ಫಾಕ್ಸ್‌ಕಾನ್ ಸೇರಿದಂತೆ ವಿವಿಧ ಕಂಪನಿಗಳ 18 ಹೂಡಿಕೆ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ.
ಸಂಗ್ರಹ ಚಿತ್ರ
ಬೆಂಗಳೂರು: ಫಾಕ್ಸ್‌ಕಾನ್ ಸೇರಿದಂತೆ ವಿವಿಧ ಕಂಪನಿಗಳ 18 ಹೂಡಿಕೆ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಟ್ಟು 75,393.57 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ
ಫಾಕ್ಸ್‌ಕಾನ್ ಸೇರಿದಂತೆ 10 ಹೊಸ ಯೋಜನೆಗಳು, 5 ವಿಸ್ತರಣೆ ಯೋಜನೆಗಳು ಮತ್ತು 3 ಹೆಚ್ಚುವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ 18 ಯೋಜನೆಗಳಿಂದ 77,606 ಜನರಿಗೆ ಉದ್ಯೋಗಾವಕಾಶ ನಿರೀಕ್ಷಿಸಲಾಗಿದೆ.
ಫಾಕ್ಸ್‌ಕಾನ್ ಹಾನ್ ಹೈ ಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್ ಮೆಂಟ್ ಪ್ರೈ.ಲಿ. (ಎಫ್ ಎಚ್ಎಚ್) 50 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ ಗುರಿಯೊಂದಿಗೆ 8,000 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಜೊತೆಗೆ, ಫಾಕ್ಸ್‌ಕಾನ್ ಕಂಪನಿಗೆ ದೇವನಹಳ್ಳಿ ಬಳಿ 300 ಎಕರೆ ಜಮೀನು ನೀಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
15 ದಿನಗಳ ಹಿಂದೆ ಫಾಕ್ಸ್‌ಕಾನ್ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ನೇತೃತ್ವದ ನಿಯೋಗ ರಾಜ್ಯಕ್ಕೆ ಭೇಟಿ ನೀಡಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿತ್ತು.
ಫಾಕ್ಸ್‌ಕಾನ್ ರಾಜ್ಯದಲ್ಲಿ 8,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, 50,000 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ ಎಂದು ಕೈಗಾರಿಕಾ ಸಚಿವರ ಕಚೇರಿಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ರಾಜ್ಯಕ್ಕೆ ಇಷ್ಟು ದೊಡ್ಡ ಬಂಡವಾಳ ಬಂದಿರುವುದು ನಮಗೆ ಸಂತಸ ತಂದಿದೆ. ರಾಜ್ಯದಲ್ಲಿ ಹಸಿರು ಹೈಡ್ರೋಜನ್, ಎಥೆನಾಲ್ ಉತ್ಪಾದನೆ, ಪವನ ಶಕ್ತಿ ಸ್ಥಾವರ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಜೋಡಣೆ, ಲಿಥಿಯಂ ಬ್ಯಾಟರಿಗಳು ಮತ್ತು ಎಲೆಕ್ಟ್ರಿಕ್ ವಾಹನಗಳು, ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳ ಪ್ರಸ್ತಾವನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.
ಬಳಿಕ ಮಾತನಾಡಿದ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು, ನವೀಕರಿಸಬಹುದಾದ ಇಂಧನ, ಎಥೆನಾಲ್ ಉತ್ಪಾದನೆ ಮತ್ತು ಉತ್ಪಾದನಾ ವಲಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೇಳಿದರು.
"ಹಸಿರು ಹೈಡ್ರೋಜನ್ ಉತ್ಪಾದನೆ, ಎಥೆನಾಲ್ ಉತ್ಪಾದನೆ, ಏರೋಸ್ಪೇಸ್ ಮತ್ತು ನವೀಕರಿಸಬಹುದಾದ ಇಂಧನವನ್ನು ಉತ್ತೇಜಿಸುವ ಸಲುವಾಗಿ, ನಾವು ಆಮ್ಪ್ಲಸ್ ಆಕ್ಟಿವ್ ಪ್ರೈವೇಟ್ ಲಿಮಿಟೆಡ್, ಅಯಾನಾ ರಿನ್ಯೂವಬಲ್ ಪವರ್ ಸಿಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್‌ಗಳ ಪ್ರಸ್ತಾವನೆಗಳನ್ನು ಅನುಮೋದಿಸಿದ್ದೇವೆ ಎಂದು ತಿಳಿಸಿದರು.
ಕರ್ನಾಟಕವು ದೇಶದಲ್ಲೇ ಮೂರನೇ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯವಾಗಿದ್ದು, ಅತಿ ಹೆಚ್ಚು ಎಥೆನಾಲ್ ಉತ್ಪಾದಿಸುವ ರಾಜ್ಯವೂ ಆಗಿದೆ. ಸೋಮವಾರದ ಸಭೆಯಲ್ಲಿ ಹಸಿರು ಇಂಧನ ಹೂಡಿಕೆ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ ಎಂದು ಮಾಹಿತಿ ನೀಡಿದರು.
إرسال تعليق