ಇರಾನ್‌ನ ಪ್ರಯಾಣಿಕ ವಿಮಾನದಲ್ಲಿ ಬಾಂಬ್ ಇದೆ ಎಂಬ ಕರೆ ಕೆಲಕಾಲ ಭೀತಿ ಉಂಟು ಮಾಡಿತ್ತು. ಇದರಿಂದಾಗಿ ಭಾರತೀಯ ವಾಯುಪಡೆಗಳು ಅಲರ್ಟ್ ಆದವು. ಇದಕ್ಕೆ ಕಾರಣವಾಗಿದ್ದು ಆ ವಿಮಾನ ಭಾರತೀಯ ವಾಯುಗಡಿಪ್ರದೇಶದಲ್ಲಿದ್ದಾಗ...
ಸಾಂದರ್ಭಿಕ ಚಿತ್ರ
ನವದೆಹಲಿ: ಇರಾನ್‌ನ ಪ್ರಯಾಣಿಕ ವಿಮಾನದಲ್ಲಿ ಬಾಂಬ್ ಇದೆ ಎಂಬ ಕರೆ ಕೆಲಕಾಲ ಭೀತಿ ಉಂಟು ಮಾಡಿತ್ತು. ಇದರಿಂದಾಗಿ ಭಾರತೀಯ ವಾಯುಪಡೆಗಳು ಅಲರ್ಟ್ ಆದವು. ಇದಕ್ಕೆ ಕಾರಣವಾಗಿದ್ದು ಆ ವಿಮಾನ ಭಾರತೀಯ ವಾಯುಗಡಿಪ್ರದೇಶದಲ್ಲಿದ್ದಾಗ ಬೆದರಿಕೆ ಕರೆ ಬಂದಿದ್ದು. ಇಂದು ಬೆಳಗ್ಗೆ ಅಧಿಕಾರಿಗಳು ಅಲರ್ಟ್ ಆಗಿದ್ದು, ಭಾರತೀಯ ವಾಯುಪಡೆಯು ಯುದ್ಧವಿಮಾನಗಳನ್ನು ಹರಸಾಹಸಕ್ಕೆ ಪ್ರೇರೇಪಿಸುವಂತಾಯಿತು.
ಇರಾನ್‌ನ ಟೆಹ್ರಾನ್‌ನಿಂದ ಚೀನಾದ ಗುವಾಂಗ್‌ಝೌಗೆ ತೆರಳುತ್ತಿದ್ದ ಮಹಾನ್ ಏರ್ ವಿಮಾನವನ್ನು ಭಾರತದಲ್ಲಿ ಇಳಿಸಲು ಎರಡು ಆಯ್ಕೆಗಳನ್ನು ನೀಡಲಾಯಿತು. ಆದರೆ ಅದನ್ನು ನಿರಾಕರಿಸಿ ವಿಮಾನ ತನ್ನ ಪ್ರಯಾಣವನ್ನು ಮುಂದುವರೆಸಿದೆ ಎಂದು ವಾಯುಪಡೆ ತಿಳಿಸಿದೆ.
ಫೈಟರ್ ಜೆಟ್ ಗಳು ವಿಮಾನ ಸುರಕ್ಷಿತ ದೂರದವರೆಗೆ ಹಿಂಬಾಲಿಸಿದವು. ವಿಮಾನವು ಈಗ ಚೀನಾದ ವಾಯುಪ್ರದೇಶವನ್ನು ಪ್ರವೇಶಿಸಿದೆ ಎಂದು ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್‌ರಡಾರ್ ತೋರಿಸಿದೆ.
ಸೋಮವಾರ ಬೆಳಗ್ಗೆ 9.20ಕ್ಕೆ ಇರಾನ್‌ನ ತೆಹ್ರಾನ್‌ನಿಂದ ಚೀನಾಗೆ ತೆರಳುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ದೆಹಲಿ ಪೊಲೀಸರಿಗೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ದೆಹಲಿ ಎಟಿಸಿ ಬಾಂಬ್ ಬೆದರಿಕೆಯ ಕುರಿತು ಲಾಹೋರ್ ಏರ್ ಟ್ರಾಫಿಕ್ ಕಂಟ್ರೋಲ್ ಗೆ ಮಾಹಿತಿ ನೀಡಿತು. ಆ ಬಳಿಕ ಸರಣಿ ಹೈಡ್ರಾಮ ನಡೆದವು. ವಿಮಾನಕ್ಕೆ ದೆಹಲಿಯಲ್ಲಿ ಇಳಿಸಲು ಅನುಮತಿ ನಿರಾಕರಿಸಿ ಜೈಪುರಕ್ಕೆ ಹೋಗಲು ತಿಳಿಸಿದರೂ ಪೈಲಟ್ ನಿರಾಕರಿಸಿದರು. ಆಗ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳು ಅಖಾಡಕ್ಕೆ ಇಳಿದವು. ಅಂತಿಮವಾಗಿ ವಿಮಾನಕ್ಕೆ ಚಂಡೀಗಢದಲ್ಲಿ ಲ್ಯಾಂಡ್ ಮಾಡುವಂತೆ ಹೇಳಿದರೂ ಪೈಲಟ್ ಒಪ್ಪಲಿಲ್ಲ. ನಂತರ ನೇರವಾಗಿ ಚೀನಾ ಗಡಿಗೆ ವಿಮಾನ ಪ್ರವೇಶಿಸಿತು.
“ವಿಮಾನವನ್ನು ಜೈಪುರದಲ್ಲಿ ಮತ್ತು ನಂತರ ಚಂಡೀಗಢದಲ್ಲಿ ಇಳಿಸುವ ಆಯ್ಕೆಯನ್ನು ನೀಡಲಾಯಿತು. ಆದಾಗ್ಯೂ, ಪೈಲಟ್ ಎರಡು ವಿಮಾನ ನಿಲ್ದಾಣಗಳಲ್ಲಿ ಯಾವುದಾದರೂ ಒಂದು ಕಡೆಗೆ ತಿರುಗಿಸಲು ಇಷ್ಟವಿಲ್ಲ ಎಂದು ಘೋಷಿಸಿದರು” ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಬಾಂಬ್ ಭೀತಿಯನ್ನು ನಿರ್ಲಕ್ಷಿಸುವಂತೆ ಟೆಹ್ರಾನ್ ಕೇಳಿಕೊಂಡ ನಂತರ ವಿಮಾನವು ಚೀನಾದಲ್ಲಿನ ತನ್ನ ಗಮ್ಯಸ್ಥಾನದ ಕಡೆಗೆ ಪ್ರಯಾಣವನ್ನು ಮುಂದುವರೆಸಿತು.
إرسال تعليق