ಒಂದಕ್ಕಿಂತ ಹೆಚ್ಚು ಕಡೆ ಸ್ಪರ್ಧೆಗೆ ಅಂಕುಶ

 

ನವದೆಹಲಿ,ಅ.೮- ಚುನಾವಣೆಯಲ್ಲಿ ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವ ಪ್ರಸ್ತಾಪವನ್ನು ಕೇಂದ್ರ ಚುನಾವಣಾ ಆಯೋಗ ಕೇಂದ್ರ ಕಾನೂನು ಸಚಿವಾಲಯದ ಮುಂದಿಟ್ಟಿದೆ. ಹೀಗಾಗಿ ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕಡೆ ಸ್ಪರ್ಧಿಸುವುದಕ್ಕೆ ಕಡಿವಾಣ ಬೀಳುವ ಸಾಧ್ಯತೆ ಇದೆ.
ಪ್ರಸ್ತುತ ಒಬ್ಬ ಅಭ್ಯರ್ಥಿ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶವಿದೆ. ಈಗ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಅಂಕುಶ ಹಾಕುವ ಸಂಬಂಧ ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ಕುಮಾರ್, ಕಾನೂನು ಸಚಿವ ಕಿರಣ್‌ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ.ಇತ್ತೀಚೆಗಷ್ಟೆ ೨೮೪ ಪಕ್ಷಗಳ ಪೈಕಿ ೨೫೩ ಪಕ್ಷಗಳನ್ನು ಮಾನ್ಯತೆ ಹಾಗೂ ನೋಂದಣಿ ಇಲ್ಲದ ಪಕ್ಷಗಳ ಪಟ್ಟಿಗೆ ಚುನಾವಣಾ ಆಯೋಗ ಸೇರಿಸಿದ ಬೆನ್ನಲ್ಲೆ ಒಬ್ಬ ವ್ಯಕ್ತಿ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ.
ಆರ್‌ಪಿ ಕಾಯ್ದೆಯ ಸೆಕ್ಷನ್ ೨೯ಎ ಅಡಿಯಲ್ಲಿ ಶಾಸನಬದ್ಧ ಅವಶ್ಯಕತೆಗಳ ಅನುಸಾರ ಪ್ರತಿ ರಾಜಕೀಯ ಪಕ್ಷವು ತನ್ನ ಹೆಸರು, ಮುಖ್ಯ ಕಚೇರಿ, ಪದಾಧಿಕಾರಿಗಳು, ವಿಳಾಸ ಮತ್ತು ಪ್ಯಾನ್‌ಕಾರ್ಡ್‌ಗಳಲ್ಲಿನ ಯಾವುದೇ ಬದಲಾವಣೆಯ ವಿಳಂಬವಿಲ್ಲದೆ ಆಯೋಗಕ್ಕೆ ತಿಳಿಸಬೇಕು.ಸಂಬಂಧಪಟ್ಟ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳು ನಡೆಸಿದ ಭೌತಿಕ ಪರಿಶೀಲನೆಯ ನಂತರ ಅಥವಾ ಅಂಚೆ ಪ್ರಾಧಿಕಾರದಿಂದ ನೋಂದಾಯಿತ ವಿಳಾಸಕ್ಕೆ ಕಳುಹಿಸಲಾದ ಪತ್ರಗಳು, ನೋಟಿಸ್‌ಗಳ ವರದಿಯಾಧಾರದ ಮೇಲೆ ಮಾನ್ಯತೆ ಇಲ್ಲದ ಪಕ್ಷಗಳು ಅಸ್ಥಿತ್ವದಲ್ಲಿಲ್ಲ ಎಂದು ಆಯೋಗ ತಿಳಿಸಿದೆ.೨೦೧೪ ರಿಂದ ೨೦೧೯ರ ವರೆಗೆ ನಡೆದ ರಾಜ್ಯ ಮತ್ತು ಲೋಕಸಭಾ ಚುನಾವಣೆಗಳಲ್ಲಿ ನೋಂದಾಯಿತವಲ್ಲದ ಪಕ್ಷಗಳು ಒಂದೇ ಒಂದು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಹೀಗಾಗಿ, ಈ ರಾಜಕೀಯ ಪಕ್ಷಗಳು ಸಕ್ರಿಯವಾಗಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ಚುನಾವಣೆ ಸಂದರ್ಭದಲ್ಲಿ ಕಪ್ಪುಹಣ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಿಗೆ ನೀಡುವ ಧನ ಸಹಾಯವನ್ನು ೨೦ ಸಾವಿರ ರೂ.ನಿಂದ ೨ ಸಾವಿರ ರೂ.ಗೆ ಇಳಿಸುವ ಪ್ರಸ್ತಾಪವನ್ನು ಹೊಂದಿದ್ದು, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ದುಂದುವೆಚ್ಚಕ್ಕೂ ಕಡಿವಾಣ ಹಾಕುವ ಬಗ್ಗೆ ಚುನಾವಣಾ ಆಯೋಗ ಪ್ರಸ್ತಾವನೆ ಸಲ್ಲಿಸಿದೆ.ಈ ಸಂಬಂಧ ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ಮಾಡುವ ಬಗ್ಗೆಯೂ ಚಿಂತನೆ ನಡೆಸಿದೆ. ಈ ಪ್ರಸ್ತಾವನೆಯ ಪ್ರಕಾರ ರಾಜಕೀಯ ಪಕ್ಷಗಳು ೨ ಸಾವಿರಕ್ಕಿಂತ ಕಡಿಮೆ ಹಣ ನಗದು ರೂಪದಲ್ಲಿ ಸ್ವೀಕರಿಸಿದರೆ ಅದಕ್ಕೆ ವರದಿ ಸಲ್ಲಿಸಬೇಕಾಗುತ್ತದೆ.೨೦ ಸಾವಿರಕ್ಕಿಂತ ಹೆಚ್ಚು ದೇಣಿಗೆ ಸ್ವೀಕರಿಸಿದರೆ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಬೇಕಾಗುತ್ತದೆ.
ಈ ಹಿಂದೆ ಆದಾಯ ತೆರಿಗೆ ಅಧಿಕಾರಿಗಳು ಮಾನ್ಯತೆ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ ವೇಳೆ ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ಪ್ರಕರಣಗಳು ಬೆಳಕಿಗೆ ಬಂದವು. ವಿತ್ತೀಯ ಕೊಡುಗೆಗಳ ಸಲ್ಲಿಕೆಗೆ ಸಂಬಂಧಿಸಿದ ನಿಯಮಗಳು ಮತ್ತು ಚುನಾವಣಾ ಕಾನೂನುಗಳನ್ನು ಉಲ್ಲಂಘಸಿದ್ದಕ್ಕಾಗಿ ಅವರ ವಿಳಾಸ ಮತ್ತು ಪದಾಧಿಕಾರಿಗಳ ಹೆಸರನ್ನು ನವೀಕರಿಸಲು ಮಾನ್ಯತೆ ಇಲ್ಲದ ಪಕ್ಷಗಳು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ೨೧೦೦ಕ್ಕೂ ಹೆಚ್ಚು ಘಟಕಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

Post a Comment

أحدث أقدم