ನವದೆಹಲಿ: ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಈ ವಾರ ನ್ಯಾಯಮೂರ್ತಿ ಹೇಮಂತ್ ಗುಪ್ತಾ ನಿವೃತ್ತರಾಗುವ ಮೊದಲು ತನ್ನ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು 10 ದಿನಗಳ ಕಾಲ ವಾದವನ್ನು ಆಲಿಸಿದ ನಂತರ ಸೆಪ್ಟೆಂಬರ್ 22 ರಂದು ಈ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿತ್ತು.
‘ಸರ್ಕಾರಿ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು' ಎಂದು ಕೋರಲಾಗಿದ್ದ ಎಲ್ಲ ವೈಯಕ್ತಿಕ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ಸಾರಾಸಗಟಾಗಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ 22 ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಪೀಠ ಆರಂಭಿಸಿತ್ತು.
ಈ ಪೀಠದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಗುಪ್ತಾ ಅವರು ಅಕ್ಟೋಬರ್ 16 ರಂದು ನಿವೃತ್ತರಾಗಲಿರುವುದರಿಂದ ಈ ವಾರವೇ ಈ ಅರ್ಜಿಗಳ ತೀರ್ಪು ಪ್ರಕಟವಾಗುವ ನಿರೀಕ್ಷೆಯಿದೆ.
ಸುಪ್ರೀಂ ಕೋರ್ಟ್‌ನಲ್ಲಿ ವಾದದ ಸಮಯದಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ಹಲವಾರು ವಕೀಲರು, ಮುಸ್ಲಿಂ ಹುಡುಗಿಯರು ತರಗತಿಗೆ ಹಿಜಾಬ್ ಧರಿಸುವುದನ್ನು ತಡೆಯುವುದರಿಂದ ಅವರ ಶಿಕ್ಷಣದ ಹಕ್ಕು ಅಪಾಯಕ್ಕೆ ಸಿಲುಕುತ್ತದೆ ಮತ್ತು ಅವರು ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಬಹುದು ಎಂದು ಹೇಳಿದರು.
ಶಾಲಾ-ಕಾಲೇಜುಗಳಲ್ಲಿ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸುವ ರಾಜ್ಯ ಸರ್ಕಾರದ 2022ರ ಫೆಬ್ರವರಿ 5 ರ ಆದೇಶ ಸೇರಿದಂತೆ ವಿವಿಧ ಅಂಶಗಳ ಕುರಿತು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.
ಕೆಲವು ವಕೀಲರು ಈ ವಿಷಯವನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ವಾದಿಸಿದರು.
ಮಾರ್ಚ್ 15 ರಂದು ಕರ್ನಾಟಕದ ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಒಂದು ವಿಭಾಗವು ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು, ಇದು ಇಸ್ಲಾಂನಲ್ಲಿನ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ತೀರ್ಪು ನೀಡಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.
إرسال تعليق