ಭಯೋತ್ಪಾದಕ ದಾಳಿಗೆ ಸಂಚು: ಹೈದರಾಬಾದ್ ನಲ್ಲಿ 3 ಶಂಕಿತ ಉಗ್ರರು ವಶಕ್ಕೆ!

 ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಆರೋಪದ ಮೇರೆಗೆ ಮೂವರು ಶಂಕಿತ ಉಗ್ರರನ್ನು ಹೈದರಾಬಾದ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

           ಸಾಂದರ್ಭಿಕ ಚಿತ್ರ

By : Rekha.M
Online Desk

ಹೈದರಾಬಾದ್: ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಆರೋಪದ ಮೇರೆಗೆ ಮೂವರು ಶಂಕಿತ ಉಗ್ರರನ್ನು ಹೈದರಾಬಾದ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಸಾರ್ವಜನಿಕ ಸಭೆಗಳನ್ನು ಗುರಿಯಾಗಿಸಿಕೊಂಡು ಗ್ರೆನೇಡ್‌ಗಳನ್ನು ಎಸೆಯಲು ಸಂಚು ರೂಪಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್ ನಗರ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಈ ಹಿಂದೆ ನಗರದಲ್ಲಿ ನಡೆದ ಹಲವು ಭಯೋತ್ಪಾದನಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಹೈದರಾಬಾದ್‌ನ ಮಲಕ್‌ಪೇಟ್ ನಿವಾಸಿ ಅಬ್ದುಲ್ ಜಾಹೇದ್ ಎಂಬಾತ ತನ್ನ ಪಾಕಿಸ್ತಾನಿ ಐಎಸ್‌ಐ ಜೊತೆಗಿನ ಸಂಪರ್ಕದೊಂದಿಗೆ ಈ ವಿಧ್ವಂಸಕ ದಾಳಿಗೆ ಸಂಚುರೂಪಿಸಿದ್ದ ಎಂದು ಹೇಳಲಾಗಿದೆ. ಭಯೋತ್ಪಾದನೆಗೆ ಸಂಚು ರೂಪಿಸಿದ್ದ ಎಂದು ನಂಬಲರ್ಹ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಸಾಮಾನ್ಯ ಜನರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸಲು ಹೈದರಾಬಾದ್‌ನಲ್ಲಿ ಸ್ಫೋಟಗಳ ಸಂಚು ರೂಪಿಸಿದ್ದರು ಎಂದು ಪೊಲೀಸರ ಅಧಿಕೃತ ಪ್ರಕಟಣೆ ತಿಳಿಸಿದೆ. 

2005 ರಲ್ಲಿ ಹೈದರಾಬಾದ್ ಸಿಟಿ ಪೊಲೀಸ್ ಕಮಿಷನರ್ ಟಾಸ್ಕ್ ಫೋರ್ಸ್ ಕಚೇರಿ ಬೇಗಂಪೇಟೆ ಮೇಲೆ ಆತ್ಮಾಹುತಿ ದಾಳಿ ಸೇರಿದಂತೆ ಹೈದರಾಬಾದ್‌ನಲ್ಲಿ ನಡೆದ ಹಲವಾರು ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಜಾಹೆದ್ ಪಾತ್ರವಿತ್ತು. ಅಲ್ಲದೆ ಆತ ಪಾಕಿಸ್ತಾನ ಗೂಢಚಾರಸಂಸ್ಥೆ ISIೃ ಮತ್ತು ಲಷ್ಕರ್ ಉಗ್ರ ಸಂಘಟನೆ LeT ಜೊತೆ ನಿಯಮಿತವಾಗಿ ಸಂಪರ್ಕದಲ್ಲಿದ್ದ ಎಂದು ಪ್ರಕಟಣೆ ತಿಳಿಸಿದೆ.

ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳ ಆದೇಶದ ಮೇರೆಗೆ ಈತ ಇತರೆ ಇಬ್ಬರು ಆರೋಪಿಗಳೊಂದಿಗೆ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ. ಆರೋಪಿಗಳಾದ ಸಮಿಯುದ್ದೀನ್ ಮತ್ತು ಮಾಜ್ ಹಸನ್ ಅವರನ್ನು ಇದೇ ಕಾರ್ಯಕ್ಕೆ ನೇಮಕ ಮಾಡಿಕೊಂಡಿದ್ದೆ ಎಂದು ಜಾಹೆದ್ ತನ್ನ ತಪ್ಪೊಪ್ಪಿಗೆಯಲ್ಲಿ ಬಹಿರಂಗಪಡಿಸಿದ್ದಾನೆ.

ಪೊಲೀಸ್ ಶೋಧದ ಸಮಯದಲ್ಲಿ, ತನ್ನ ಗುಂಪಿನ ಸದಸ್ಯರ ಮೂಲಕ ಸಾರ್ವಜನಿಕ ಸಭೆಗಳನ್ನು ಗುರಿಯಾಗಿಸಿಕೊಂಡು ಬಳಸಬೇಕಾಗಿದ್ದ ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Post a Comment

أحدث أقدم