ಇತ್ತೀಚೆಗೆ ಕೇಂದ್ರ ಗೃಹ ಇಲಾಖೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆಯನ್ನು ನಿಷೇಧಿಸಿದೆ. ಈ ನಿಷೇಧಿತ ಸಂಘಟನೆ ದೇಶದಲ್ಲಿ ಕೋಮು ದ್ವೇಷ, ಉಗ್ರಗಾಮಿ ಚಟುವಟಿಕೆ ಮತ್ತು ಸಮಾಜದ ಸ್ವಾಸ್ಥ್ಯ ಕೆಡಿಸಿ ಅನಿಶ್ಚಿತತೆ ಹುಟ್ಟುಹಾಕುವ ಉದ್ದೇಶವನ್ನು ಹೊಂದಿದ್ದು 2047ಕ್ಕೆ ಭಾರತದಲ್ಲಿ ಇಸ್ಲಾಮ್ ಆಡಳಿತವನ್ನು ತರಬೇಕೆಂಬ ಮಹದಾಸೆಯನ್ನು ಹೊಂದಿದೆ ಎಂಬ ಆಘಾತಕಾರಿ ಮಾಹಿತಿ
ರಾಷ್ಟ್ರೀಯ ತನಿಖಾ ತಂಡದ ಸಾಂದರ್ಭಿಕ ಚಿತ್ರ
ನವದೆಹಲಿ: ಇತ್ತೀಚೆಗೆ ಕೇಂದ್ರ ಗೃಹ ಇಲಾಖೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆಯನ್ನು ನಿಷೇಧಿಸಿದೆ. ಈ ನಿಷೇಧಿತ ಸಂಘಟನೆ ದೇಶದಲ್ಲಿ ಕೋಮು ದ್ವೇಷ, ಉಗ್ರಗಾಮಿ ಚಟುವಟಿಕೆ ಮತ್ತು ಸಮಾಜದ ಸ್ವಾಸ್ಥ್ಯ ಕೆಡಿಸಿ ಅನಿಶ್ಚಿತತೆ ಹುಟ್ಟುಹಾಕುವ ಉದ್ದೇಶವನ್ನು ಹೊಂದಿದ್ದು 2047ಕ್ಕೆ ಭಾರತದಲ್ಲಿ ಇಸ್ಲಾಮ್ ಆಡಳಿತವನ್ನು ತರಬೇಕೆಂಬ ಮಹದಾಸೆಯನ್ನು ಹೊಂದಿದೆ ಎಂಬ ಆಘಾತಕಾರಿ ಮಾಹಿತಿ ಬಯಲಿಗೆ ಬಂದಿದೆ.
ಇದಕ್ಕಾಗಿ ಸಂಘಟನೆ ಗೌಪ್ಯ ತಂಡವನ್ನು ರಚಿಸಿ ಅದಕ್ಕೆ 'ಸರ್ವಿಸ್ ಟೀಮ್ಸ್' ಅಥವಾ 'ಕಿಲ್ಲರ್ ಸ್ಕ್ವಾಡ್' ಎಂದು ಹೆಸರನ್ನಿಟ್ಟಿದ್ದು ತನ್ನ ಗ್ರಹಿಕೆಯ ಶತ್ರುಗಳ ಮೇಲೆ ಗುರಿಯಾಗಿಟ್ಟುಕೊಂಡು ಅವರನ್ನು ಕೊಲ್ಲುವ ಉದ್ದೇಶ ಹೊಂದಿದೆ ಎನ್ನಲಾಗಿದೆ.
ಈ ಆಘಾತಕಾರಿ ಮಾಹಿತಿಯನ್ನು ಬಯಲಿಗೆಳೆದದ್ದು ರಾಷ್ಟ್ರೀಯ ತನಿಖಾ ತಂಡ(NIA). ನಿನ್ನೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಮುಂದೆ ರಾಷ್ಟ್ರೀಯ ತನಿಖಾ ತಂಡ, ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಪಟ್ಟಂತೆ 20 ಪಿಎಫ್ಐ ಸದಸ್ಯರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತು.
ಅದರಲ್ಲಿ ಈ ಆಘಾತಕಾರಿ ಅಂಶವನ್ನು ಎನ್ಐಎ ಹೊರಹಾಕಿದೆ. ಪಿಎಫ್ಐಯ ಈ ಸೇವಾ ತಂಡಗಳಿಗೆ ಶಸ್ತ್ರಾಸ್ತ್ರ, ಆಯುಧಗಳನ್ನು ನೀಡಿ ಯಾವ ರೀತಿ ದಾಳಿ ನಡೆಸಬೇಕು, ಕಣ್ಗಾವಲು ಯಾವ ರೀತಿ ಮಾಡಬೇಕು ಎಂದು ತರಬೇತಿ ನೀಡಲಾಗುತ್ತದೆ. ವ್ಯಕ್ತಿಗಳನ್ನು ಮತ್ತು ನಿಗದಿತ ಗುಂಪಿನ ನಾಯಕರನ್ನು, ತಂಡಗಳನ್ನು ಯಾವ ರೀತಿ ಗುರಿಯಾಗಿಸಿ ದಾಳಿ ನಡೆಸಬೇಕು ಎಂದು ತರಬೇತಿ ನೀಡಲಾಗುತ್ತದೆ.
