ಸ್ಟಾಪ್ ಟೊಬ್ಯಾಕೊ ಆ್ಯಪ್‌'ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ: ಈ ವರೆಗೆ 50 ದೂರುಗಳು ದಾಖಲು!

 ಸರ್ಕಾರ ಬಿಡುಗಡೆ ಮಾಡಿರುವ ಜಿಪಿಎಸ್ ಆಧಾರಿತ 'ಸ್ಟಾಪ್ ಟೊಬ್ಯಾಕೊ' ಮೊಬೈಲ್ ಆ್ಯಪ್'ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಈ ವರೆಗೂ 50 ದೂರುಗಳು ದಾಖಲಾಗಿವೆ.

                                                                     ಸಂಗ್ರಹ ಚಿತ್ರ

By :Rekha.M
Online Desk

ಬೆಂಗಳೂರು: ಸರ್ಕಾರ ಬಿಡುಗಡೆ ಮಾಡಿರುವ ಜಿಪಿಎಸ್ ಆಧಾರಿತ 'ಸ್ಟಾಪ್ ಟೊಬ್ಯಾಕೊ' ಮೊಬೈಲ್ ಆ್ಯಪ್'ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಈ ವರೆಗೂ 50 ದೂರುಗಳು ದಾಖಲಾಗಿವೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿಷೇಧ ಹೇರಿದ್ದರೂ, ಸಾಕಷ್ಟು ಜನರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಪ್ರತಿನಿತ್ಯ ಕಂಡು ಬರುತ್ತಲೇ ಇದೆ. ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದರೂ ದೂರು ನೀಡಲು ಸಾಧ್ಯವಾಗದ ಕಾರಣ ಸಾರ್ವಜನಿಕರು ಮೂಕ ಪ್ರೇಕ್ಷಕರಂತಿರಬೇಕಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗವಾದ ರಾಜ್ಯ ತಂಬಾಕು ನಿಯಂತ್ರಣ ಘಟಕವು ಕೆಲ ದಿನಗಳ ಹಿಂದಷ್ಟೇ ಸ್ಟಾಪ್ ಟೊಬ್ಯಾಕೊ ಆ್ಯಪ್‌ನ್ನು ಪರಿಚಯಿಸಿತ್ತು. ಆ್ಯಪ್ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿರುವವರ ಫೋಟೋ ತೆಗೆದು, ದೂರು ಸಲ್ಲಿಸಬಹುದಾಗಿದೆ. ದೂರು ಆಧರಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ.

ರಾಜ್ಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಉಸ್ತುವಾರಿ ಪ್ರಭಾಕರ್ ಅವರು ಮಾತನಾಡಿ, ಆ್ಯಪ್ ಪ್ರಾರಂಭವಾದ ದಿನದಿಂದ 200ಕ್ಕೂ ಹೆಚ್ಚು ಮಂದಿ ಆ್ಯಪ್'ನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. 'ಧೂಮಪಾನ ನಿಷೇಧ' ಫಲಕಗಳನ್ನು ಪ್ರದರ್ಶಿಸದ ಮತ್ತು ಧೂಮಪಾನ ಮಾಡಲು ಜನರಿಗೆ ಅವಕಾಶ ನೀಡುವ ಅಂಗಡಿ ಮಾಲೀಕರ ವಿರುದ್ಧ ಐದು ಅಥವಾ ಆರು ದೂರುಗಳು ದಾಖಲಾದ ನಂತರ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಂಗಡಿಗಳ ಬಳಿ ಧೂಮಪಾನ ಮಾಡುವವರಿಗೂ ದಂಡವನ್ನು ವಿಧಿಸಲಾಗುತ್ತಿದೆ. ಬೆಂಗಳೂರಿನ ಗಾಂಧಿನಗರ, ಎಚ್‌ಎಸ್‌ಆರ್ ಲೇಔಟ್ ಮತ್ತು ಬಾಣಸವಾಡಿಯಲ್ಲಿ ಅತೀ ಹೆಚ್ಚು ದೂರುಗಳು ಬಂದಿವೆ. ಬೆಳಗಾವಿ ಮತ್ತು ದಕ್ಷಿಣ ಕನ್ನಡದಲ್ಲೂ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದಾರೆ.

ಅಪ್ಲಿಕೇಶನ್'ನಲ್ಲಿ ಜಿಪಿಎಸ್'ನ್ನು ಸಕ್ರಿಯಗೊಳಿಸಲಾಗಿತ್ತು. ನಿಯಮ ಉಲ್ಲಂಘನೆಯ ಸ್ಥಳವು ಸ್ವಯಂಚಾಲಿತವಾಗಿ ಫೀಡ್ ಆಗುತ್ತದೆ ಮತ್ತು ಆಯಾ ಜಿಲ್ಲಾ ತಂಬಾಕು ನಿಯಂತ್ರಣ ವಿಭಾಗಕ್ಕೆ ಈ ದೂರುಗಳು ಹೋಗುತ್ತವೆ. ಅವರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ತಂಬಾಕು ಬೆಳೆಯುವ 50 ಕುಟುಂಬಗಳನ್ನು ಪರಿವರ್ತನೆಗೊಳಿಸಿ, ಇತರೆ ಬೆಳೆಗಳನ್ನು ಬೆಳೆಯುವಂತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.


    Post a Comment

    أحدث أقدم