ಗಾಯಗೊಂಡ ಆನೆ ಮರಿ ನೋಡಿ ಮರುಗಿದ ರಾಹುಲ್‌ ಗಾಂಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ!

 ಭಾರತ್‌ ಜೋಡೋ ಯಾತ್ರೆಗೆ ವಿರಾಮ ನೀಡಿರುವ ಕಾರಣದಿಂದ ರಾಹುಲ್‌ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಾಗರಹೊಳೆಯಲ್ಲಿ ಮಂಗಳವಾರ ಸಫಾರಿಗೆ ತೆರಳಿದ್ದರು

               ಗಾಯಗೊಡ ಮರಿಯಾನೆ ತನ್ನ ತಾಯಿಯ ಜೊತೆ

By : Rekha.M
Online Desk

ಮೈಸೂರು: ಮೈಸೂರಿಗೆ ಆಗಮಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ಪುತ್ರ ರಾಹುಲ್ ಗಾಂಧಿ ಅವರೊಂದಿಗೆ ರೆಸಾರ್ಟ್‌ನಲ್ಲಿ  ವಾಸ್ತವ್ಯ ಹೂಡಿದ್ದು, ಹೆಗ್ಗಡದೇವನ ಕೋಟೆಯ ಭೀಮನಕೋಳಿ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ಕಬಿನಿ ಹಿನ್ನೀರಿನ ರೆಸಾರ್ಟ್‌ನಲ್ಲಿ ತಂಗಿರುವ ಸೋನಿಯಾ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಬೇಕಿತ್ತು, ಆದರೆ ದಸರಾ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಲಿಲ್ಲ.

ಭಾರತ್‌ ಜೋಡೋ ಯಾತ್ರೆಗೆ ವಿರಾಮ ನೀಡಿರುವ ಕಾರಣದಿಂದ ರಾಹುಲ್‌ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಾಗರಹೊಳೆಯಲ್ಲಿ ಮಂಗಳವಾರ ಸಫಾರಿಗೆ ತೆರಳಿದ್ದರು. ಆಗ, ತಾಯಿಯ ಜತೆಗಿದ್ದ ಆನೆ ಮರಿಯೊಂದು ತೀವ್ರವಾಗಿ ಗಾಯಗೊಂಡಿರುವುದನ್ನು ಕಂಡಿದ್ದರು. ಈ ಕುರಿತು ಮುಖ್ಯಮಂತ್ರಿಗೆ ಬುಧವಾರ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ನಾನು ಹಾಗೂ ಸೋನಿಯಾಗಾಂಧಿ ನಾಗರಹೊಳೆಗೆ ಭೇಟಿ ನೀಡಿದ್ದೆವು. ಈ ವೇಳೆ ತಾಯಿ ಆನೆಯೊಂದಿಗೆ ಮರಿಯಾನೆಯ ನರಳಾಟವಾಡುತ್ತಿತ್ತು. ಈ ತಾಯಿಯೊಂದಿಗಿದ್ದ ಗಾಯಾಳು ಮರಿಯಾನೆಯನ್ನು ನೋಡಿ ಸಂಕಟವಾಯಿತು. ಆ ಮರಿಯಾನೆಗೆ ಸೊಂಡಿಲು ಹಾಗೂ ಬಾಲದ ಗಾಯವಾಗಿದೆ. ಇದರಿಂದಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

‘ತಾಯಿಯ ಜತೆಗಿದ್ದ ಚಿಕ್ಕ ಆನೆ ಮರಿಯ ಬಾಲ ಮತ್ತು ಸೊಂಡಿಲಿಗೆ ಗಾಯಗಳಾಗಿವೆ. ಅದು ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ನಿಸರ್ಗ ಸಹಜವಾಗಿಯೇ ಪ್ರಕ್ರಿಯೆಗಳು ನಡೆಯಬೇಕು ಎಂಬ ಅಭಿಪ್ರಾಯ ಇದೆ. ಆದರೂ, ಅಳಿವಿನಂಚಿನಲ್ಲಿರುವ ಪ್ರಭೇದದ ಜೀವಿಗಳು ಮತ್ತು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಂತಹ ಅಭಿಪ್ರಾಯದ ಹೊರತಾಗಿ ಯೋಚಿಸಬೇಕಾಗುತ್ತದೆ. ಈ ಆನೆ ಮರಿಗೆ ತುರ್ತಾಗಿ ವೈದ್ಯಕೀಯ ನೆರವು ಬೇಕಿರುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಆನೆ ಮರಿಗೆ ಚಿಕಿತ್ಸೆ ನೀಡಿ, ಅದನ್ನು ರಕ್ಷಿಸುವ ವಿಚಾರದಲ್ಲಿ ರಾಜಕೀಯ ಗಡಿಗಳನ್ನು ಮೀರಿ ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಸರಿಯಾದ ಚಿಕಿತ್ಸೆ ಲಭಿಸಿದರೆ ಆ ಮರಿಯು ಜೀವಂತವಾಗಿ ಉಳಿಯುತ್ತದೆ ಎನ್ನುವ ವಿಶ್ವಾಸವಿದೆ. ಈ ಆನೆ ಮರಿಯ ಜೀವ ಉಳಿಸಲು ನೀವು ಸಕಾಲಕ್ಕೆ ನೆರವು ನೀಡುತ್ತೀರಿ ಎಂಬ ಭರವಸೆ ಇದೆ’ ಎಂದು ರಾಹುಲ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 


Post a Comment

أحدث أقدم