ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿದೆ: ಆರಗ ಜ್ಞಾನೇಂದ್ರ

 ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ದಾಖಲಾದ ಪ್ರಕರಣಗಳು ಮತ್ತು ಮಕ್ಕಳ ನಾಪತ್ತೆ ಪ್ರಕರಣಗಳು 2018 ರಿಂದ ಗಣನೀಯವಾಗಿ ಏರಿಕೆ ಕಂಡಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸೋಮವಾರ ಹೇಳಿದರು.

                                                         ಗೃಹ ಸಚಿವ ಆರಗ ಜ್ಞಾನೇಂದ್ರ

By : Rekha.M
Online Desk

ಬೆಂಗಳೂರು: ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ದಾಖಲಾದ ಪ್ರಕರಣಗಳು ಮತ್ತು ಮಕ್ಕಳ ನಾಪತ್ತೆ ಪ್ರಕರಣಗಳು 2018 ರಿಂದ ಗಣನೀಯವಾಗಿ ಏರಿಕೆ ಕಂಡಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸೋಮವಾರ ಹೇಳಿದರು.

ರಾಜ್ಯದಲ್ಲಿ ಪ್ರತಿವರ್ಷ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವಿಧಾನಪರಿಷತ್​ನಲ್ಲಿ ಪ್ರಶ್ನಿಸಿದ ಎಂಎಲ್​ಸಿ ಗೋವಿಂದರಾಜು ಅವರು ಕಳವಳ ವ್ಯಕ್ತಪಡಿಸಿದರು. 2022ರಲ್ಲಿ 3097 ಪೋಕ್ಸೋ ಪ್ರಕರಣಗಳು, 2021ರಲ್ಲಿ 2863 ಪೋಕ್ಸೋ ಕೇಸ್, 2020ರಲ್ಲಿ 2,166 ಪ್ರಕರಣಗಳು ದಾಖಲಾಗಿವೆ ಎಂದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ರಾಜ್ಯದಲ್ಲಿ 2018 ರಲ್ಲಿ 2,063 ಪೋಕ್ಸೊ ಪ್ರಕರಣಗಳು ದಾಖಲಾಗಿದ್ದು, ಈ ಸಂಖ್ಯೆ 2022ರ ವೇಳೆಗೆ 3,097 ಕ್ಕೆ ಏರಿಕೆಯಾಗಿದೆ. 2023 ಜನವರಿ ತಿಂಗಳಿನಲ್ಲಿ 207 ಪ್ರಕರಣಗಳು ದಾಖಲಾಗಿವೆ. ಇನ್ನು ಮಕ್ಕಳು ನಾಪತ್ತೆಯಾದ ಪ್ರಕರಣಗಳು 2018 ರಲ್ಲಿ 770 ದಾಖಲಾಗಿದ್ದರೆ, ಈ ಸಂಖಅಯೆ 2022ರ ವೇಳೆಗೆ 2,185ಕ್ಕೆ ಏರಿಕೆಯಾಗಿದೆ. 2023ರ ಜನವರಿ ತಿಂಗಳಿನಲ್ಲಿ 249 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಹಿಂದೆ ದಾಖಲಾದ ಪ್ರಕರಣಗಳು ಇದೀಗ ವರದಿಯಾದ ಹಿನ್ನೆಲೆಯಲ್ಲಿ ಸಂಖ್ಯೆಯಲ್ಲಿ ಹೆಚ್ಚಳಗಳು ಕಂಡು ಬಂದಿದೆ. ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದ್ದು, ಪೊಲೀಸ್ ಠಾಣೆಗಳಲ್ಲಿ ಮಹಿಳಾ ಕಾನ್‌ಸ್ಟೆಬಲ್‌ಗಳ ಸಹಾಯ ಕೇಂದ್ರಗಳ ತೆರೆಯಲಾಗಿದೆ. ಮಹಿಳಾ ಮತ್ತು ಮಕ್ಕಳ ಸಹಾಯವಾಣಿಗಳು ಕೂಡ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಪ್ರಕರಣಗಳನ್ನು ನೋಡಿಕೊಳ್ಳುತ್ತಿವೆ ಎಂದು ತಿಳಿಸಿದರು.

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. ನಿರ್ಭಯಾ ನಿಧಿಯಡಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ 3,200 ಸ್ಥಳಗಳಲ್ಲಿ 7,500 ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. ಪ್ರಕರಣ ದಾಖಲಾದ 60 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ ಎಂದರು.


Post a Comment

أحدث أقدم