ಕಳೆದ ರಾತ್ರಿ ಬೆಂಗಳೂರಿನ ಡಾಲರ್ಸ್ ಕಾಲೊನಿಯ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿರುವ ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ಇಂದು ಬುಧವಾರ ಅವರ ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಡೆಯಲಿದೆ.
ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದ ಸಚಿವ ಉಮೇಶ್ ಕತ್ತಿಯವರ ಅಂತಿಮ ದರ್ಶನ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು
ಬೆಳಗಾವಿಗೆ ಅವರ ಪಾರ್ಥಿವ ಶರೀರ ಬಂದು ತಲುಪಲಿದೆ. ಬೆಳಗ್ಗೆ 10.30ರ ವರೆಗೆ ಶಿವಬಸವನಗರದ ನಿವಾಸದ ಎದುರು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 10.30ಕ್ಕೆ ಬೆಳಗಾವಿಯಿಂದ ಸಂಕೇಶ್ವರದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಎದುರು ಅಂತಿಮ ದರ್ಶನ. ಬಳಿಕ 12ಗಂಟೆಗೆ ಸ್ವಗ್ರಾಮ ಬೆಲ್ಲದ ಬಾಗೇವಾಡಿ ಗ್ರಾಮಕ್ಕೆ ಮೃತದೇಹ ರವಾನೆಯಾಗಲಿದೆ. 12ರಿಂದ ಸಂಜೆ ಐದು ಗಂಟೆವರೆಗೂ ಬೆಲ್ಲದ ಬಾಗೇವಾಡಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಸಂಜೆ 5 ಗಂಟೆಗೆ ಉಮೇಶ್ ಕತ್ತಿಯವರ ಜಮೀನಿನಲ್ಲಿ ತಂದೆ ತಾಯಿಯ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ತಿಳಿದುಬಂದಿದೆ.
ಬೆಳಗಾವಿಗೆ ಸಿಎಂ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ಸಂಪುಟ ಸಹೋದ್ಯೋಗಿಗಳು ಬೆಳಗಾವಿಗೆ ಇಂದು ತೆರಳಲಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಈಗಾಗಲೇ ಬೆಳಗಾವಿಗೆ ಹೊರಟಿದ್ದಾರೆ. ಉಮೇಶ್ ಕತ್ತಿಯವರಿಗೆ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ನಿನ್ನೆ ರಾತ್ರಿ ಗೊತ್ತಾದ ಕೂಡಲೇ ಬೆಂಗಳೂರು ಮಳೆಯ ಹಿನ್ನೆಲೆಯಲ್ಲಿ ನೈಟ್ ರೌಂಡ್ಸ್ ಮಾಡುತ್ತಿದ್ದ ಸಿಎಂ ಎಲ್ಲಾ ಕೆಲಸ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸಿ ಆಸ್ಪತ್ರೆಗೆ ಧಾವಿಸಿದರು.
ಕತ್ತಿಯವರ ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಯಡಿಯೂರಪ್ಪನವರು ಶಿವಮೊಗ್ಗದಿಂದ ಬೆಳಗಾವಿಯತ್ತ ಹೊರಟಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಷ್ಟೇ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಉಮೇಶ್ ಕತ್ತಿಯವರ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ನಾನು ಮತ್ತು ಸಚಿವ ಉಮೇಶ್ ಕತ್ತಿ ಸ್ನೇಹಿತರು, ನೇರ ನಡೆ ನುಡಿಯ ಉಮೇಶ್ ಕತ್ತಿ ಮಾತಿನಲ್ಲಿ ಕಠೋರವಾದರೂ ಮನಸ್ಸಿನಲ್ಲಿ ಒಳ್ಳೆಯವರು, ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನಾನೂ ಬೆಳಗಾವಿಗೆ ಹೋಗುತ್ತೇನೆ ಎಂದರು.
ಶಾಲಾ-ಕಾಲೇಜುಗಳಿಗೆ ರಜೆ: ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಇಂದು ರಜೆ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಒಂದು ದಿನ ಶೋಕಾಚರಣೆ: ಸಕಲ ಸರ್ಕಾರಿ ಗೌರವಗಳೊಂದಿಗೆ ಸಚಿವ ಉಮೇಶ್ ಕತ್ತಿಯವರ ಅಂತ್ಯಕ್ರಿಯೆ ನಡೆಯಲಿದ್ದು ಅವರ ನಿಧನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
إرسال تعليق