ಸಾರ್ವಜನಿಕವಾಗಿ ಮಹಿಳೆ ಮೇಲೆ ದುರ್ವರ್ತನೆ: ಕಾಂಗ್ರೆಸ್ ಸೇರಿ ವಿರೋಧ ಪಕ್ಷದ ನಾಯಕರಿಂದ ಟೀಕೆಯ ಸುರಿಮಳೆ, ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದೇನು?

ತಮ್ಮ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯನ್ನು ಪೊಲೀಸ್ ಸ್ಟೇಷನ್ ಗೆ ಎಳೆದುಕೊಂಡು ಬನ್ನಿ ಇವ್ಳನ್ನ, ಒದ್ದು ಒಳಗೆ ಹಾಕ್ತೀನಿ ನಿನ್ನನ್ನು ಎಂದು ಏಕವಚನದಲ್ಲಿ ಸಾರ್ವಜನಿಕವಾಗಿ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಬೈದಿರುವುದು ಇದೀಗ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

 

                            ಶಾಸಕ ಅರವಿಂದ ಲಿಂಬಾವಳಿ

By : Rekha.M
Online Desk

ಬೆಂಗಳೂರು: ತಮ್ಮ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯನ್ನು ಪೊಲೀಸ್ ಸ್ಟೇಷನ್ ಗೆ ಎಳೆದುಕೊಂಡು ಬನ್ನಿ ಇವ್ಳನ್ನ, ಒದ್ದು ಒಳಗೆ ಹಾಕ್ತೀನಿ ನಿನ್ನನ್ನು ಎಂದು ಏಕವಚನದಲ್ಲಿ ಸಾರ್ವಜನಿಕವಾಗಿ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಬೈದಿರುವುದು ಇದೀಗ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕರು ಶಾಸಕ ಅರವಿಂದ ಲಿಂಬಾವಳಿಯನ್ನು ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ.

ತಾವು ಮಹಿಳೆಗೆ ಬೈದಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ಅರವಿಂದ ಲಿಂಬಾವಳಿ, ನನ್ನ ಬಳಿ ಬಂದ ಮಹಿಳೆ ಸರ್ಕಾರಿ ಜಾಗ ಅತಿಕ್ರಮಿಸಿ ಅಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಆಕೆ ಕಾಂಗ್ರೆಸ್​ ಕಾರ್ಯಕರ್ತೆ. ಕಾಂಗ್ರೆಸ್​ ಕಾರ್ಯಕರ್ತರು ನನ್ನ ವಿರುದ್ಧ ಧರಣಿ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್​ ಪಕ್ಷದವರು ಅಕ್ರಮಕ್ಕೆ ಬೆಂಬಲಿಸುತ್ತಿದ್ದಾರೆ. ದರ್ಪ, ಹಲ್ಲೆ ಸೇರಿದಂತೆ ಏನ್ ಬೇಕಾದರೂ ಪದ ಬಳಸಿಕೊಳ್ಳಲಿ. ಅಕ್ರಮವಾಗಿ ರಾಜಕಾಲುವೆ ಮೇಲೆ ಮನೆ ಕಟ್ಟಿಕೊಂಡಿದ್ದಾರೆ. ಅಕ್ರಮ ಕಟ್ಟಡವನ್ನು ಮೊದಲು ತೆರವು ಮಾಡಲಿ, ನಾನು ಮಹಿಳೆಗೆ ಕೇಳಿದ್ದು ಅದನ್ನೇ ಎಂದಿದ್ದಾರೆ.

ಶಾಸಕರು ಕ್ಷಮೆ ಕೇಳಬೇಕು: ಶಾಸಕರ ಆರೋಪಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ ರೂತ್ ಮೇರಿ ಸಗಾಯಿ, ನಾವು ನ್ಯಾಯಯುತವಾಗಿ ಮನೆ ನಿರ್ಮಿಸಿಕೊಂಡಿದ್ದೇವೆಯೇ ಹೊರತು ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿಲ್ಲ, ನನ್ನಲ್ಲಿರುವ ದಾಖಲೆಗಳೆಲ್ಲವೂ ಸರಿಯಾಗಿದೆ. ನಾನು ಸಮಸ್ಯೆ ಹೇಳಿಕೊಂಡು ಹೋದರೆ ಶಾಸಕರ ದರ್ಪವಾಗಿ ನಡೆದುಕೊಂಡಿದ್ದಾರೆ. ನ್ಯಾಯ ಕೇಳಲು ಹೋದ ನನ್ನ ಮೇಲೆ ಗಲಾಟೆಗೆ ಮುಂದಾಗಿದ್ರು. ಶಾಸಕರು ನನ್ನ ಮೇಲೆ ಹಲ್ಲೆಗೆ ಕೂಡ ಮುಂದಾಗಿದ್ದರು. ಪೊಲೀಸ್​ರನ್ನ ಕರೆದು ಅರೆಸ್ಟ್ ಮಾಡಿ ಇವಳನ್ನು ಅಂದ್ರು. ನಾನೇ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡಿದರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರು. ನನಗೆ ನ್ಯಾಯ ಬೇಕು ಎಂದು ಒತ್ತಾಯಿಸಿದ್ದಾರೆ.

