಿ ಪ್ರತಿ ಶೈಕ್ಷಣಿಕ ವರ್ಷಾಂತ್ಯದಲ್ಲಿ ನನ್ನ ಮಗ ಆತನ ನೋಟ್‌ಬುಕ್‌ಗಳಿಂದ ಖಾಲಿ ಹಾಳೆಗಳನ್ನು ಹೊರ ತೆಗೆಯುತ್ತಾನೆ. ನಾನು ಅದನ್ನ ಬೈಂಡಿಂಗ್ ಮಾಡಿಕೊಡುತ್ತೇನೆ. ಅದನ್ನ ರಫ್ ವರ್ಕ್ ಹಾಗೂ ಅಭ್ಯಾಸಕ್ಕಾಗಿ ಆತ ಬಳಕೆ ಮಾಡುತ್ತಾನೆ ಎಂದು ಹೇಳಿದ್ದರು.
ಈ ಟ್ವೀಟ್‌ಗೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದು, "ಇದು ಸುಸ್ಥಿರ ಜೀವನದ ದೊಡ್ಡ ಸಂದೇಶದೊಂದಿಗೆ ಉತ್ತಮ ತಂಡದ ಪ್ರಯತ್ನವಾಗಿದೆ. ನಿಮ್ಮ ಮಗನಿಗೆ ಮತ್ತು ನಿಮಗೆ ಅಭಿನಂದನೆಗಳು. ಇದೇ ರೀತಿಯ ಪ್ರಯತ್ನಗಳನ್ನು ಇತರರು ನನ್ನೊಂದಿಗೆ ಹಂಚಿಕೊಳ್ಳಲಿ ಎಂದು ಬಯಸುತ್ತೇನೆ. ಇದು ಮರುಬಳಕೆ ಮತ್ತು ವೇಸ್ಟ್ ಈಸ್ ವೆಲ್ತ್ ಕುರಿತು ಹೆಚ್ಚಿನ ಅರಿವು ಮೂಡಿಸುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಡಾ.ದೀಪಕ್ ಕೃಷ್ಣಮೂರ್ತಿ ಅವರು ಪ್ರತಿಕ್ರಿಯೆ ನೀಡಿದ್ದು, "ನನ್ನ ಟ್ವೀಟ್ ವೈರಲ್ ಆಗುತ್ತದೆ ಮತ್ತು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆದು ನಾನು ನಿರೀಕ್ಷಿಸಿರಲಿಲ್ಲ. ನನ್ನ ಸ್ನೇಹಿತ ನನಗೆ ಕರೆ ಮಾಡಿದ ನಂತರವೇ ನನಗೆ ಈ ವಿಷಯ ತಿಳಿದಿತ್ತು. ನನ್ನ ಮಗ ಆದಿತ್ಯ ಅವದಾನಿ ಕೂಡ ಶಾಕ್ ನಲ್ಲಿದ್ದಾನೆಂದು ಹೇಳಿದ್ದಾರೆ.
ನನ್ನ ಪತ್ನಿ ವರ್ಷಾ ರಘುರಾಮನ್ ಅವರು ವೈಟ್‌ಫೀಲ್ಡ್‌ನಲ್ಲಿರುವ ಡೀನ್ಸ್ ಅಕಾಡೆಮಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಸ್ತುಗಳ ಮರುಬಳಕೆ ಮಾಡಲು ನನ್ನ ಮಗ ಮತ್ತು ಶಾಲೆಯ ವಿದ್ಯಾರ್ಥಿಗಳಿಗೆ ವರ್ಷಾ ಮಾರ್ಗದರ್ಶನ ನೀಡುತ್ತಾರೆ.
ಮರುಬಳಕೆಯು ಪ್ರತಿಯೊಂದು ಮಧ್ಯಮ ವರ್ಗದ ಕುಟುಂಬದ ಭಾಗವಾಗಿದೆ. ಇಂದಿನ ಮಕ್ಕಳು ಕಡಿಮೆ ಬಳಕೆ ಮಾಡುವ ವಸ್ತುಗಳನ್ನು ಮರುಬಳಕೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದನ್ನು ಮುಂದಕ್ಕೆ ಕೊಂಡೊಯ್ಯಬೇಕು. ಇವು ಸರಳವಾದ ವಿಷಯಗಳಂತೆ ಕಾಣಿಸಬಹುದು, ಆದರೆ, ಹೆಚ್ಚು ಹೆಚ್ಚು ಜನರು ಬಳಕೆ ಮಾಡಲು ಪ್ರಾರಂಭಿಸಿದರೆ ಅದು ನಮ್ಮ ಪರಿಸರವನ್ನು ಸಂರಕ್ಷಿಸುವಲ್ಲಿ ದೊಡ್ಡ ಪರಿಣಾಮ ಬೀರುತ್ತದೆ ಎಂದು ದೀಪಕ್ ಅವರು ತಿಳಿಸಿದ್ದಾರೆ.
إرسال تعليق