ಹಾವೇರಿ ಜಿಲ್ಲೆಯ 1.65 ಲಕ್ಷ ರೈತರಿಗೆ 438 ಕೋಟಿ ರೂ.ಗಳ ಬೆಳೆ ವಿಮೆ- ಸಿಎಂ ಬೊಮ್ಮಾಯಿ

 ಹಾವೇರಿ ಜಿಲ್ಲೆಯಲ್ಲಿ 1.65 ಲಕ್ಷ ರೈತರಿಗೆ 438 ಕೋಟಿ ರೂ.ಗಳ ಬೆಳೆ ವಿಮೆಯನ್ನು ನೀಡಿರುವುದು ನಮ್ಮ ಸರ್ಕಾರ ದಾಖಲೆಯ ಕಾರ್ಯಕ್ರಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

                                                            ಸಿಎಂ ಬೊಮ್ಮಾಯಿ
By : Rekha.M
Online Desk

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ 1.65 ಲಕ್ಷ ರೈತರಿಗೆ 438 ಕೋಟಿ ರೂ.ಗಳ ಬೆಳೆ ವಿಮೆಯನ್ನು ನೀಡಿರುವುದು ನಮ್ಮ ಸರ್ಕಾರ ದಾಖಲೆಯ ಕಾರ್ಯಕ್ರಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿಯ ಜಂಗಮನಕೊಪ್ಪದಲ್ಲಿ ಆಯೋಜಿಸಿರುವ “ಯು.ಹೆಚ್.ಟಿ. ಹಾಲು ಪ್ಯಾಕಿಂಗ್ ಸ್ಥಾವರ ಮತ್ತು ಹಾಲು ಸ್ಯಾಚೆಟ್ ಪ್ಯಾಕಿಂಗ್ ಘಟಕದ ಉದ್ಘಾಟಿಸಿ ಸಿಎಂ ಮಾತನಾಡಿದರು.

ರೈತರಿಗೆ ವಿಮಾ ಯೋಜನೆಗೆ 80 ಕೋಟಿ ರೂ:

67 ಲಕ್ಷ ಕುಟುಂಬಗಳಿಗೆ ರೈತರ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು, 80 ಕೋಟಿ ರೂ. ವೆಚ್ಚದಲ್ಲಿ ರೈತರಿಗೆ ವಿಮಾ ಯೋಜನೆ, ಹಾವೇರಿ ಜಿಲ್ಲೆಯಲ್ಲಿ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ತುಂಗಾ ಮೇಲ್ದಂಡೆ ಯೋಜನೆಯಿಂದ 1 ಲಕ್ಷ ಹೆಕ್ಟೇರ ಜಮೀನಿಗೆ ನೀರಾವರಿ, ಬ್ಯಾಡಗಿ, ಹಿರೇಕೆರೂರು,ಹಾನಗಲ್, ರಾಣಿಬೆನ್ನೂರುಗಳಲ್ಲಿ ಏತ ನೀರಾವರಿ ಒದಗಿಸಲಾಗಿದ್ದು, ಹೈನುಗಾರಿಕೆಗೆ ಪೂರಕವಾಗಿದೆ. ಉತ್ತರ ಕರ್ನಾಟಕದ ಅಭಿವೃದ್ದಿಗೆ ವಿಶೇಷ ಮಂಡಳಿ ರಚಿಸಿದ್ದು, ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಮಂಡಳಿಯನ್ನು ರಚಿಸಲಾಗಿದೆ ಎಂದರು.

ಹಾವೇರಿಯಲ್ಲಿ ಪಶು ಆಹಾರ ಘಟಕ:

ದನಕರುಗಳಿಗೆ ಉತ್ಕೃಷ್ಟವಾದ ಆಹಾರವನ್ನು ಪೂರೈಸಲು ಸರ್ಕಾರ ಮುಂದಾಗಿದೆ. ಹಾವೇರಿಯಲ್ಲಿ ಕೂಡ ಪಶುಆಹಾರ ಘಟಕವನ್ನು ಸ್ಥಾಪನೆ ಮಾಡಲಾಗುವುದು. ಇದರಿಂದ ರೈತರಿಗೆ ಸುಲಭವಾಗಿ ಸ್ಥಳೀಯ ಮಟ್ಟದಲ್ಲಿ ಪಶುಆಹಾರ ಸಿಗುವಂತಾಗುತ್ತದೆ ಎಂದರು.

