ಶಿವಮೊಗ್ಗ: ವಿವಿಧ ಬಗೆಯ ತಿಂಡಿ ತಿನಿಸುಗಳಿಂದ ಪ್ರಸಿಧ್ದಿಯಾಗಿರುವ ವೆಜ್ ಫುಡ್ ಕೋರ್ಟ್ ಇಲ್ಲಿಯವರೆಗೂ ತನ್ನ ಗುಣಮಟ್ಟದಿಂದಾಗಿ ಶಿವಮೊಗ್ಗ ಜನರ ನೆಚ್ಚಿನ ಉಪಹಾರ ಮಂದಿರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಫುಡ್ ಕೋರ್ಟ್ ನ ವಿರುದ್ದ ಜನರು ತಮ್ಮ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಫುಡ್ ಕೋರ್ಟ್ ನಲ್ಲಿ ಸಾರ್ವಜನಿಕವಾಗಿ ನಿರ್ಮಿಸಲಾಗಿರುವ ಶೌಚಾಲಯವನ್ನು ಬಳಸಲು ಬಿಡದೆ ಅದಕ್ಕೆ ಬೀಗ ಹಾಕಲಾಗಿದೆ. ಇದು ಸಾರ್ವಜನಿಕರಲ್ಲಿ ಕೊಂಚ ಆಕ್ರೋಶಕ್ಕೆ ಕಾರಣವಾಗಿದೆ.
ಶಿವಮೊಗ್ಗ ಜಿಲ್ಲೆಯು ಕರ್ನಾಟಕದಲ್ಲಿ ತನ್ನದೆ ಆದ ಸ್ಥಾನವನ್ನು ಪಡೆದಿದೆ. ಇಲ್ಲಿಗೆ ಪ್ರತಿದಿನ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಇಲ್ಲಿನ ವೆಜ್ ಫುಡ್ ಕೋರ್ಟ್ ಶಿವಮೊಗ್ಗ ಜನರಿಗಷ್ಟೆ ಅಲ್ಲದೇ ವಿವಿಧ ಕಡೆಗಳಿಂದ ಬರುವ ಪ್ರವಾಸಿಗರಿಗೂ ನೆಚ್ಚಿನ ಉಪಹಾರ ಮಂದಿರವಾಗಿದೆ. ಶಿವಮೊಗ್ಗ ನಗರದ ಎಲ್ಲಾ ವರ್ಗದ ಜನರಿಗೂ ಕೈಗೆಟಕುವ ದರದಲ್ಲಿ ಒಂದೇ ಸೂರಿನಡಿ ವಿವಿಧ ಬಗೆಯ ತಿಂಡಿ ತಿನಿಸುಗಳು ಸಿಗುವ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಬೀದಿ ಬದಿಯ ವ್ಯಾಪಾರಿಗಳು, ಕೆಲಸಕ್ಕೆ ಹೋಗುವ ಮಹಿಳೆಯರು, ಶಾಲೆಯ ಮಕ್ಕಳು, ಅಕ್ಕಪಕ್ಕದ ಗ್ರಾಮಗಳಿಂದ ಬರುವ ಜನರು ಉಪಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ. ಪ್ರತಿನಿತ್ಯವೂ ಜನರಿಂದ ತುಂಬಿರುತ್ತದೆ. ಆದರೆ ಇಲ್ಲಿನ ಶೌಚಾಲಯ ಸಮಸ್ಯೆಯಿಂದಾಗಿ ಕೆಲವು ದಿನಗಳಿಂದ ಜನರು ಅಸಮಾಧಾನದಿಂದ ಮಾತನಾಡುತ್ತಿದ್ದಾರೆ. ಸಾರ್ವಜನಿಕರಿಗೆ ಅನುಕೂಲಕ್ಕಾಗಿ ನಿರ್ಮಿಸಿರುವ ಶೌಚಾಲಯವನ್ನು ಫುಡ್ ಕೋರ್ಟ್ ನ ವ್ಯಾಪಾರಸ್ಥರು ಸಾರ್ವಜನಿಕರ ಬಳಕೆಗೆ ಕೊಡದೇ ಬೀಗ ಜಡಿದಿದ್ದಾರೆ. ಜನರು ಕೇಳಿದರೆ ಬೀಗ ನಮ್ಮ ಹತ್ತಿರವಿಲ್ಲ ಶೌಚಾಲಯ ನಿರ್ವಹಣೆಗೂ ನಮಗೂ ಸಂಬಂದವಿಲ್ಲ ಎಂದು ಅಸಡ್ಡೆಯಾಗಿ ಉತ್ತರಿಸುತ್ತಾರೆ. ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಮಸ್ಯೆಯ ಬಗ್ಗೆ ಸಂಬಂದಪಟ್ಟವರು ಕೂಡಲೇ ಗಮನಹರಿಸಿ ಸಾರ್ವಜನಿಕರ ಶೌಚಾಲಯವನ್ನು ಬಳಕೆಗೆ ನೀಡಬೇಕು ಇಲ್ಲವಾದರೆ ಫುಡ್ ಕೋರ್ಟ್ ಇಲ್ಲಿಯವರಿಗೂ ಗಳಿಸಿದ ಜನರ ಮೆಚ್ಚುಗೆಯನ್ನು ಕಳೆದುಕೊಳ್ಳುವಲ್ಲಿ ಸಂದೇಹವಿಲ್ಲ. ಇದು ಒಂದು ದಿನದ ಸಮಸ್ಯೆಯಲ್ಲ ಇಲ್ಲಿಗೆ ಬರುವ ಮಹಿಳೆಯರು, ಮಕ್ಕಳು ಪ್ರತಿನಿತ್ಯವೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
إرسال تعليق