ನನ್ನನ್ನು ಪದೇ ಪದೇ ಜೈಲಿಗೆ ತಳ್ಳುವಂತೆ ಶಾಸಕ ಲಿಂಬಾವಳಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ನಿಮಗೆ ಏನಾದರೂ ಗೌರವವಿದೆಯೇ ಜಮೀನು ಒತ್ತುವರಿ ಮಾಡಿ ಈಗ ಎಂಎಲ್ ಎ ಮುಂದೆ ಬಂದಿದ್ದೀರಿ. ನನ್ನನ್ನು ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗುವಂತೆ ಪೊಲೀಸರನ್ನು ಕೇಳಿದರು ಎಂದು ಮಹಿಳೆ ಆರೋಪಿಸಿದ್ದಾರೆ.

1971 ರಲ್ಲಿ ತಾವು ಕಟ್ಟಿದ ಮನೆಯನ್ನು ಬಿಬಿಎಂಪಿ ನೆಲಸಮ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಾರ್ಯಕರ್ತೆ ಆರೋಪಿಸಿದ್ದಾರೆ. ಸಾರ್ವಜನಿಕವಾಗಿ ಒಬ್ಬ ಶಾಸಕರು ಈ ರೀತಿ ತಮ್ಮೊಂದಿಗೆ ವರ್ತಿಸಿದ್ದು ಸರಿಯಲ್ಲ ಎಂಬುದು ಮಹಿಳೆಯ ವಾದವಾಗಿದೆ.

ಪ್ರತಿಪಕ್ಷದವರ ಟೀಕೆ: ಇದೀಗ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ವಿರೋಧ ಪಕ್ಷದ ನಾಯಕರು ಶಾಸಕರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ. 

ಈ ಘಟನೆಯನ್ನು ರಾಜ್ಯ ಮಹಿಳಾ ಆಯೋಗ ಪರಿಗಣಿಸಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ. ಶಾಸಕರು ಮಹಿಳೆಯೊಂದಿಗೆ ಆ ರೀತಿ ಮಾತನಾಡಬಾರದಿತ್ತು, ಇದು ಅನಾಗರಿಕ ವರ್ತನೆ, ಮಹಿಳೆ ವಿರುದ್ಧ ಏಕವಚನ ಬಳಸಿ ಜೈಲಿಗೆ ಹಾಕುವಂತೆ ಬೆದರಿಕೆ ಹಾಕಿದ್ದಾರೆ.ಇದನ್ನೆಲ್ಲಾ ಮಾತನಾಡಲು ಇವರು. ಬಿಜೆಪಿ ನಾಯಕರ ನಡವಳಿಕೆ ಅಹಂಕಾರದ್ದು ಎಂದು ಆಕ್ರೋಶ ಹೊರಹಾಕಿದ್ದಾರೆ. 

ಸರ್ಕಾರಿ ನೌಕರಿ ಪಡೆಯಬೇಕೆಂದರೆ ಮಹಿಳೆಯರು ಬಿಜೆಪಿ ಸರ್ಕಾರದಲ್ಲಿ ಮಂಚ ಏರಲು ಸಿದ್ಧರಿರಬೇಕು ಎಂದು ತಾವು ಹೇಳಿದ್ದ ಮಾತಿಗೆ ಅಂದು ಟೀಕಿಸಿದ್ದ, ವಿರೋಧಿಸಿದ್ದ ಬಿಜೆಪಿ ನಾಯಕರು ಇಂದು ಎಲ್ಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಮತ್ತು ಕೆಪಿಸಿಸಿ ಮಾಧ್ಯಮ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಶಾಸಕ ಲಿಂಬಾವಳಿ ರೌಡಿಯೇ, ಅರ್ಜಿ ಸ್ವೀಕರಿಸುವ, ಅಹವಾಲು ಆಲಿಸುವ ತಾಳ್ಮೆ ಅವರಿಗಿಲ್ಲ ಎಂದರು.

ಸ್ತ್ರೀ ಉದ್ಧಾರಕರಂತೆ ಕೇವಲ ಬೂಟಾಟಿಕೆಯ ಮಾತಾಡುವ ಬಿಜೆಪಿಗರೇ, ನಿಮ್ಮ ಪಕ್ಷದ ಅರವಿಂದ ಲಿಂಬಾವಳಿಯವರು ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ರೀತಿ ಅಕ್ಷಮ್ಯ ಎಂದು ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ. 

ಈ ಮಧ್ಯೆ, ಕಂದಾಯ ಇಲಾಖೆ ಅಧಿಕಾರಿ ಪಾರ್ಥಸಾರಥಿ, ತಮ್ಮ ಕರ್ತವ್ಯಕ್ಕೆ ಮಹಿಳೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Post a Comment

أحدث أقدم