ಗಡಿ ಮತ್ತು ಶೀತ ಪ್ರದೇಶಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುವ ಭಾರತೀಯ ವೀರ ಯೋಧರಿಗೆ ಬೆಚ್ಚಗಿರಲು ಹಾಗೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಮೂಲದ ರೇಷ್ಮೆ ಸಂಸ್ಥೆಯೊಂದು ರೇಷ್ಮೆ ಹೊದಿಕೆಯನ್ನು ಸಿದ್ಧಪಡಿಸುತ್ತಿದೆ.
ಸಂಗ್ರಹ ಚಿತ್ರ
ಬೆಂಗಳೂರು: ಗಡಿ ಮತ್ತು ಶೀತ ಪ್ರದೇಶಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುವ ಭಾರತೀಯ ವೀರ ಯೋಧರಿಗೆ ಬೆಚ್ಚಗಿರಲು ಹಾಗೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಮೂಲದ ರೇಷ್ಮೆ ಸಂಸ್ಥೆಯೊಂದು ರೇಷ್ಮೆ ಹೊದಿಕೆಯನ್ನು ಸಿದ್ಧಪಡಿಸುತ್ತಿದೆ.
ಸಂಸ್ಥೆಯ ಸಂಶೋಧಕರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜೊತೆಗೆ ಸೇರಿಕೊಂಡು ಯೋಧರಿಗೆ ರೇಷ್ಮೆ ಹೊದಿಕೆಯನ್ನು ಸಿದ್ಧಪಡಿಸುತ್ತಿದೆ.
ಹತ್ತಿ ಅಥವಾ ಪಾಲಿಪ್ರೊಪಿಲೀನ್, ಪಾಲಿಯೆಸ್ಟರ್ ಇರುವ ಹೊದಿಕೆಯನ್ನು ಯೋಧರಿಗೆ ನೀಡಲಾಗುತ್ತಿದೆ. ಇದು ಭಾರವೆನಿಸುತ್ತದೆ. ಪ್ರಸ್ತುತ ನಡೆಸುತ್ತಿರುವ ನಡೆದಿರುವ ಪ್ರಯೋಗದಲ್ಲಿ ರೇಷ್ಮೆ ಹೊದಿಕೆಯನ್ನು ಅಳವಡಿಸಲಾಗುತ್ತಿದ್ದು, ಇದು ಹಗುರವಾಗಿರಲಿದೆ ಹಾಗೂ ಯೋಧರು ಸಿಯಾಚಿನ್ ಗ್ಲೇಸಿಯರ್‌ನಂತಹ ಶೀತ ಸ್ಥಳಗಳಲ್ಲಿ ಮೈನಸ್ 18 ಡಿಗ್ರಿ ಸೆಲ್ಸಿಯಸ್‌ನಲ್ಲಿಯೂ ಬೆಚ್ಚಗರಲು ಸಹಾಯ ಮಾಡುತ್ತದೆ.
ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್‌ನ ರೇಷ್ಮೆ ವಿಭಾಗದ ಪ್ರಭಾರಿ ರಿಜಿಸ್ಟ್ರಾರ್ ಮತ್ತು ಮುಖ್ಯ ವಿಜ್ಞಾನಿ ಜಂಬುನಾಥ್ ಅವರು ಮಾತನಾಡಿ, ಒಂದು ವರ್ಷದ ಹಿಂದೆ ಪ್ರಯೋಗಗಳು ಪ್ರಾರಂಭವಾಗಿದ್ದವು. ಈ ಪ್ರಯೋಗ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ರೇಷ್ಮೆ ಹೊದಿಕೆಗಳು ಸಿದ್ಧವಾಗಲಿದೆ. ಇದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಜನರು, ವಿಶೇಷವಾಗಿ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ರಕ್ಷಣಾ ಸಿಬ್ಬಂದಿಗೆ ಉತ್ತಮ ಗುಣಮಟ್ಟದ ಕಂಬಳಿಗಳನ್ನು ತಯಾರಿಸಲು ಸಂಸ್ಥೆಯು ಕಲಸ ಮಾಡುತ್ತಿದೆ. ಇದಕ್ಕಾಗಿ ಒಂದೂವರೆ ಕೆಜಿ ರೇಷ್ಮೆಯನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಾಗರಿಕರಿಗೆ ನೀಡಲಾಗುವ ಹೊದಿಕೆಯಲ್ಲಿ ಬಳಸುವ ರೇಷ್ಮೆಯ ತೂಕವು 700 ಗ್ರಾಂನಿಂದ ಪ್ರಾರಂಭವಾಗುತ್ತದೆ. ಏಕೆಂದರೆ, ಈ ಹೊದಿಕೆಯಲ್ಲಿ ಇತರ ಕೆಲವು ವಸ್ತುಗಳನ್ನು ಕೂಡ ಬಳಸಲಾಗುತ್ತದೆ. ಇತರೆ ವಸ್ತುಗಳಿಗೆ ಹೋಲಿಕೆ ಮಾಡಿದರೆ, ರೇಷ್ಮೆ ಹೆಚ್ಚು ಬೆಚ್ಚಗಿರಿಸುತ್ತದೆ. ಹೀಗಾಗಿ ಹೊದಿಕೆಯಲ್ಲಿ ರೇಷ್ಮೆಯನ್ನು ಬಳಕೆ ಮಾಡಲಾಗುತ್ತಿದೆ. ಇದಕ್ಕೆ ನಿರ್ವಹಣೆಯ ಅಗತ್ಯವಿಲ್ಲ. ಸುಲಭವಾಗಿ ತೊಳೆಯಬಹುದು. ಸಾಗಿಸಲೂ ಕೂಡ ಸುಲಭವಾಗಿರುತ್ತದೆ, ಪರಿಸರ ಸ್ನೇಹಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಕರ್ನಾಟಕವು ವರ್ಷಕ್ಕೆ 11,000-12,000 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದಿಸುತ್ತದೆ, ಅದರಲ್ಲಿ 20 ಪ್ರತಿಶತ ತ್ಯಾಜ್ಯವಾಗಿದೆ. ಸಂಶೋಧಕರು ಕಂಬಳಿಗಳನ್ನು ತಯಾರಿಸಲು ಸ್ಪನ್ ರೇಷ್ಮೆ ಮತ್ತು ಹ್ಯಾಂಡ್ ಸ್ಪನ್ ರೇಷ್ಮೆಯಿಂದ 10-15 ಪ್ರತಿಶತ ತ್ಯಾಜ್ಯ ವಸ್ತುಗಳನ್ನು ಬಳಸುತ್ತಾರೆ. ಇದೇ ಉದ್ದೇಶಕ್ಕಾಗಿ ರಾಮನಗರ ಮತ್ತು ರಾಜ್ಯದ ಇತರ ಭಾಗಗಳಿಂದ ಹೆಚ್ಚಿನ ಪ್ರಮಾಣದ ರೇಷ್ಮೆಯನ್ನು ಚೀನಾಕ್ಕೆ ಕಳುಹಿಸಲಾಗುತ್ತಿದೆ.
ಪ್ರಸ್ತುತ, ಚೀನಾಕ್ಕೆ ರಫ್ತು ಮಾಡಲಾದ ರೇಷ್ಮೆಯನ್ನು ಕೊರಿಯಾ ಮತ್ತು ಬ್ರೆಜಿಲ್ ಮಾರುಕಟ್ಟೆಗಳ ಮೂಲಕ ಕಂಬಳಿಗಳ ರೂಪದಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದು ನಾವು ಅನ್ವೇಷಿಸಲು ಬಯಸುವ ಅಭಿವೃದ್ಧಿಶೀಲ ಉದ್ಯಮವಾಗಿದೆ. ಆದರೆ, ಸರ್ಕಾರಿ ಸಂಸ್ಥೆಯಾಗಿ ನಾವು ವಾಣಿಜ್ಯ ಕಾರ್ಯಾಚರಣೆಗಳಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ ಎಂದು ಮತ್ತೊಬ್ಬ ಅಧಿಕಾರಿ ವಿವರಿಸಿದ್ದಾರೆ.
إرسال تعليق