ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ವಿದೇಶಗಳಲ್ಲಿ ಹೂಡಿಕೆ ಮಾಡಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ತನಿಖೆಗೆ ನೆರವು ನೀಡುವಂತೆ ಕೋರಿ 4 ರಾಷ್ಟ್ರಗಳಿಗೆ ಸಿಬಿಐ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.
ಜನಾರ್ಧನ ರೆಡ್ಡಿಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ವಿದೇಶಗಳಲ್ಲಿ ಹೂಡಿಕೆ ಮಾಡಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ತನಿಖೆಗೆ ನೆರವು ನೀಡುವಂತೆ ಕೋರಿ 4 ರಾಷ್ಟ್ರಗಳಿಗೆ ಸಿಬಿಐ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಇ.ಇಂದ್ರಕಲಾ ಅವರು, ಸ್ವಿಡ್ಜರ್ಲೆಂಡ್, ಸಿಂಗಾಪುರ, ಯುಎಇ ಮತ್ತು ಐಲ್ ಆಫ್ ಮ್ಯಾನ್ ದೇಶಗಳ ನ್ಯಾಯಾಂಗ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆಂದು ತಿಳಿದುಬಂದಿದೆ.
ಸಿಬಿಐ ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್ 166(ಎ) ಪ್ರಕಾರ ಮನವಿ ಮಾಡಲಾಗಿದ್ದು, ಪ್ರಕರಣದಲ್ಲಿ ತನಿಖೆಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಸಿಬಿಐ ತನಿಖಾಧಿಕಾರಿಗಳು ಜಿಎಲ್‌ಎ (ಗಾಲಿ ಜನಾರ್ದನ ರೆಡ್ಡಿ) ಟ್ರೇಡಿಂಗ್ ಇಂಟರ್ ನ್ಯಾಶನಲ್ ಪ್ರೈವೆಟ್ ಲಿಮಿಟೆಡ್‌ನ ಸಂಯೋಜನೆಯ ವಿವರಗಳಂತಹ ಮಾಹಿತಿಯನ್ನು ಸಂಗ್ರಹಿಸಲು ನ್ಯಾಯಾಂಗದ ಸಹಾಯವನ್ನು ಕೋರಿದ್ದಾರೆ.
ಜಿಎಲ್‌ಎ ಕಂಪೆನಿಯ ಸ್ವರೂಪ, ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರ, ಮಾಲೀಕರು ಮತ್ತು ಅಧಿಕೃತವಾಗಿ ಸಹಿ ಹಾಕಿರುವ ವ್ಯಕ್ತಿಯ ವಿವರ, ಅದರ ಮುಂದಿನ ಫಲಾನುಭವಿಗಳು, ಕಂಪೆನಿಯ ಷೇರುಗಳ ವಿವರ, ಅದನ್ನು ಖರೀದಿ ಮಾಡಿರುವವರು ಮತ್ತು ಮಾರಾಟ ಮಾಡಿರುವವರು, ಕಂಪೆನಿಯ ನಿರ್ದೇಶಕರು ಮತ್ತು ಷೇರುದಾರರ ವಿವರ ಸೇರಿದಂತೆ ಲಭ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸುವಂತೆ ನ್ಯಾಯಾಲಯ ಮನವಿ ಮಾಡಿಕೊಂಡಿದೆ.
ಗಾಲಿ ಜನಾರ್ದನ ರೆಡ್ಡಿ 2009-10ರ ಅವಧಿಯಲ್ಲಿ ಸುಮಾರು 7 ರಿಂದ 8 ಮಿಲಿಯನ್ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿವಿಧ ದೇಶಗಳೊಂದಿಗೆ ವಹಿವಾಟು ನಡೆಸಿದ್ದಾರೆ. ಇದರ ಮೊತ್ತವನ್ನು ಆಯಾ ದೇಶಗಳಲ್ಲಿಯೇ ಉಳಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲದೆ, ಜಿಎಲ್‌ಎ ಟ್ರೇಡಿಂಗ್ ಇಂಟರ್ ನ್ಯಾಶನಲ್ ಪ್ರೈವೆಟ್ ಲಿಮಿಟೆಡ್ ಹೆಸರಿನಲ್ಲಿರುವ ಕಂಪೆನಿ ಮತ್ತು ಬ್ಯಾಂಕ್ ಖಾತೆ ಇದೆಯೇ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಸಿಬಿಐ ನ್ಯಾಯಾಲಯವನ್ನು ಕೋರಿತ್ತು. ಸಿಬಿಐ ಅಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿಯ ಪ್ರಕಾರ ನ್ಯಾಯಾಲಯ ಸಂಜ್ಞೆಯನ್ನು ತೆಗೆದುಕೊಂಡಿದೆ. ಅಲ್ಲದೆ, ಆರೋಪಿಗೆ ಸಮನ್ಸ್ ಜಾರಿ ಮಾಡಿದೆ. ತನಿಖೆ ಮುಂದುವರೆಯುತ್ತಿರುವ ಬೆನ್ನಲ್ಲೇ ಸಿಬಿಐ ಈಗಾಗಲೇ ಮಧ್ಯಂತರ ಆರೋಪ ಪಟ್ಟಿಯನ್ನು 2013ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಈ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ, ಐಎಎಸ್ ಅಧಿಕಾರಿ ಎಂ.ಇ.ಶಿವಲಿಂಗಮೂರ್ತಿ, ಐಎಫ್‌ಎಸ್ ಅಧಿಕಾರಿ ಎಸ್.ಮುತ್ತಯ್ಯ, ಕೆ.ಮೆಹಫೂಜ್ ಅಲಿಖಾನ್, ಎಸ್ಪಿ ರಾಜು, ಮಹೇಶ್ ಎ.ಪಾಟೀಲ್, ಮಾಜಿ ಅರಣ್ಯಾಧಿಕಾರಿ ಎಚ್.ರಾಮಮೂರ್ತಿ ಆರೋಪಿಗಳಾಗಿದ್ದಾರೆ. ಐಪಿಸಿ ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಸಿಬಿಐ ಇವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಿಬಿಐ ಆಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ಗಣಿಗಾರಿಕೆಗೆ ಸಂಬಂಧಿಸಿದಂತೆ ಗುತ್ತಿಗೆ ವಿಷಯದಲ್ಲಿ ವಿವಿಧ ವ್ಯಕ್ತಿಗಳು ನಡೆಸಿರುವ ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿರುವ ಆಸ್ತಿಗಳ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರ ಇತ್ತೀಚೆಗೆ ಅನುಮತಿ ನೀಡಿದೆ.
إرسال تعليق