ರಾಜ್ಯದ ವಿವಿಧ ಗೋಶಾಲೆಗಳಿಗೆ ಒಟ್ಟು 30 ಕೋಟಿ ರೂ.

ಗೋರಕ್ಷಣೆ ಕಾನೂನು ತರುವ ಮೂಲಕ ಅನಾವಶ್ಯಕ ಗೋಹತ್ಯೆಯನ್ನು ನಿಯಂತ್ರಿಸಲಾಗಿದೆ. ಬೇರೇ ರಾಜ್ಯದ ಕಟುಕರಿಗೆ ಗೋವು ಸರಬರಾಜನ್ನು ನಿಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ವಯಸ್ಸಾದ ಆಕಳುಗಳ ರಕ್ಷಣೆ ಸಲುವಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಪುಣ್ಯಕೋಟಿ ದತ್ತುಯೋಜನೆಯ ಮೂಲಕ ಒಂದು ಗೋವನ್ನು ವಾರ್ಷಿಕ 11 ಸಾವಿರ ರೂ.ಗಳನ್ನು ನೀಡಿ ದತ್ತು ಪಡೆಯಬಹುದಾಗಿದ್ದು, 43 ಕೋಟಿ ರೂ. ಸೇರಿಸಲಾಗಿದ್ದು, ಇನ್ನೊಂದು ವಾರದ ಅವಧಿಯಲ್ಲಿ  30 ಕೋಟಿ ರೂ.ಗಳನ್ನು ರಾಜ್ಯದ ವಿವಿಧ ಗೋಶಾಲೆಗಳಿಗೆ ಪ್ರತಿ ಗೋವಿಗೆ 11 ಸಾವಿರದಂತೆ ಬಿಡುಗಡೆ ಮಾಡಲಾಗುವುದು ಎಂದರು.

ರೈತರ ಆದಾಯ ಹೆಚ್ಚಿಸುವ ಹೈನುಗಾರಿಕೆ:

ರೈತರ ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆ ಅತ್ಯಂತ ಸಹಕಾರಿಯಾಗಿದೆ.  2 ಸೀಸನ್ ಗಳಲ್ಲಿ ಹಾಲು ಉತ್ಪಾದನೆಯಾಗುತ್ತದೆ. ಪೀಕ್ ಸೀಸನ್ ನಲ್ಲಿ 2018 ರಲ್ಲಿ 84. 43 ಲಕ್ಷ  ಇದ್ದ ಹಾಲು ಉತ್ಪಾದನೆ ಈ ವರ್ಷ 94.18 ಲಕ್ಷ ಹೆಚ್ಚಿದೆ. ಬೇಸಿಗೆ ಕಾಲದಲ್ಲಿ 2018 ರಲ್ಲಿ 66 ಲಕ್ಷ ಇದ್ದ ಹಾಲು ಉತ್ಪಾದನೆ 71.20 ಲಕ್ಷ ಲೀ. ಹೆಚ್ಚಾಗಿದೆ.  ರಾಸುಗಳಿಗೆ ರೋಗ ಬಂದು, ಹಾಲು ಉತ್ಪಾದನೆ ಹಿಂಜರಿಕೆಯಾಗಿದ್ದರೂ, ನಂತರ ಹೆಚ್ಚಿತು. ಹಾಲು ಉತ್ಪಾದನೆ ಹೆಚ್ಚಳ, ಸಂಸ್ಕರಣಾ ಘಟಕಗಳ ಹೆಚ್ಛಳ, ಮೆಗಾ ಡೈರಿಗಳ ಸ್ಥಾಪನೆ, ಹಾಲಿಗೆ ಹೆಚ್ಚಿನ ದರ ವನ್ನು ನೀಡಿದ್ದು, ಹಾಲು ಉತ್ಪಾದಕರ ಪರವಾಗಿರುವ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುತ್ತದೆ. ಈ ವಿಷಯದಲ್ಲಿ ರಾಜಕಾರಣ ಸಲ್ಲದು. ಹಾಲುಉತ್ಪಾದಕರ ಶ್ರಮದ ಬಗ್ಗೆ ಸರ್ಕಾರಕ್ಕೆ ಬೆಲೆಯಿದೆ ಎಂದರು.

