ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದೊಂದಿಗೆ ನೀಡುವ 2022ನೇ ಸಾಲಿನ ಪ್ರತಿಷ್ಠಿತ ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಖ್ಯಾತ ಬರಹಗಾರ್ತಿ ವೈದೇಹಿ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಜಾನಕಿ ಶ್ರೀನಿವಾಸಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
ಖ್ಯಾತ ಬರಹಗಾರ್ತಿ ವೈದೇಹಿ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದೊಂದಿಗೆ ನೀಡುವ 2022ನೇ ಸಾಲಿನ ಪ್ರತಿಷ್ಠಿತ ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಖ್ಯಾತ ಬರಹಗಾರ್ತಿ ವೈದೇಹಿ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಜಾನಕಿ ಶ್ರೀನಿವಾಸಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿಯು ಏಳು ಲಕ್ಷ ರೂಪಾಯಿ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ. ಈ ಪ್ರಶಸ್ತಿಯು ಜ್ಞಾನಪೀಠ ಪ್ರಶಸ್ತಿಗೆ ಸರಿಸಮಾನವಾದ ಕನ್ನಡ ನಾಡಿನ ಪ್ರಶಸ್ತಿಯೆಂದು ಪ್ರಖ್ಯಾತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಜಾನಕಿ ಶ್ರೀನಿವಾಸಮೂರ್ತಿ ಅವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರಾಗಿದ್ದು, ಸಣ್ಣಕತೆ, ಕಾವ್ಯ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ಅವರ ಸಮಗ್ರ ಕೊಡುಗೆಯನ್ನು ಪರಿಗಣಿಸುವ ಮೂಲಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ನೃಪತುಂಗ ಪ್ರಶಸ್ತಿಯ ಇತಿಹಾಸದಲ್ಲಿ ಈ ಬಾರಿ ಆಯ್ಕೆಗೊಂಡ ವೈದೇಹಿ ಅವರು ಎರಡನೆಯ ಮಹಿಳಾ ಸಾಹಿತಿಯಾಗಿದ್ದಾರೆ. 2012ರಲ್ಲಿ ಹಿರಿಯ ಬರಹಗಾರ್ತಿ ಸಾರಾ ಅಬುಬಕರ್ ಅವರಿಗೆ ನೀಡಲಾಗಿತ್ತು.
ಮಯೂರ ವರ್ಮ ಪ್ರಶಸ್ತಿಗೆ ಐವರು ಆಯ್ಕೆ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ನೃಪತುಂಗ ಹಾಗೂ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗಳನ್ನು ಆಯ್ಕೆ ಮಾಡಲಾಗಿದೆ. 2022ನೇ ಸಾಲಿನ ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ’ಗೆ 45 ವರ್ಷದೊಳಗಿನ ಐವರು ಯುವ ಪ್ರತಿಭಾವಂತರನ್ನು ಆಯ್ಕೆ ಮಾಡಲಾಗಿದೆ. ಗಡಿಭಾಗ ಕಾಸರಗೋಡಿನ ವಿದ್ಯಾರಶ್ಮಿ ಪೆಲತ್ತಡ್ಕ, ಗದಗ ಜಿಲ್ಲೆಯ ಗಜೇಂದ್ರಗಡದ ಹನುಮಂತ ಸೋಮನಕಟ್ಟಿ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಡಾ. ಸತ್ಯಮಂಗಲ ಮಹಾದೇವ ಹಾಗೂ ಹಾಸನದ ಬೇಲೂರು ರಘುನಂದನ ಅವರನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿಯು 25001 ನಗದು ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ.
إرسال تعليق