ಮಳೆ ವಿಚಾರವಾಗಿ ಸರ್ಕಾರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಹಗುರವಾಗಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಬೋಟ್ ನಲ್ಲಿ ಓಡಾಡುವ ಸ್ಥಿತಿ ಬಂದಿದೆ ಎಂದಿದ್ದಾರೆ. ಅವರ ಟೀಕೆಗಳಿಗೆ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬಿ ಎಸ್ ಯಡಿಯೂರಪ್ಪ
ರಘುನಾಥಪುರ(ದೊಡ್ಡ ಬಳ್ಳಾಪುರ): ಮಳೆ ವಿಚಾರವಾಗಿ ಸರ್ಕಾರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಹಗುರವಾಗಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಬೋಟ್ ನಲ್ಲಿ ಓಡಾಡುವ ಸ್ಥಿತಿ ಬಂದಿದೆ ಎಂದಿದ್ದಾರೆ. ಅವರ ಟೀಕೆಗಳಿಗೆ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ನಡೆಯುತ್ತಿರುವ ಬಿಜೆಪಿ ಜನಸ್ಪಂದನ ಜನೋತ್ಸವ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇದ್ದಾರೆ. ಈ ಹಿಂದೆಯೇ ನಾನು ಸಿದ್ದರಾಮಯ್ಯನವರಿಗೆ ಸದನದಲ್ಲಿ ಉತ್ತರ ಕೊಟ್ಟಿದ್ದೇನೆ, ಈಗ ಮತ್ತೊಮ್ಮೆ ಹೇಳುತ್ತಿದ್ದೇನೆ, ಈ ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿರುವವರೆಗೆ ಕಾಂಗ್ರೆಸ್ ನ್ನು ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ಶಪಥ ಮಾಡುತ್ತಿದ್ದೇನೆ ಎಂದರು.
ಸಿದ್ದರಾಮಯ್ಯನವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಬೆಂಗಳೂರಿನಲ್ಲಿ ಬೋಟ್ ನಲ್ಲಿ ಓಡಾಡೋ ಪರಿಸ್ಥಿತಿ ಬಂದಿದೆ ಎಂದಾದರೆ ಯಾವ ಪ್ರಮಾಣದಲ್ಲಿ ಮಳೆ ಬಿದ್ದಿದೆ ಎಂಬ ಅರಿವು ಅವರಿಗಿರಬೇಕು. ಹಣಬಲ, ತೋಳ್ಬಲ, ಹೆಂಡಬಲದಿಂದ ಅಧಿಕಾರಕ್ಕೆ ಬರಬಹುದೆಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ ನವರಿಗೆ ಅದು ಸಾಧ್ಯವಿಲ್ಲ ಎಂದು ಜನರು ತೋರಿಸಿಕೊಟ್ಟಿದ್ದಾರೆ ಎಂದರು.
ಸಚಿವ ಸುಧಾಕರ್ ಪರಿಶ್ರಮದಿಂದ ಈ ಭಾಗದಲ್ಲಿ ಪಕ್ಷಕ್ಕೆ ಬಲ ಬಂದಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನನ್ನ ಜೀವನ ಬಹಳ ಸಮಯ ರೈತರಿಗೆ ಮೀಸಲಿಟ್ಟಿದ್ದೇನೆ. ನೇಕಾರರು, ರೈತರಿಗೆ ನಮ್ಮ ಸರ್ಕಾರದಿಂದ ಸಾಕಷ್ಟು ನೆರವು ನೀಡಿದ್ದೇವೆ. ಪ್ರಧಾನಿ ಮೋದಿಯವರಿಂದ ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದರು.
ಈಗಾಗಲೇ ಮುಖ್ಯಮಂತ್ರಿ ನಾನು, ತಾನು ಎಂದು ಮಾತನಾಡುತ್ತಿದ್ದೀರಿ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಭಾರತೀಯ ಜನತಾ ಪಾರ್ಟಿ ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸದಿಂದ ಹೇಳಿದರು.
إرسال تعليق