ಭದ್ರಾವತಿ: ವಿಐಎಸ್ಎಲ್ ಉಳಿಸುವಂತೆ ಪಟ್ಟು ಹಿಡಿದ ಕಾರ್ಮಿಕರು: ಚುನಾವಣೆ ಬಹಿಷ್ಕಾರ-ಕಾರ್ಮಿಕರ ಎಚ್ಚರಿಕೆ!

 ಭದ್ರಾವತಿ: ವಿಐಎಸ್ಎಲ್ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಧೋರಣೆ ಇದೇ ರೀತಿ ಮುಂದುವರೆದರೆ ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನ ಕೈಗೊಳ್ಳಲಾಯಿತು.

   ಭದ್ರಾವತಿಯಲ್ಲಿ ಶುಕ್ರವಾರ ವಿಐಎಸ್ಎಲ್ ಕಾರ್ಖಾನೆ ಎದುರು ನಡೆದ ಪ್ರತಿಭಟನೆಯ ವೇಳೆ ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಚುನಾವಣೆ ಬಹಿಷ್ಕಾರ ವಿಚಾರ ಪ್ರಸ್ತಾಪಿಸಿದರು. ಈಗ ಚುನಾವಣೆ ಹತ್ತಿರ ಇರುವುದರಿಂದ ಕಾರ್ಖಾನೆ ಉಳಿಸುವ ಮಾತುಗಳನ್ನು ಸರ್ಕಾರ ಹೇಳುತ್ತಿದೆ ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಇಚ್ಛಾಶಕ್ತಿ ನಾಯಕರಿಗೆ ಇಲ್ಲ ಬರೀ ಭರವಸೆಯಲ್ಲಿಯೇ ದಿನಗಳನ್ನು ಕಳೆಯುತ್ತಿದ್ದಾರೆ  ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಖಾಯಂ ನೌಕರರರು, ಗುತ್ತಿಗೆ ನೌಕರರು, ನಿವೃತ್ತ ನೌಕರರು , ಆ ಪಕ್ಷ ಈ ಪಕ್ಷದ ಬೆಂಬಲಿಗರು ಎಂಬ ನೆಪದಲ್ಲಿ ಕಾರ್ಮಿಕರನ್ನು ಒಡೆದು  ಪ್ರತಿಭಟನೆಯ ಕಾವು ತಗ್ಗಿಸುವ ಕೆಲಸ ನಡೆದಿದೆ. ಕಾರ್ಖಾನೆ ಬಂದ್ ಮಾಡಿದಲ್ಲಿ ಕಾರ್ಮಿಕರು ಪ್ರತಿಭಟನೆ ಮಾಡದಂತೆ ತಡೆಯಲು ವಿಐಎಸ್ಎಲ್ ಆವರಣದಲ್ಲಿ ಆರ್ ಎ ಎಫ್ ತುಕಡಿಗೆ  ಅವಕಾಶ ನೀಡಲಾಗಿದೆ. ಇವೆಲ್ಲವೂ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ಎಂದು ಬೇಸರ ವ್ಯಕ್ತಪಡಿಸಿದರು.

   ವಿಐಎಸ್ಎಲ್ ಕಾರ್ಖಾನೆಗೆ ಬರಿ ರೂ 300  ರಿಂದ  400 ಕೋಟಿ ಕೊಟ್ಟರೆ ಮತ್ತೆ ಲಾಭದ ಹಳಿಗೆ ಬರುತ್ತದೆ. ಆದರೆ ಅದನ್ನು ಮಾಡುತ್ತಿಲ್ಲ. ಕಾರ್ಖಾನೆಯ ಆಸ್ತಿ ಮೇಲೆ  ಭೂ ಮಾಫಿಯಾದ ಕಣ್ಣು ಬಿದ್ದಿದೆ. ಈಗ ವಿಮಾನ ನಿಲ್ದಾಣ ಮಾಡುತ್ತಿದ್ದಾರೆ. ಖಾಸಗಿಯಾಗಿ ಇಲ್ಲಿಯೇ  ಇಂಡಸ್ಟ್ರಿಯಲ್ ಏರಿಯಾದಲ್ಲಿ  ರೋಲಿಂಗ್ ಮಿಲ್ ಮಾಡಿದ್ದಾರೆ. ತಮ್ಮ ವೈಯಕ್ತಿಕ ವಹಿವಾಟಿಗೆ  ತೊಂದರೆ ಆಗಲಿದೆ ಎಂಬ ಕಾರಣಕ್ಕೆ  ಬಿಜೆಪಿ ಮುಖಂಡರು  ಕಾರ್ಖಾನೆ ಉಳಿಸಲು ಮುಂದಾಗುತ್ತಿಲ್ಲ ಎಂದರು.

  ಇಲ್ಲಿಯೇ ಪಕ್ಕದ ಎಂಪಿಎಂ ಕಾರ್ಖಾನೆಯನ್ನು ಉಳಿಸುವುದಾಗಿ ಭರವಸೆ ನೀಡಿ ಸಾವಿರಾರು ಕಾರ್ಮಿಕ ಕುಟುಂಬಗಳನ್ನು  ಬೀದಿಗೆ ತಂದರು ಈಗ  ವಿಐಎಸ್ಎಲ್  ಗೂ ಇದೇ ಸ್ಥಿತಿ ತಂದು ಭದ್ರಾವತಿಯನ್ನು ಸ್ಮಶಾನ ಮಾಡಲಿದ್ದಾರೆ ಎಂದು ಹೇಳಿದರು.

    ವಿಐಎಸ್ಎಲ್ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಿ ರಾತ್ರಿ ಕಾರ್ಮಿಕರು ನಗರದಲ್ಲಿ ಪಂಜಿನ ಮೆರವಣಿಗೆ ಮಾಡಿದರು.

Post a Comment

أحدث أقدم