ಈ ಸೇವಾ ತಂಡಗಳ ಸದಸ್ಯರು ಪಿಎಫ್ಐಯ ಹಿರಿಯ ನಾಯಕರು ನೀಡುವ ಸಲಹೆ ಸೂಚನೆಗಳ ಪ್ರಕಾರ ಸಮಾಜ ವಿರೋಧಿ ವಿಧ್ವಂಸಕ ಕೃತ್ಯಗಳು ಮತ್ತು ದಾಳಿಗಳನ್ನು ನಡೆಸಬೇಕು. ಇದಕ್ಕೆ ಪುಷ್ಠೀಕರಿಸುವಂತೆ ಪಿಎಫ್ಐ ಸದಸ್ಯರು ಮತ್ತು ನಾಯಕರ ಪಿತೂರಿ ರಹಸ್ಯ ಸಭೆಗಳನ್ನು ಇತ್ತೀಚೆಗೆ ಬೆಂಗಳೂರು ನಗರ, ಸುಳ್ಯ ಮತ್ತು ಬೆಳ್ಳಾರೆ ಪಟ್ಟಣಗಳಲ್ಲಿ ನಡೆಸಲಾಗಿತ್ತು. ಜಿಲ್ಲಾ ಸೇವಾ ತಂಡದ ಮುಖ್ಯಸ್ಥ ಮುಸ್ತಾಫ ಪೈಚಾರ್ ಅವರು ಯಾವ ರೀತಿ ಯಾರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಬೇಕು, ಯಾವ ಸಮುದಾಯವನ್ನು ಗುರಿಯಾಗಿಸಿಕೊಳ್ಳಬೇಕು ಎಂಬುದನ್ನು ಸೂಚಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಎನ್ಐಎ ತಿಳಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪೂರ್ವಯೋಜಿತ: ಪಿಎಫ್ ಐ ನಾಯಕರ ಸೂಚನೆ ಪ್ರಕಾರ ನಾಲ್ವರು ವ್ಯಕ್ತಿಗಳನ್ನು ಗುರುತಿಸಿ ಅವರ ಮೇಲೆ ದಾಳಿ ನಡೆಸಿ ಹಿಮ್ಮೆಟ್ಟಿಸಬೇಕು ಎಂಬುದಾಗಿದೆ. ಅವರಲ್ಲಿ ಓರ್ವ ವ್ಯಕ್ತಿ ಪ್ರವೀಣ್ ನೆಟ್ಟಾರು. ಅವರನ್ನು ಬೆಳ್ಳಾರೆಯ ಸಾರ್ವಜನಿಕ ರಸ್ತೆಯಲ್ಲಿ ಜನರು ನೋಡುನೋಡುತ್ತಿದ್ದಂತೆ ಶಸ್ತಾಸ್ತ್ರಗಳಿಂದ ಜುಲೈ 26ರಂದು ಹತ್ಯೆ ಮಾಡಲಾಗಿತ್ತು. ಈ ಮೂಲಕ ಅಲ್ಲಿ ನಿಗದಿತ ಸಮುದಾಯದ ಮೇಲೆ ಭಯ ಹುಟ್ಟಿಸುವ ವಾತಾವರಣವನ್ನು ಸೃಷ್ಟಿ ಮಾಡುವುದು ಪಿಎಫ್ಐ ಉದ್ದೇಶವಾಗಿತ್ತು.
ಪಿಎಫ್ಐನ 20 ಸದಸ್ಯರ ಮೇಲೆ ಎನ್ಐಎ ಆರೋಪಪಟ್ಟಿ ಸಲ್ಲಿಸಿದ್ದು ಅವರಲ್ಲಿ 6 ಮಂದಿ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಸಹಕರಿಸಿದವರು, ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಈಗಾಗಲೇ ಘೋಷಿಸಿದೆ.
ಕೇಂದ್ರ ಗೃಹ ಸಚಿವಾಲಯ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪಿಎಫ್ಐ ಸಂಘಟನೆ, ಅದರ ಸಹಚರ ಮತ್ತು ಅದರ ಜೊತೆ ಗುರುತಿಸಿಕೊಂಡಿರುವ ಸಂಘಟನೆಯನ್ನು 5 ವರ್ಷಗಳ ಕಾಲ ಕಾನೂನು ವಿರೋಧಿ ಚಟುವಟಿಕೆಗಳು(ತಡೆ)ಕಾಯ್ದೆ, 1967ರಡಿ ನಿಷೇಧಿಸಿತ್ತು.
إرسال تعليق