ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಮೂರು ವರ್ಷದ ಹಿಂದೆ ಒಂದು ಎಕರೆಗೆ ಲಕ್ಷ ಇದ್ದ ಭೂಮಿ ಬೆಲೆ ಈಗ ಒಂದು ಎಕರೆಗೆ 3.50 ಕೋಟಿ ರೂಪಾಯಿಗೆ ಸೇಲ್ಗೆ ಇಟ್ಟಿದ್ದಾರೆ. ಖಾತಾ ಭೂಮಿ ಜೊತೆಗೆ ಬಗರ್ಹುಕುಂ ಜಾಗಕ್ಕೂ ಬಂಗಾರದ ಬೆಲೆ ಬಂದಿದೆ. ಹಣ ಎಷ್ಟಾದರೂ ಪರವಾಗಿಲ್ಲ, ಭೂಮಿ ಕೊಟ್ಟರೆ ಸಾಕು ಅಂತಾ ಜಾಗ ಕೊಂಡು ಕೊಳ್ಳೋದಕ್ಕೆ ಪ್ರಭಾವಿ ರಾಜಕಾರಣಿಗಳು ಹಾಗೂ ಉದ್ಯಮಿಗಳು ಮುಗಿ ಬೀಳ್ತಿದ್ದಾರೆ.
ಸಂಗ್ರಹ ಚಿತ್ರಶಿವಮೊಗ್ಗ: ದಶಕದ ಹಿಂದೆ ಸಾವಿರದ ಲೆಕ್ಕದಲ್ಲಿದ್ದ ಭೂಮಿಯ ಅನಧಿಕೃತ ಮೌಲ್ಯ ಈಗ ಕೋಟಿ ರೂಪಾಯಿ ದಾಟಿದೆ. ಭೂಮಿಯನ್ನು ಕೇಳುವವರೇ ಇಲ್ಲದ ಪ್ರದೇಶದಲ್ಲಿಈಗ ಸಮೃದ್ಧ ತೋಟಗಳನ್ನು ಕಡಿದು ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ. ನಿನ್ನೆ ಮೊನ್ನೆವರೆಗೆ ಕಣ್ಣು ಹಾಯಿಸುವವರೆಗೆ ದಟ್ಟ ಹಸಿರು ಕಾಣುತ್ತಿದ್ದ ಜಾಗದಲ್ಲಿ ಕಾಂಕ್ರಿಟ್ ಕಟ್ಟಡಗಳು ಏಳಲಾರಂಭಿಸಿವೆ.
ಶಿವಮೊಗ್ಗ ವಿಮಾನ ನಿಲ್ದಾಣ ಸುತ್ತಮುತ್ತಲ ಪ್ರದೇಶ ಮತ್ತು ನಿಲ್ದಾಣವನ್ನು ಸಂಪರ್ಕಿಸುವ ನರಸಿಂಹರಾಜಪುರ ರಸ್ತೆ ಅಕ್ಕಪಕ್ಕದಲ್ಲಿ ದಿಢೀರನೆ ಆದ ಬದಲಾವಣೆ. ಬೆಂಗಳೂರು ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಬಳಿಕ ರಿಯಲ್ ಎಸ್ಟೇಟ್ ರಾತ್ರಿ ಬೆಳಗಾಗುವುದರೊಳಗೆ ಭೂಮಿಯ ಬೆಲೆಯನ್ನು ಗಗನಕ್ಕೆ ತಲುಪಿಸಿದಂತೆ, ಶಿವಮೊಗ್ಗ ವಿಮಾನ ನಿಲ್ದಾಣ ಪ್ರದೇಶದಲ್ಲೂಅದೇ ಕಥೆಯಾಗಿದೆ.
