ಪವರ್‌ ಜೊತೆಗೆ ಪವರ್‌ ಪಾಲಿಟಿಕ್ಸ್‌ ಬಳಸಬಾರದು: ಸಿಎಂ ಬೊಮ್ಮಾಯಿ

 ಪವರ್‌ ಜೊತೆಗೆ ಪವರ್‌ ಪಾಲಿಟಿಕ್ಸ್‌ ಬಳಸಬಾರದು. ವಾಸ್ತವ ಅಂಶದ ಮೇಲೆ ಮತ್ತು ಇಲಾಖೆಯ ದಕ್ಷತೆಯ ಹಿತದೃಷ್ಟಿಯಿಂದ ನಾವು ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದರು.

                                                                ಸಿಎಂ ಬೊಮ್ಮಾಯಿ

By : Rekha.M
Online Desk

ಬೆಂಗಳೂರು: ಪವರ್‌ ಜೊತೆಗೆ ಪವರ್‌ ಪಾಲಿಟಿಕ್ಸ್‌ ಬಳಸಬಾರದು. ವಾಸ್ತವ ಅಂಶದ ಮೇಲೆ ಮತ್ತು ಇಲಾಖೆಯ ದಕ್ಷತೆಯ ಹಿತದೃಷ್ಟಿಯಿಂದ ನಾವು ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದರು.

ಸೋಮವಾರ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಿರ್ಮಿಸಿರುವ ಹೊಸ ಕಚೇರಿ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅವೈಜ್ಞಾನಿಕ ವಿದ್ಯುತ್‌ ನೀತಿಗಳಿಂದಾಗಿ ಈಗಾಗಲೇ ಇಂಧನ ಇಲಾಖೆ ನಷ್ಟದಲ್ಲಿದೆ. ಯಾರಿಗೋ  ಲಾಭ ಮಾಡುವ ಉದ್ದೇಶದಿಂದ ವಿದ್ಯುತ್‌ ಇಲಾಖೆಯಲ್ಲಿ ರಾಜಕೀಯ ಪವರ್‌ ಬಳಸಿರುವುದನ್ನು ನಾವು ನೋಡಿದ್ದೇವೆ. ಇದರ ದುರುಪಯೋಗ ತಡೆಯಲು ನಮ್ಮ ಸರಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

ಒಂದು ಕುಟುಂಬಕ್ಕೆ ಎಷ್ಟು ಮೂಲ ವಿದ್ಯುತ್ ಬೇಕು ಎಂಬುದನ್ನು ಪರಿಶೀಲಿಸಿ ಲೆಕ್ಕ ಹಾಕಿದ್ದೇವೆ. ‘ಸಾಮಾನ್ಯವಾಗಿ 50 ರಿಂದ 70 ಯೂನಿಟ್‌ ಮಾತ್ರ ಗೃಹ ಬಳಕೆಗೆ ಉಪಯೋಗಿಸಲಾಗುತ್ತದೆ. ಸರ್ಕಾರ ಈಗಾಗಲೇ ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಯಡಿ ಬಡಜನರಿಗೆ 40 ಯೂನಿಟ್ ಉಚಿತವಾಗಿ ನೀಡುತ್ತಿದೆ. ಹೀಗಾಗಿ, 200 ಯೂನಿಟ್ ಉಚಿತ ವಿದ್ಯುತ್‌ ಎನ್ನುವುದು ಅರ್ಥಹೀನ’ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ವಿದ್ಯುತ್‌ ಉತ್ಪಾದನೆ ಜೊತೆಗೆ ಹೆಚ್ಚುವರಿಯಾಗಿ ಉತ್ಪಾದಿಸಿದ ವಿದ್ಯುತ್‌ ಮಾರಾಟ ಮಾಡಿ ರಾಜ್ಯ ಸರ್ಕಾರ ರೂ.2000 ಕೋಟಿ ವಹಿವಾಟು ನಡೆಸಿದೆ. ಈ ಹಿಂದೆ ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇದನ್ನು ಸ್ಥಳೀಯ ಕಲ್ಲಿದ್ದಲು ಜೊತೆ ಮಿಶ್ರಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ದುಬಾರಿ ದರಕ್ಕೆ ಕಲ್ಲಿದ್ದಲು ಖರೀದಿಸಿದ್ದರಿಂದ ನಷ್ಟ ಉಂಟಾಗುತ್ತಿತ್ತು. ಹಾಗೆಯೇ ಕಲ್ಲಿದ್ದಲು ತೊಳೆಯಲು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿತ್ತು. ಸ್ಪಷ್ಟ ನೀತಿ ರೂಪಿಸದ ಕಾರಣವೇ ಇಂತಹ ನಿರ್ಧಾರಗಳಿಗೆ ಕಾರಣ’ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರ ರೈತರ ಸೋಲಾರ್‌ ಪಂಪ್‌ಸೆಟ್‌ಗಳಿಗೆ ಸಹಾಯ ನೀಡುತ್ತಿದೆ. ಸುಗಮ ವಿದ್ಯುತ್‌ ರವಾನೆಗೆ ಈ ವರ್ಷ ಬಜೆಟ್‌ನಲ್ಲಿ 3000 ಕೋಟಿ ರು.ಗಳನ್ನು ಕೆಪಿಟಿಸಿಎಲ್‌ಗೆ ನೀಡುತ್ತಿದ್ದೇವೆ. ಕೆಪಿಟಿಸಿಎಲ್‌ ಉದ್ಯೋಗಿಗಳ ವೇತನ ಪರಿಷ್ಕರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಕೇಂದ್ರಗಳ ಮೂಲಕ ಉತ್ತಮ ಕೆಲಸಗಳು ಆಗಲಿ ಎಂದು ಸಲಹೆ ನೀಡಿದರು.

ಎಸ್ಕಾಂಗಳಿಗೆ ಸ್ವಾವಲಂಬನೆ ನೀಡಲು ಗುರುಚರಣ್ ಸಮಿತಿ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಸಮಿತಿಯ ಶಿಫಾರಸುಗಳು ಎಸ್ಕಾಂಗಳು ನಷ್ಟದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಇಂಧನ ಇಲಾಖೆಯಲ್ಲಿನ ಅಧಿಕಾರಿಗಳ ವೇತನ ಶ್ರೇಣಿಯನ್ನು ಸುಧಾರಿಸಲು ಚರ್ಚೆ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಜಾರಿಗೆ ತರಲಾಗುವುದು. ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ವಿದ್ಯುತ್ ಸಂಗ್ರಹಣೆಯನ್ನು ಸುಧಾರಿಸಲು ಒತ್ತು ನೀಡಲಾಗುತ್ತಿದೆ. ಸರಿಯಾದ ವೈಜ್ಞಾನಿಕ ಲೆಕ್ಕಾಚಾರಗಳ ಮೂಲಕ ವಿತರಣೆ ಮತ್ತು ಉತ್ಪಾದನೆಯ ನಷ್ಟದ ಬಗ್ಗೆ ಅಗತ್ಯ ಪರಿಶೀಲನೆ ನಡೆಸಲಾಗುತ್ತಿದೆ. ವಿದ್ಯುತ್ ಉತ್ಪಾದನೆ ಮತ್ತು ಶೇಖರಣೆಗಾಗಿ ಸೌರ ಬ್ಯಾಟರಿಗಳಿಗೂ ಆದ್ಯತೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.




Post a Comment

أحدث أقدم