ನಿರೀಕ್ಷೆಯಂತೆಯೇ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಗೆ ಖ್ಯಾತ ದಿವಂಗತ ನಟ ಅಂಬರೀಶ್ ಹೆಸರನ್ನಿಡಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅನುಮೋದನೆ ನೀಡಿದ್ದಾರೆ.
ರೇಸ್ ಕೋರ್ಸ್ ರಸ್ತೆ ಅಂಬರೀಶ್ ಹೆಸರು
ಬೆಂಗಳೂರು: ನಿರೀಕ್ಷೆಯಂತೆಯೇ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಗೆ ಖ್ಯಾತ ದಿವಂಗತ ನಟ ಅಂಬರೀಶ್ ಹೆಸರನ್ನಿಡಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅನುಮೋದನೆ ನೀಡಿದ್ದಾರೆ.
ರೇಸ್‌ಕೋರ್ಸ್ ರಸ್ತೆಯ ರಾಂನಾರಾಯಣ್ ಚೆಲ್ಲಾರಾಂ ಕಾಲೇಜಿನಿಂದ ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದವರೆಗಿನ ರಸ್ತೆಗೆ ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಘೋಷಿಸಿದ್ದರು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ರಾಂನಾರಾಯಣ್ ಚೆಲ್ಲಾರಾಂ ಕಾಲೇಜಿನಿಂದ ಶುರುವಾಗಿ ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದವರೆಗಿನ ರಸ್ತೆಗೆ ರೆಬೆಲ್ ಸ್ಟಾರ್ ಅಂಬರೀಶ್ ರಸ್ತೆ ಎಂದು ಹೆಸರು ಇಡಲಾಗುತ್ತದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಈ ಹಿಂದೆ ಅಧಿಕೃತ ಘೋಷಣೆ ಮಾಡಿದ್ದರು.
ಈ ಪ್ರಸ್ತಾವನೆಯನ್ನು ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರಿಗೆ ಪೂರ್ವ ವಲಯದ ಜಂಟಿ ಆಯುಕ್ತರು ಕಳುಹಿಸಿದ್ದರು. ತುರ್ತಾಗಿ ನಾಮಕರಣ ಮಾಡುವುದು ಅವಶ್ಯವಾಗಿರುವುದರಿಂದ, ಬಿಬಿಎಂಪಿ ಕಾಯ್ದೆಯಂತೆ ಅನುಮೋದನೆ ನೀಡಬೇಕೆಂದು ಕೋರಿದ್ದರು.
ಮಾರ್ಚ್ 14ರಂದು ಪೂರ್ವ ವಲಯದ ಆಯುಕ್ತರು ಟಿಪ್ಪಣಿಯನ್ನು ಆಡಳಿತಾಧಿಕಾರಿಯವರ ಮುಂದಿರಿಸಿದ್ದರು. ರೇಸ್‌ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡುವ ಕಾರ್ಯಕ್ರಮ ವಾರದಲ್ಲೇ ನಡೆಯಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಇನ್ನು ಒಂದೇ ವಾರದಲ್ಲಿ ರೇಸ್ ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹೆಸರನ್ನು ಇಡಲಾಗುತ್ತದೆ ಎಂದು ವರದಿಯಾಗಿದೆ.
إرسال تعليق