ಕಾಸರಗೋಡು: ಯೂತ್ ಕಾಂಗ್ರೆಸ್ ಮುಖಂಡನ ಮೇಲೆ ಸಿಪಿಎಂ ಕಾರ್ಯಕರ್ತರಿಂದ ಹಲ್ಲೆ

 ಕಾಸರಗೋಡು: ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಕಾರ್ಯಕರ್ತರ ನಡುವಿನ ಸಂಘರ್ಷ ತಾರಕ್ಕೇರಿದ್ದು, ಯೂತ್ ಕಾಂಗ್ರೆಸ್ ಮುಖಂಡನ ಮೇಲೆ ಸಿಪಿಎಂ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.


 ಗುರುವಾರ ರಾತ್ರಿ ಸಿಪಿಎಂ ಕಾರ್ಯಕರ್ತರ ತಂಡವೊಂದು ಕಾಸರಗೋಡು ಯೂತ್ ಕಾಂಗ್ರೆಸ್ ಮುಖಂಡನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಯುವ ಕಾಂಗ್ರೆಸ್‌ ಕಾರ್ಯಕರ್ತ ಮಾರ್ಟಿನ್ ಜಾರ್ಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡು ಜಿಲ್ಲೆಯ ಕೊಡೋಮೆ ಎರುಮಕ್ಕುಳಂ ಎಂಬಲ್ಲಿ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ.

  ಕಾಂಗ್ರೆಸ್ ಮುಖಂಡರ ಪ್ರಕಾರ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲೋಮ್ ನಿವಾಸಿ ಮಾರ್ಟಿನ್ ಜಾರ್ಜ್ ಅವರು ಕಳ್ಳಿಯೋಟ್‌ನಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದಾಗ ಸಿಪಿಎಂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಅವರನ್ನು ಕಾಞಂಗಾಡ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವಿಶೇಷ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಹೇಳಿದ್ದಾರೆ.

  

 ಕೃಪೇಶ್ ಮತ್ತು ಶರತ್‌ಲಾಲ್ ಅವರ ಪುಣ್ಯಸ್ಮರಣೆಗಾಗಿ ಕಳ್ಳಿಯೋಟ್‌ನಲ್ಲಿ ಯುವ ಕಾಂಗ್ರೆಸ್ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾರ್ಟಿನ್ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಬಳಾಲ್‌ನ ಪಕ್ಷದ ಕಾರ್ಯಕರ್ತ ರಂಜಿತ್ ಅರಿಂಕಲ್ಲು ಅವರೊಂದಿಗೆ ಬೈಕ್‌ನಲ್ಲಿ ಮನೆಗೆ ವಾಪಸಾಗುತ್ತಿದ್ದ ವೇಳೆ ಹಲ್ಲೆ ಮಾಡಲಾಗಿದೆ. ಈ ವೇಳೆ ಮಾರ್ಟಿನ್ ಜೊತೆಗಿದ್ದ ರಂಜಿತ್ ಮೇಲೂ ಹಲ್ಲೆಯಾಗಿದೆ ಎಂದು ಹೇಳಲಾಗಿದೆ.

  ಮಾರ್ಟಿನ್ ಅವರ ತಲೆ ಹಾಗೂ ಕಿವಿಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಪಕ್ಷದ ಉನ್ನತ ನಾಯಕತ್ವದ ಒಪ್ಪಿಗೆ ಮೇರೆಗೆ ಸಿಪಿಎಂ ಮತ್ತು ಡಿವೈಎಫ್‌ಐ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
 

Post a Comment

أحدث أقدم