ಅಮುಲ್ ನಂತರ ನಂದಿನಿ ಅತ್ಯಂತ ಯಶಸ್ವಿಯಾಗಿದೆ

ಹಾಲು ಮಾರಿ ಆದಾಯವನ್ನು ಪಡೆಯಬಹುದೆಂದು ಸಂಘಸಂಸ್ಥೆಗಳ ಮೂಲಕ ಯಶಸ್ವಿಯಾಗಿಸಲಾಗಿದೆ. ಗುಜರಾತಿನ ಅಮುಲ್ ನಂತರ ಅತ್ಯಂತ ಯಶಸ್ವಿಯಾಗಿರುವುದು ಕರ್ನಾಟಕದ ನಂದಿನಿ. ನಮ್ಮ ಹಾಲನ್ನು ಸಂಸ್ಕರಿಸಿ ಎಲ್ಲೆಡೆ ಮಾರಾಟ ಮಾಡುವುದಲ್ಲದೇ 26 ಪದಾರ್ಥಗಳನ್ನು ತಯಾರು ಮಾಡುವ ವ್ಯವಸ್ಥೆ ನಂದಿನಿ ಮಾಡಿದೆ. ಒಂದು ಕಾಲದಲ್ಲಿ ಉತ್ತರ  ಕರ್ನಾಟಕದ ಒಕ್ಕೂಟಗಳು  ಬಹಳ ಕಟ್ಟ ಪರಿಸ್ಥಿತಿಯಲ್ಲಿದ್ದವು. ನಮ್ಮನ್ನು ಪ್ರತಿನಿಧಿಸುವವರು ಸರಿಯಾಗಿರಲಿಲ್ಲ ದರೆ ಏನಾಗುತ್ತದೆ ಎನ್ನಲು ಇದು ಉದಾಹರಣೆ.  ದಕ್ಷಿಣ ಕರ್ನಾಟಕದಲ್ಲಿ ಎಲ್ಲೆಡೆ ಪ್ರಾರಂಭವಾಯಿತು. ಇಲ್ಲಿನ ಘಟಕಗಳು ಸಾಯುತ್ತಿದ್ದವು. ಗುಜರಾತಿನ ಮದರ್ ಡೈರಿಯೊಂದಿಗೆ ಚರ್ಚಿಸಿ, 100 ಕೋಟಿ ರೂ.ಗಳ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿಸಲಾಯಿತು. ಅಂದಿನಿಂದ ಉತ್ತರ ಕರ್ನಾಟಕದ ಒಕ್ಕೂಟಗಳು ಚೇತರಿಸಿಕೊಂಡವು ಎಂದರು. ಈಗ 15-20 ದಿನಗಳೊಳಗೆ ರೈತರಿಗೆ ಹಣ ಪಾವತಿಯಾಗುತ್ತದೆ. ಒಕ್ಕೂಟದ ವ್ಯವಸ್ಥೆಯಿಂದ ಹೆಚ್ಚಿನ ದರ ನೀಡಿಉವ ವ್ಯವಸ್ಥೆಯೂ ಆಗಿದೆ, ಅದಕ್ಕೆ ಹಾವೇರಿ ಹಾಲು ಒಕ್ಕೂಟ ಉದಾಹರಣೆ ಎಂದರು.

