ಪ್ರಕೃತಿ ವಿರುದ್ಧದ ನಡೆಗೆ ತೆತ್ತ ಬೆಲೆ

 

ರಾಜ್ಯಾದ್ಯಂತ ಕಳೆದ ಎರಡು-ಮೂರು ದಿನಗಳಲ್ಲಿ ಸುರಿದ ಮಳೆಯು ಒಟ್ಟಾರೆ ವ್ಯವಸ್ಥೆಯ ಎಲ್ಲ ಹುಳುಕುಗಳನ್ನು ಬಯಲು ಮಾಡಿದೆ.

ಒತ್ತುವರಿ ಸಮಸ್ಯೆ ರಾಜಧಾನಿಯನ್ನು ಮಾತ್ರವಲ್ಲ, ರಾಜ್ಯದ ಉಳಿದ ಭಾಗಗಳನ್ನೂ ಕಾಡುತ್ತಿರುವುದು ಢಾಳಾಗಿ ಎದ್ದುಕಂಡಿದೆ. ಕಾಡು-ಮೇಡು, ನದಿ, ಹಳ್ಳ-ಕೊಳ್ಳ ಯಾವುದನ್ನೂ ಬಿಡದಂತೆ ಒತ್ತುವರಿ ಮಾಡಿರುವುದಕ್ಕೆ ಸಣ್ಣ ಸಣ್ಣ ಊರುಗಳಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ನೀರಿನ ಸಹಜ ಹರಿವಿನ ಮಾರ್ಗಗಳೆಲ್ಲ ಒಂದೋ ಒತ್ತುವರಿಯಾಗಿವೆ, ಇಲ್ಲದಿದ್ದರೆ ಹೂಳು ತುಂಬಿಕೊಂಡು ನಿಂತಿವೆ. ಹಳ್ಳ, ನದಿಗಳಲ್ಲಿ ಹರಿಯಬೇಕಿದ್ದ ಮಳೆ ನೀರು ಮನೆಗಳನ್ನು ಹುಡುಕಿಕೊಂಡು ಬಂದಿದೆ.

ಒಟ್ಟಾರೆ ಮನುಷ್ಯ ಪ್ರಕೃತಿಯ ವಿರುದ್ಧ ನಡೆದುಕೊಂಡಿದ್ದಕ್ಕೆ ಇಂದು ಬೆಲೆ ತೆರವಂತಾ ಗುತ್ತಿದೆ. ಇದನ್ನರಿತೇ ನಮ್ಮ ಹಿರಿಯರು ಪ್ರಕೃತಿಯನ್ನೇ ದೇವರೆಂದು ನಂಬಿ ಅದಕ್ಕೆ ಹೊಂದಿಕೊಂಡು ಹೋಗುತ್ತಿದ್ದರು. ಊರುಗಳು ಎತ್ತರವಾದ ಜಾಗದಲ್ಲಿ ಇರುತ್ತಿ
ದ್ದವು. ಊರಿನ ನೀರೆ ಹರಿದು ವ್ಯರ್ಥವಾಗದಂತೆ ಊರಾಚೆ ಒಂದು ಕೆರೆ,ಕೊಳ ಅಥವಾ ಕುಂಟೆ ಇರುತ್ತಿದ್ದವು. ಇವು ತುಂಬಿದ ಮೇಲೆ ಕೋಡಿಯ ನೀರು ಕಾಲುವೆ ಮುಖಾಂತರ ಮತ್ತೊಂದು ಹಳ್ಳಕ್ಕೊ, ಕೆರೆಗೊ ಸೇರುತ್ತಿತ್ತು.

ಬೇಸಿಗೆಯಲ್ಲಿ ಈ ನೀರಿನಿಂದ ಜೀವ ತಣಿಯುತ್ತಿತ್ತು. ಹೀಗೆ ಮಳೆಯ ಕಾಲ ದಲ್ಲಿ ನೀರನ್ನು ಕೂಡಿಟ್ಟುಕೊಂಡು ಬೇಸಿಗೆಯಲ್ಲಿ ಬಳಸಿಕೊಳ್ಳುತ್ತಿದ್ದರು. ಆದರೆ ಇಂದು ಕೆರೆಗಳೆ ಲೇಔಟ್‌ಗಳಾಗಿ ಮಾರ್ಪಾಡಾಗುತ್ತಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣ. ಆದ್ದರಿಂದ ಇನ್ಮುಂದಾದರೂ ಅಧಿಕಾರಿಗಳು, ರಾಜಕಾರಣಿಗಳು, ಸಾರ್ವಜನಿಕರು ಕೆರೆಗಳನ್ನು ಅಥವಾ ಮಳೆ ನೀರು ಹರಿಯುವ ಯಾವುದೇ ಮೂಲಗಳನ್ನು ಮುಚ್ಚುವ ದುಸ್ಸಾಹಸಕ್ಕೆ ಕೈಹಾಕಬಾರದು.

ಮಳೆ ನೀರಿಗೆ ಮೊದಲು ದಾರಿ ಬಿಟ್ಟು ಆಮೇಲೆ ನಗರ ಯೋಜನೆ ಸಿದ್ಧಪಡಿಸಿದರೆ ಅತಿವೃಷ್ಟಿಯನ್ನೂ ಅನಾವೃಷ್ಟಿಯನ್ನೂ ಅನಾಯಾಸವಾಗಿ ಎದುರಿಸಬಹುದು. ಆದ್ದರಿಂದ ಎಲ್ಲಿ ಕೆರೆ-ಕಟ್ಟೆ, ಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆಯೋ ಅದನ್ನೆಲ್ಲ ಸಮೀಕ್ಷೆ ನಡೆಸಿ, ಕಾಲಮಿತಿಯಲ್ಲಿ ತೆರವುಗೊಳಿಸಬೇಕು. ಹೂಳನ್ನು ತೆಗೆಸಿ ಕಾಲುವೆಗಳನ್ನು ಸುಸ್ಥಿತಿಯಲ್ಲಿಟ್ಟು ಮಳೆ ನೀರು ಸರಾಗವಾಗಿ ಹರಿಯಲು ಸನ್ನದ್ಧಗೊಳಿಸಿದರೆ ಮಾತ್ರ ಈ ಪ್ರವಾಹ ಪರಿಸ್ಥಿತಿಯಿಂದ ಬೆಂಗಳೂರು ಸೇರಿದಂತೆ ಮತ್ತಿತರ ನಗರ,
ಹಳ್ಳಿಗಳು ತಪ್ಪಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಪ್ರತಿ ಮಳೆ ಬಂದಾಗಲೂ ಭಯದ ವಾತಾವರಣದಲ್ಲೇ ಕಾಲ ಕಳೆಯಬೇಕಾದೀತು.




Post a Comment

أحدث أقدم