ಲಖನೌ: ಇಳಿ ವಯಸ್ಸಿನಲ್ಲಿ ತಮ್ಮ ಬಗ್ಗೆ ತಾತ್ಸಾರ ತೋರಿದ ಮಕ್ಕಳ ಮೇಲೆ ಕೋಪಗೊಂಡ 80 ವರ್ಷದ ಹಿರಿಯ ನಾಗರಿಕರೊಬ್ಬರು, ತಮ್ಮ ಸುಮಾರು 1.5 ಕೋಟಿ ರೂ. ಸ್ವಯಾರ್ಜಿತ ಆಸ್ತಿಯನ್ನು ಉತ್ತರ ಪ್ರದೇಶ ಸರಕಾರಕ್ಕೆ ಬರೆದುಕೊಡುವ ಮೂಲಕ 'ಸ್ವೀಟ್ ರಿವೇಂಜ್' ತೀರಿಸಿಕೊಂಡಿದ್ದಾರೆ.
ಮಕ್ಕಳಿಂದ ತಿರಸ್ಕಾರಕ್ಕೆ ಒಳಗಾದ ನಾಥು ಸಿಂಗ್, ಮನೆಯಲ್ಲಿಯೂ ಒಬ್ಬಂಟಿತನ ಅನುಭವಿಸುತ್ತಿದ್ದರು. ಹೀಗಾಗಿ ಮಕ್ಕಳ ಉಸಾಬರಿಯೇ ಬೇಡ ಎಂದು ವೃದ್ಧಾಶ್ರಮಕ್ಕೆ ಸೇರಿದ್ದಾರೆ. ಆದರೆ ಅಲ್ಲಿಯೂ ಅವರ ಪರಿಸ್ಥಿತಿ ಬದಲಾಗಲಿಲ್ಲ. ವರ್ಷಗಳು ಕಳೆದರೂ ಅವರನ್ನು ನೋಡಲು ಮಗ- ಸೊಸೆ, ಹೆಣ್ಣುಮಕ್ಕಳು ಯಾರೂ ಬಂದಿಲ್ಲ. ಇದು ಅವರನ್ನು ಸಿಟ್ಟಿಗೆಬ್ಬಿಸಿತ್ತು. ಹೀಗಾಗಿ ಅವರಾರೂ ತಮ್ಮ ಆಸ್ತಿಗೆ ವಾರಸುದಾರರಾಗಲು ಯೋಗ್ಯರಲ್ಲ ಎಂದು ನಾಥು ಸಿಂಗ್ ತೀರ್ಮಾನಿಸಿದ್ದಾರೆ. ತಮ್ಮ ಒಡೆತನದ 1.5 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ಮತ್ತು ಮನೆಯನ್ನು ಉತ್ತರ ಪ್ರದೇಶ ರಾಜ್ಯಪಾಲರಿಗೆ ಬರೆದುಕೊಟ್ಟಿದ್ದಾರೆ. ಬುಧಾನಾ ತಾಲೂಕು ಉಪ ನೋಂದಾಣಾಧಿಕಾರಿ ಪಂಕಜ್ ಜೈನ್ ಈ ವಿಚಾರವನ್ನು ದೃಢಪಡಿಸಿದ್ದಾರೆ.
85 ವರ್ಷದ ನಾಥು ಸಿಂಗ್ ಅವರು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರನ್ನು ಭೇಟಿ ಮಾಡಿ, ತಮ್ಮ ಕೋಟ್ಯಂತರ ರೂ ಮೌಲ್ಯದ ಸಂಪತ್ತನ್ನು ಅವರ ಕೈಗೆ ಹಸ್ತಾಂತರಿಸಲು ರಾಜಭವನಕ್ಕೆ ತೆರಳಿದ್ದರು.
ಅಂತ್ಯ ಸಂಸ್ಕಾರಕ್ಕೂ ಬರುವುದು ಬೇಡ
''ನಾಥು ಸಿಂಗ್ ಅವರು ತಮ್ಮ ಆಸ್ತಿಯನ್ನು ರಾಜ್ಯಪಾಲರ ಹೆಸರಿಗೆ ಬರೆದು, ಅಫಿಡವಿಟ್ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಅವರು ಮೃತಪಟ್ಟ ಬಳಿಕ ತಮ್ಮ ಮಕ್ಕಳು ಯಾರೂ ಅಂತ್ಯಕ್ರಿಯೆಯಲ್ಲಿ ಕೂಡ ಪಾಲ್ಗೊಳ್ಳಬಾರದು ಎಂದೂ ಷರತ್ತು ವಿಧಿಸಿದ್ದಾರೆ,'' ಎಂದು ನಾಥು ಸಿಂಗ್ ಇರುವ ವೃದ್ಧಾಶ್ರಮ ಮುಖ್ಯಸ್ಥೆ ರೇಖಾ ಸಿಂಗ್ ತಿಳಿಸಿದ್ದಾರೆ.
ಬದುಕಿರುವಾಗ ತಮ್ಮನ್ನು ನೋಡಲು ಬಾರದ ಮಕ್ಕಳಿಗೆ ಸತ್ತ ಮೇಲೆ ಶವ ಏಕೆ ಎನ್ನುವುದು ಅವರ ನಿಲುವು. ಅದಕ್ಕಾಗಿ ತಾವು ಮೃತರಾದ ನಂತರ ದೇಹವನ್ನು ಯಾವುದಾದರೂ ವೈದ್ಯಕೀಯ ಕಾಲೇಜಿಗೆ ಸಂಶೋಧನಾ ಅಧ್ಯಯನಗಳಿಗೆ ಅನುಕೂಲವಾಗುವಂತೆ ದಾನ ಮಾಡಿ ಎಂದು ಅವರು ಸರ್ಕಾರಕ್ಕೆ ಒಪ್ಪಿಗೆ ಪತ್ರ ಬರೆದಿದ್ದಾರೆ.
إرسال تعليق