ಬೆಂಗಳೂರು : ರಾಜ್ಯ ಚುನಾವಣೆ ಹೊಸ್ತಿಲಿನಲ್ಲಿ ರಾಜಕೀಯ ಪಕ್ಷಗಳ ರಾಜಕೀಯ ಚಟುವಟಿಕೆಗಳು, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ, ಆರೋಪ ಮಾಡುವ ಪ್ರತಿಪಕ್ಷಗಳ ತಂತ್ರ ಮುಂದುವರಿದಿದೆ. ಇಂದು ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ಕರೆದರು.
ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಹಿಂದಿನಿಂದಲೂ ಭ್ರಷ್ಟಾಚಾರ, 40 ಪರ್ಸೆಂಟ್ ಕಮಿಷನ್ ಆರೋಪವಿದೆ. ಗುತ್ತಿಗೆ ಕಾಮಗಾರಿಯಲ್ಲಿ ಸಚಿವರು, ಶಾಸಕರು ಗುತ್ತಿಗೆದಾರರಿಂದ ಶೇಕಡಾ 40ರವರೆಗೆ ಕಮಿಷನ್ ಪಡೆಯುತ್ತಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಈ ಹಿಂದೆ ಆರೋಪಿಸಿದ್ದರು. ಈ ಆರೋಪದ ಮೇಲೆ ಕೆ ಎಸ್ ಈಶ್ವರಪ್ಪ ಸಚಿವ ಸ್ಥಾನ ಕಳೆದುಕೊಂಡರು. ಗುತ್ತಿಗೆದಾರರ ಸಂಘದ ಆರೋಪಕ್ಕೆ ಕಾಂಗ್ರೆಸ್ ಬೆಂಬಲವಿದೆ.
ಇಂದು ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ ಕೆ ಶಿವಕುಮಾರ್ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ತುರ್ತು ಸುದ್ದಿಗೋಷ್ಠಿ ಕರೆದು ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಆರೋಪಗಳ ಸುರಿಮಳೆಗೈದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯದ ಬೊಕ್ಕಸವನ್ನು ಸರ್ಕಾರವೇ ಲೂಟಿ ಮಾಡ್ತಿದೆ, ಯದ್ವಾತದ್ವಾ ಎಲ್ಲಾ ಪ್ರಾಜೆಕ್ಟ್ ಗಳಿಗೆ ಒಪ್ಪಿಗೆ ನೀಡುತ್ತಿದ್ದಾರೆ. ಜನರ ತೆರಿಗೆ ಹಣ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಟೆಂಡರ್ ಹಣ ಹೆಚ್ಚು ಮಾಡಿದ್ರೆ ಹೆಚ್ಚು ಕಮಿಷನ್ ನೀಡುತ್ತಿದ್ದಾರೆಂದು ಗುಡಿಗಿದರು.
ಮಂತ್ರಿಗಳು ಹೆಚ್ಚು ಕಮಿಷನ್ ಕೊಡುವವರಿಗೆ ಗುತ್ತಿಗೆ ಕೊಡುತ್ತಿದ್ದಾರೆ. 40 ಪರ್ಸೆಂಟ್ ಕಮಿಷನ್ ಹಗರಣದ ಮುಂದುವರೆದ ಭಾಗ ಇದು. ಕಾಂಟ್ರಾಕ್ಟರ್, ಅಧಿಕಾರಿಗಳಿಗೆ ವಾರ್ನ್ ಮಾಡ್ತಿದ್ದೇನೆ. ನಾವು ಇದನ್ನು ಲಾಜಿಕಲ್ ಎಂಡ್ಗೆ ತಗೆದುಕೊಂಡು ಹೋಗುತ್ತೇವೆ. ಕಾಂಟ್ರಾಕ್ಟರ್ಗಳು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕ್ತೀವಿ. ಯಾರನ್ನೂ ಬಿಡಲ್ಲ, ಎಲ್ಲರನ್ನೂ ಜೈಲಿಗೆ ಹಾಕ್ತೀವಿ. ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಕಾಮಗಾರಿಗಳ ತನಿಖೆ ಮಾಡಿಸ್ತೇವೆ. ಅಧಿಕಾರಕ್ಕೆ ಬಂದ ತಕ್ಷಣ 40% ಕಮಿಷನ್ ಹಗರಣ ತನಿಖೆ ಮಾಡಿಸುತ್ತೇವೆ ಎಂದರು.
ಒಂದೇ ದಿನದಲ್ಲಿ 18,000 ಕೋಟಿ ಬಿಲ್ ಆಗಿದೆ. ಬಿಜೆಪಿ ಎಂಎಲ್ಎ ಗೂಳಿಹಟ್ಟಿ ಶೇಖರ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಎಲೆಕ್ಷನ್ ಫಂಡ್ ರೈಸ್ ಮಾಡಲು ಟೆಂಡರ್ ಹಗರಣ ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಯಿಂದ ಸಾವಿರಾರು ಕೋಟಿ ಟೆಂಡರ್ ಅಕ್ರಮ ಬಯಲಿಗೆ ಬಂದಿದೆ ಎಂದು ಹೊಸ ಬಾಂಬ್ ಸಿಡಿಸಿದರು.
إرسال تعليق