3 ಲಕ್ಷ ಲೀ.ವರೆಗೆ ಏರಿಸಬೇಕು

2013 ರಿಂದ ಹೋರಾಟ ಮಾಡಿ ಹೊಸ ಹಾಲು ಒಕ್ಕೂಟ ಸ್ಥಾಪಿಸಲಾಯಿತು. ನೂರು ಕೋಟಿ ರೂ.ಗಳ ಮೆಗಾ ಡೈರಿಯನ್ನು ಸ್ಥಾಪನೆ ಮಾಡಲು ಅನುಮೋದನೆ ನೀಡಲಾಗಿದೆ. ಇದಕ್ಕೆ ಒಂದೂವರೆ ವರ್ಷದ ಕೆಳಗೆ ಪಿಪಿಪಿ ಮಾದರಿಯಲ್ಲಿ ಯು.ಹೆಚ್.ಟಿ ಘಟಕಕ್ಕೆ ಅಡಿಗಲ್ಲು ಹಾಕಲಾಗಿತ್ತು. ಇಂದು ಅದು ಪೂರ್ಣವಾಗಿ 70 ಸಾವಿರದಿಂದ 1 ಲಕ್ಷ ಲೀಟರ್ ವರೆಗೂ ಟೆಟ್ರಾ ಪ್ಯಾಕ್, ಏಳು  ಪದರವಿರುವ ಆರು, ತಿಂಗಳು ಬಳಸಬಹುದಾದ ಅತ್ಯುತ್ತಮ ತಂತ್ರಜ್ಞಾನ ಬಳಸಿ ಗುಡ್ ಲೈಫ್ ತಯಾರಿಸಲಾಗುತ್ತದೆ. ಈ ಘಕಟದಲ್ಲಿ 750 ಮಿ.ಲೀ ಹಾಗೂ ಒಂದು ಸಾವಿರ ಮಿ.ಲೀ ಸಾಮರ್ಥ್ಯವಿದೆ. ಬೇರೆ ಯಾವುದೇ ಭಾಗದಲ್ಲಿ 500 ಎಂ.ಎಲ್ ಗಿಂತ ಹೆಚ್ಚು ಉತ್ಪಾದಿಸುವ ಘಟಕವಿಲ್ಲ. ಆಟೋಮ್ಯಾಟಿಕ್ ಆಗಿ ಬದಲಾಯಿಸಬಹುದಾದ ತಂತ್ರಜ್ಞಾನದಿಂದ ಸಮಯವನ್ನೂ ಉಳಿಸಬಹುದಾಗಿದೆ.  ಸಪೂರ್ಣವಾಗಿ ಆಟೋಮ್ಯಾಟಿಕ್ ಆಗಿರುವ ಘಟಕ ಉದ್ಘಾಟನೆಯಾಗಿದೆ ಎಂದರು. 50 ಸಾವಿರ ಲೀಟರ್ ಸ್ಯಾಚೆಟ್, ಒಂದೂವರೆ ಲಕ್ಷ ಲೀಟರ್ ಹಾಲು ಒಂದು ದಿನಕ್ಕೆ ಸಂಸ್ಕರಣೆಯಾಗಿ ಪ್ಯಾಕೇಜ್ ಆಗುವ ಘಟಕ ಇದಾಗಿದೆ. ಇದನ್ನು ಒಂದೇ ವರ್ಷದಲ್ಲಿ 3 ಲಕ್ಷ ಲೀ.ವರೆಗೆ ಏರಿಸಬೇಕು. ರೈತರಿಗೆ ಒಳ್ಳೆ ದರವನ್ನು ಕೊಟ್ಟು, ಕ್ಷೀರ ಕ್ರಾಂತಿಯನ್ನು ಮಾಡಬೇಕು ಎಂದರು.  ಧಾರವಾಡ ಹಾಲು ಒಕ್ಕೂಟದವರು ಸಹಕಾರ ನೀಡಿದ್ದು ಅವರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.  

ಸಚಿವರಾದ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್, ಪ್ರಭು ಚೌಹಾಣ್, ಶಾಸಕ ನೆಹರೂ ಒಲೇಕಾರ್, ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ  ಅಧ್ಯಕ್ಷ ಬಸವರಾಜ ಆರಂಭಗೊಂಡ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


Post a Comment

أحدث أقدم