ಲೈವ್ ಸ್ಟ್ರೀಮಿಂಗ್ ಗೆ ವೇಳೆ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಪೊಲೀಸರ ಕಾರ್ಯವನ್ನು ಕೊರಿಯಾ ಯೂಟ್ಯೂಬರ್ ಹ್ಯೋಜಿಯಾಂಗ್ ಪಾರ್ಕ್ ಶ್ಲಾಘಿಸಿದ್ದಾರೆ.
ಕೊರಿಯಾ ಯೂಟ್ಯೂಬರ್ ಗೆ ಕಿರುಕುಳಮುಂಬೈ: ಲೈವ್ ಸ್ಟ್ರೀಮಿಂಗ್ ಗೆ ವೇಳೆ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಪೊಲೀಸರ ಕಾರ್ಯವನ್ನು ಕೊರಿಯಾ ಯೂಟ್ಯೂಬರ್ ಹ್ಯೋಜಿಯಾಂಗ್ ಪಾರ್ಕ್ ಶ್ಲಾಘಿಸಿದ್ದಾರೆ.
ಮುಂಬೈನ ಖಾರ್ ನಲ್ಲಿ(Khar) ಕೊರಿಯಾದ ಮಹಿಳಾ ಯೂಟ್ಯೂಬರ್ ನೇರ ಪ್ರಸಾರ ಮಾಡುವಾಗ ಆಕೆಯ ಬಳಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಓರ್ವ ಪುಂಡ ಆಕೆಗೆ ಮುತ್ತು ಕೊಡುವಂತೆ ಬಲವಂತ ಮಾಡಿದ್ದು ಇದರಿಂದ ವಿಚಲಿತಳಾದ ಆಕೆ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೂ ಬಿಡದ ಆತ ಆಕೆಯನ್ನು ಬೈಕ್ ಮೇಲೆ ಕೂರುವಂತೆ ಒತ್ತಾಯಿಸಿದ್ದ. ಈ ವೇಳೆ ಆಕೆ ಆತನಿಂದ ತಪ್ಪಿಸಿಕೊಂಡು ಮುಂದಕ್ಕೆ ಹೋಗಿದ್ದು, ಆಕೆಯನ್ನು ಮತ್ತೆ ಹಿಂಬಾಲಿಸಿದ ಇಬ್ಬರು ಡ್ರಾಪ್ ಮಾಡುತ್ತೇನೆ ಬಾ ಎಂದು ಕೂಗುತ್ತಾರೆ. ಆದರೆ, ಆಕೆ ಅದನ್ನು ನಿರಾಕರಿಸಿದ್ದು, ನನ್ನ ಮನೆ ಸಮೀಪದಲ್ಲಿಯೇ ಇದೆ.. ನಾನು ಹೋಗುತ್ತೇನೆ ಎನ್ನುತ್ತಾಳೆ. ಬಳಿಕ ಅವರು ಮುಂದಿನ ಸಾರಿ ಭೇಟಿಯಾಗೋಣ ಎಂದು ಹೇಳಿ ಹೊರಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೊಬೀನ್ ಚಾಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿ ಎಂದು ಗುರುತಿಸಲಾಗಿದೆ.
ಇದೀಗ ಪೊಲೀಸರ ಕ್ಷಿಪ್ರ ಕಾರ್ಯವನ್ನು ಶ್ಲಾಘಿಸಿರುವ ಯೂಟ್ಯೂಬರ್ ಹ್ಯೋಜಿಯಾಂಗ್ ಪಾರ್ಕ್, 'ನನಗೆ ಬೇರೆ ದೇಶದಲ್ಲಿಯೂ ಇಂತಹ ಕೆಟ್ಟ ಅನುಭವವಾಗಿತ್ತು. ಆದರೆ ಆ ಸಮಯದಲ್ಲಿ ನಾನು ಪೊಲೀಸರಿಗೆ ಕರೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಭಾರತದಲ್ಲಿ ಪೊಲೀಸರು ತುಂಬಾ ಕಾರ್ಯಪ್ರವೃತ್ತರಾಗಿದ್ದಾರೆ. ಕ್ಷಿಪ್ರವಾಗಿ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಂಡಿದ್ದಾರೆ. ನಾನು 3 ವಾರಗಳಿಗೂ ಹೆಚ್ಚು ಕಾಲ ಮುಂಬೈನಲ್ಲಿದ್ದೇನೆ, ಹೆಚ್ಚು ಕಾಲ ಉಳಿಯಲು ಯೋಜಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಂತೆಯೇ ಈ ಒಂದು ಕೆಟ್ಟ ಘಟನೆಯಿಂದ ನಾನು ವಿಚಲಿತಳಾಗಲು ಬಯಸುವುದಿಲ್ಲ.. ನನ್ನ ಸಂಪೂರ್ಣ ಪ್ರಯಾಣವನ್ನು ಹಾಳುಮಾಡಲು ಇದು ಕಾರಣವಾಗಬಾರದು. ಇತರ ದೇಶಗಳಿಗೆ ಅದ್ಭುತವಾದ ಭಾರತವನ್ನು ತೋರಿಸುವ ನನ್ನ ಉತ್ಸಾಹವನ್ನು ಹಾಳುಮಾಡಲು ನಾನು ಬಯಸುವುದಿಲ್ಲ ಎಂದೂ ಹ್ಯೋಜಿಯಾಂಗ್ ಪಾರ್ಕ್ ಹೇಳಿದ್ದಾರೆ.
ಇನ್ನು ಕಿರುಕುಳ ನೀಡಿದ ಇಬ್ಬರು ಆರೋಪಿಗಳನ್ನು ಬಂಧಿಸಿ 1 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
إرسال تعليق