ರಿಯಲ್ ಎಸ್ಟೇಟ್ ದಾಳಿ
ವಿಮಾನ ನಿಲ್ದಾಣ ಕಾಮಗಾರಿ ಪುನಾರಂಭಗೊಂಡಾಗ ರಿಯಲ್ ಎಸ್ಟೇಟ್, ಬಂಡವಾಳ ಶಾಹಿಗಳು ಮತ್ತು ಕಪ್ಪು ಹಣ ಹೊಂದಿರುವವರ ಕಣ್ಣು ಈ ಭಾಗದ ಭೂಮಿ ಮೇಲೆ ಬಿದ್ದಿತು. ಈ ಭಾಗದ ಭೂಮಿ ಮೇಲೆ ಬಂಡವಾಳ ಹೂಡಿಕೆ ಮಾಡಲು ಹಾತೊರೆಯುತ್ತಿದ್ದಾರೆ. ನಿಲ್ದಾಣ ಉದ್ಘಾಟನೆ ಘೋಷಣೆಯಾದ ಬಳಿಕವಂತೂ ರಿಯಲ್ ಎಸ್ಟೇಟ್‌ನವರು ಅಕ್ಷರಶಃ ಈ ಭಾಗದ ಮೇಲೆ ದಾಳಿ ನಡೆಸಿದ್ದಾರೆ. ಬೆಲೆ ಎಷ್ಟಾದರೂ ಸರಿ ಭೂಮಿ ಬೇಕು ಎನ್ನುವವರಿಗೆ ರಿಯಲ್ ಎಸ್ಟೇಟ್‌ನವರು ಕೆಂಪು ಹಾಸು ಹಾಸಿ ಸ್ವಾಗತಿಸುತ್ತಿದ್ದಾರೆ.
ಪ್ರಭಾವಿಗಳ ಭೂಮಿಯಾಸೆ
ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು, ಈ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ಮೂರು ವರ್ಷದ ಹಿಂದೆ ಎಕರೆಗೆ 50 ಲಕ್ಷ ರೂ. ಬೆಲೆಗೆ ಮೂವರು ರೈತರ 10 ಎಕರೆ ತೋಟವನ್ನು ಖರೀದಿಸಿದ ಪ್ರಭಾವಿ ರಾಜಕಾರಣಿಯೊಬ್ಬರು ಈಗ ಎಕರೆಗೆ 3.50 ಕೋಟಿ ರೂ.ಗೆ ಭೂಮಿ ಮಾರಾಟಕ್ಕಿಟ್ಟಿದ್ದಾರೆ. ಪಕ್ಷಾತೀತವಾಗಿ ಬಹಳಷ್ಟು ರಾಜಕಾರಣಿಗಳು, ಪುಡಿರೌಡಿಗಳು ಅಲ್ಲಲ್ಲಿ ಭೂಮಿ ಖರೀದಿಸಿ ಸ್ಥಳೀಯ ರೈತರಿಗೆ ಕಿರುಕುಳ ನೀಡಲಾರಂಭಿಸಿದ್ದಾರೆ. ಆ ಮೂಲಕ ಅವರೂ ಭೂಮಿ ಮಾರಾಟ ಮಾಡಲಿ ಎಂಬುದು ಅವರ ಉದ್ದೇಶವಾಗಿದೆ.
ಕೊರ್ಲಹಳ್ಳಿ, ಸಂತೆಕಡೂರು, ಸೋಗಾನೆ, ನಿದಿಗೆ, ಭದ್ರಾವತಿ ತಾಲೂಕು ಕಲ್ಲಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಕಷ್ಟಪಟ್ಟು ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅಧಿಕ ಬೆಲೆಯ ಆಸೆ ತೋರಿಸಿ ಭೂಮಿ ಖರೀದಿಸುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತೆ ಅದನ್ನು ಎರಡು ಪಟ್ಟು ಅಧಿಕ ಬೆಲೆಗೆ ಹೊರಗಿನವರಿಗೆ ಮಾರಾಟ ಮಾಡುತ್ತಿದ್ದಾರೆ. ಕೇವಲ 10 ವರ್ಷದ ಹಿಂದೆ ಖಾತೆ ಭೂಮಿ ಎಕರೆಗೆ 1 ಲಕ್ಷ, ಬಗರ್ ಹುಕುಂಗೆ 20-30 ಸಾವಿರ ರೂ. ಇದ್ದ ಬೆಲೆ ಈಗ ಕೋಟಿ ರೂ. ದಾಟಿದೆ. ಖರೀದಿ ಭರಾಟೆ ಯಾವ ಪರಿ ಇದೆ ಎಂದರೆ ಒಬ್ಬರು ಭೂಮಿ ವ್ಯಾಪಾರ ಮಾಡಿ ಮುಂಗಡ ಪಾವತಿಸಿ ಹೋದರೆ ಮಾರನೆ ದಿನ ಮತ್ತೊಬ್ಬ ಅದಕ್ಕೆ ಶೇ.10, ಇನ್ನೊಬ್ಬ ಶೇ.15 ಸೇರಿಸಿಕೊಡುವ ಆಮಿಷವೊಡ್ಡುತ್ತಿದ್ದಾರೆ.
