ಮಂಗಳೂರು ಆಟೋ ಸ್ಫೋಟ ಪ್ರಕರಣ: ಆರೋಪಿ ಗುರುತಿಸಲು ಮಂಗಳೂರಿಗೆ ಆಗಮಿಸಿದ ಶಾರಿಕ್ ಕುಟುಂಬಸ್ಥರು

 ಮಂಗಳೂರಿನ ನಾಗುರಿಯಲ್ಲಿ ಶನಿವಾರ ಸಂಜೆ ಆಟೋ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟದ ಹಿಂದಿನ ರೂವಾರಿ ತೀರ್ಥಹಳ್ಳಿಯ ಶಾರಿಕ್‌ ಎನ್ನುವುದು ಬಹುತೇಕ ಖಚಿತವಾಗಿದೆ.

              ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರಿಕ್.

By : Rekha.M
Online Desk

ಮಂಗಳೂರು: ಮಂಗಳೂರಿನ ನಾಗುರಿಯಲ್ಲಿ ಶನಿವಾರ ಸಂಜೆ ಆಟೋ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟದ ಹಿಂದಿನ ರೂವಾರಿ ತೀರ್ಥಹಳ್ಳಿಯ ಶಾರಿಕ್‌ ಎನ್ನುವುದು ಬಹುತೇಕ ಖಚಿತವಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿರುವ ವ್ಯಕ್ತಿಯ ಫೋಟೊ ಇದೀಗ ಲಭ್ಯವಾಗಿದ್ದು, ಈ ಭಾವಚಿತ್ರಕ್ಕೂ ಶಾರಿಕ್‌ ತನ್ನ ತಂದೆಯ ಬಟ್ಟೆ ಶಾಪ್‌ನಲ್ಲಿರುವ ಚಿತ್ರಕ್ಕೂ ಬಹಳ ಹೋಲಿಕೆಗಳು ಕಂಡು ಬಂದಿದೆ. ಬಟ್ಟೆ ಅಂಗಡಿಯಲ್ಲಿದ್ದ ವ್ಯಕ್ತಿ ಈತನೇ ಎನ್ನುವುದು ಸ್ಪಷ್ಟವಾಗಿದೆ. ಆದರೆ, ಪೊಲೀಸರು ಸಂಪೂರ್ಣ ಮಹಜರ ಮಾಡಿ, ತನಿಖೆ ನಡೆಸಿದ ಬಳಿಕವಷ್ಟೇ ಈ ಕುರಿತು ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.

ಈಗಾಗಲೇ ಶಾರಿಕ್‌ನ ಮನೆಯವರನ್ನು ಮಂಗಳೂರಿಗೆ ಕರೆ ತರಲಾಗಿದ್ದು, ಶಾರಿಕ್ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ ಮುಲ್ಲೆರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಎರಡು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ದಾಳಿ ಮತ್ತು ವಿಚಾರಣೆಯ ವೇಳೆ ಶಿವಮೊಗ್ಗದ ಯಾಸಿನ್‌, ಮಂಗಳೂರಿನ ಮಾಜ್‌ ಮತ್ತು ತೀರ್ಥಹಳ್ಳಿಯ ಶಾರಿಕ್‌ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಯಾಸಿನ್‌ ಮತ್ತು ಮಾಜ್‌ನನ್ನು ಪೊಲೀಸರು ಬಂಧಿಸಿದ್ದರಾದರೂ ಶಾರಿಕ್‌ ತಪ್ಪಿಸಿಕೊಂಡಿದ್ದ.

ಶಾರಿಕ್‌ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿದ್ದು, ತೀರ್ಥಹಳ್ಳಿಯಲ್ಲಿದ್ದ ತಂದೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲವು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದು, ಬಳಿಕ ಶಾರಿಕ್‌ನೇ ಇದನ್ನು ಮುಂದುವರಿಸಿದ್ದ. ಈತ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ. ಶಿವಮೊಗ್ಗದ ಪೊಲೀಸರು ಉಗ್ರ ಚಟುವಟಿಕೆ ಮಾಡುತ್ತಿರುವವರ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ಶಾರಿಕ್‌ ತಲೆಮರೆಸಿಕೊಂಡಿದ್ದ. ಅಲ್ಲಿಂದ ಮುಂದೆ ಆತ ಯಾರ ಕೈಗೂ ಸಿಕ್ಕಿರಲಿಲ್ಲ.

ಅದೇ ಶಾರಿಕ್‌ ಈಗ ಮಂಗಳೂರಿನಲ್ಲಿ ಉಗ್ರ ಕೃತ್ಯಕ್ಕೆ ಮತ್ತೊಂದು ಸ್ಕೆಚ್‌ ಹಾಕುತ್ತಿದ್ದ ಎನ್ನುವುದು ಈಗ ಬಹುತೇಕ ಬಯಲಾಗಿದೆ.

ಆಟೊರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಹಿಡಿದುಕೊಂಡು ಹೋಗುತ್ತಿದ್ದ ವ್ಯಕ್ತಿ ಶೇಕಡಾ 50ರಷ್ಟು ಸುಟ್ಟ ಗಾಯಕ್ಕೊಳಗಾಗಿದ್ದಾನೆ. ಅವನಿಗೆ ಮಾತನಾಡಲು ಆಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಮೊದಲ ನೋಟಕ್ಕೇ ಆತ ಶಾರಿಕ್‌ ಎನ್ನುವುದು ಬಹುತೇಕ ಸ್ಪಷ್ಟವಾಗುತ್ತಿದೆ.

ಮಂಗಳೂರು ಗೋಡೆ ಬರಹದಲ್ಲೂ ಆರೋಪಿ ಭಾಗಿ
ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ಶಾರೀಕ್‌ನನ್ನು ಬಂಧಿಸಲಾಗಿತ್ತು. ಈತನಿಗೆ 8 ತಿಂಗಳು ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು.

ಈತ ತನ್ನ ಸಹಚರರಾದ ಮಾಜ್‌ ಹಾಗೂ ಸೈಯದ್‌ ಯಾಸೀನ್‌ಗೆ ಬಾಂಬ್‌ ತಯಾರಿಕೆ ತರಬೇತಿಯನ್ನು ಕೊಡುತ್ತಿದ್ದ ಎನ್ನಲಾಗಿದ್ದು, ಈ ಸಂಬಂಧ ಬಾಂಬ್‌ ತಯಾರಿಕೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಹಣವನ್ನೂ ಕೊಡುತ್ತಿದ್ದ ಎಂಬ ವಿಚಾರ ಬಯಲಾಗಿತ್ತು. ಶಿವಮೊಗ್ಗ ಸುತ್ತಮುತ್ತ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದನೇ ಎಂಬ ವಿಚಾರವಾಗಿ ತನಿಖೆ ನಡೆಯುತ್ತಿತ್ತು. ಆದರೆ, ಶಾರೀಕ್‌ ತಲೆಮರೆಸಿಕೊಂಡಿದ್ದ.


Post a Comment

أحدث أقدم