ಬರಿಗೈಯಾದ ರೈತರು
ಈಗಾಗಲೆ ಬಹಳಷ್ಟು ರೈತರು ಭೂಮಿ ಮಾರಾಟ ಮಾಡಿ ಪಡೆದುಕೊಂಡ ಕೈತುಂಬ ಹಣವನ್ನು ಅಷ್ಟೇ ಬೇಗ ಖಾಲಿ ಮಾಡಿಕೊಂಡು ಬರಿಗೈ ಆಗಿದ್ದಾರೆ. ಆದರೆ, ಅವರಿಂದ ಭೂಮಿ ಖರೀದಿಸಿದವರು ಅದಕ್ಕೆ ಎರಡು ಪಟ್ಟು ಅಧಿಕ ಮೊತ್ತಕ್ಕೆ ಮಾರಿಕೊಂಡು ಮತ್ತಷ್ಟು ಭೂಮಿ ಖರೀದಿಗೆ ಹಪಹಪಿಸುತ್ತಿದ್ದಾರೆ. ಹಾಗಂತ ಭೂಮಿ ಮಾರಾಟ ದರ ಹೆಚ್ಚಾಗಿಲ್ಲ. ರಿಯಲ್ ಎಸ್ಟೇಟ್‌ನವರು ಅನಧಿಕೃತವಾಗಿ ಅಧಿಕ ಬೆಲೆಯನ್ನು ಗಗನಕ್ಕೇರಿಸಿದ್ದಾರೆ. ಆ ಮೂಲಕ ಶಿವಮೊಗ್ಗ ಗ್ರಾಮಾಂತರವು ಮತ್ತೊಂದು ದೇವನಹಳ್ಳಿಯಾಗಲು ಹೊರಟಿದೆ.
ಭೂಮಿಯೂ ಪರಭಾರೆ
ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಯಾರಿಗೂ ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಖರೀದಿಸಿದರೂ ಭೂಮಿಗೆ ಮಾಲೀಕತ್ವ ಸಿಗುವುದಿಲ್ಲ. ಇದು ಗೊತ್ತಿದ್ದರೂ ದುರಾಸೆಯ ಜನರು ಯಾವುದೇ ದಾಖಲೆಗಳಿಲ್ಲದ ಬಗರ್ ಹುಕುಂ ಭೂಮಿಗೂ ಎಕರೆಗೆ 50-70 ಲಕ್ಷ ರೂ. ಬೆಲೆ ಕಟ್ಟಿ ಖರೀದಿಸಿ ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ರಸ್ತೆ, ಚರಂಡಿ, ಒಳಚರಂಡಿ, ನೀರಿನ ಸಂಪರ್ಕವಿಲ್ಲದ ಕಡೆಗೆ ಖರೀದಿಸಿದ್ದಕ್ಕೆ ಯಾವುದೇ ಅಧಿಕೃತ ದಾಖಲೆಯೂ ಇಲ್ಲದ ಅನಧಿಕೃತ ನಿವೇಶನಗಳನ್ನು 10-15 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಹೊರಗಿನವರು ಅದನ್ನು ಕಡಿಮೆ ದರ ಎಂಬ ಕಾರಣಕ್ಕೆ ಮುಗಿಬಿದ್ದು ಖರೀದಿಸುತ್ತಿದ್ದಾರೆ.
ಭೂಮಿ ಖರೀದಿಯು ಯಾವುದೋ ಉದ್ಯಮ ಸ್ಥಾಪನೆ, ವ್ಯಾಪಾರ ವಹಿವಾಟಿಗೆ ಬಳಕೆಯಾಗಿದ್ದರೆ ಅಭಿವೃದ್ಧಿ ಎನ್ನಬಹುದಿತ್ತು. ಆದರೆ, ರೈತರಿಂದ ಖರೀದಿಸಿದ ಬಹುತೇಕ ಭೂಮಿಯು ಬಡಾವಣೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಆದರೆ, ಅಲ್ಲಿ ಮನೆ ಕಟ್ಟಿಕೊಳ್ಳುವವರ ಸಂಖ್ಯೆ ಬಹಳ ಕಡಿಮೆ. ನಿವೇಶನಗಳ ಮೇಲೆ ಹೂಡಿಕೆ ಮಾಡಿದರೆ ಒಂದೆರಡು ವರ್ಷದಲ್ಲಿ ದುಪ್ಪಟ್ಟು ಮೊತ್ತ ಸಿಗುತ್ತದೆ ಎಂಬ ಲಾಭದ ಉದ್ದೇಶ ಇರುವವರೆ ಅಧಿಕವಾಗಿದ್ದಾರೆ.
ಗ್ರಾಮಸ್ಥರು ಹೈರಾಣ
ಹೊರಗಿನವರ ಭೂಮಿ ಆಸೆ ಮತ್ತು ಲಾಭದ ಹಪಹಪಿಗೆ ಸ್ಥಳೀಯ ಗ್ರಾಮಸ್ಥರು ಹೈರಾಣಾಗಿದ್ದಾರೆ. ತಮ್ಮ ಗದ್ದೆ-ತೋಟದ ಅಕ್ಕಪಕ್ಕದಲ್ಲಿ ಬಡಾವಣೆಗಳು ಬಂದ ಬಳಿಕ ಬೆಳೆಯನ್ನು ರಕ್ಷಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಖಾಲಿ ಬಡಾವಣೆಗಳಲ್ಲಿ ರಾತ್ರಿ ವೇಳೆ ನಗರದಿಂದ ಬರುವ ಪುಂಡರು ನಿತ್ಯ ಪಾನಗೋಷ್ಠಿ ನಡೆಸಿ ಜಗಳ-ಹೊಡೆದಾಡಿಕೊಳ್ಳುವುದು ಸಾಮಾನ್ಯವಾಗಿದೆ. ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು, ಪುಡಿಗಟ್ಟಿ ಬರಿಗಾಲಲ್ಲಿಓಡಾಡದಂತೆ ಮಾಡಲಾಗಿದೆ. ಪೇಟೆ ಮಂದಿಯ ಆರ್ಭಟಕ್ಕೆ ಸ್ಥಳೀಯ ಯುವಜನರು ದಾರಿ ತಪ್ಪುವ ಭೀತಿ ಎದುರಾಗಿದೆ.
ರಿಯಲ್ ಎಸ್ಟೇಟ್‌ನವರು ಈ ಭಾಗದಲ್ಲಿ ರೈತರಿಗೆ ಆಮಿಷವೊಡ್ಡಿ ಭೂಮಿ ಖರೀದಿ ಮಾಡಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಹೊರಗಿನವರು ಬಂದು ಭೂಮಿಯ ಬೆಲೆಯನ್ನು ದುಪ್ಪಟ್ಟುಗೊಳಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿಬಡಾವಣೆಗಳು ನಿರ್ಮಾಣವಾಗುತ್ತಿವೆ. ಈ ಬೆಳವಣಿಗೆಗಳು ಗ್ರಾಮೀಣರಲ್ಲಿಆತಂಕ ಸೃಷ್ಟಿಸಿವೆ.
إرسال تعليق